ಕುಶಾಲನಗರ, ಜೂ ೧೭: ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್ ಸೆಂಟರ್(ಎನ್.ಟಿ.ಸಿ) ಆಶ್ರಯದಲ್ಲಿ ವಿಶ್ವ ಮಹಿಳಾ ದಿನ ಮತ್ತು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಎನ್‌ಟಿಸಿ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಡಯಟ್ ಸಂಸ್ಥೆ ಹಿರಿಯ ಉಪನ್ಯಾಸಕಿ ಬಿ.ಎನ್ ಪುಷ್ಪಾ ಉದ್ಘಾಟಿಸಿದರು.

ಮಹಿಳಾ ಸಬಲೀಕರಣ, ಮಹಿಳಾ ಸಮಾನತೆ ವಿಚಾರದ ಬಗ್ಗೆ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಮಾತನಾಡಿದ ಅವರು, ಕುಟುಂಬ ನಿರ್ವಹಣೆ ಹಾಗೂ ವೃತ್ತಿ ಜೀವನದಲ್ಲಿ ಮಹಿಳೆಯರ ಕರ್ತವ್ಯ, ಜವಾಬ್ದಾರಿ ಹೆಚ್ಚಿನದ್ದಾಗಿದೆ. ಮನೆಯಲ್ಲಿ, ಸಮಾಜದಲ್ಲಿ, ವೃತ್ತಿ ಜೀವನದಲ್ಲಿ ಗೌರವ ಗಳಿಸುವುದು, ಪ್ರತಿಯೊಬ್ಬರ ನಡವಳಿಕೆ ಹಾಗೂ ಸಾಮರ್ಥ್ಯದಲ್ಲಿ ಅಡಗಿದೆ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಮಹಿಳೆಯರು ಹೆಚ್ಚಿನ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕಿದೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಬೇಕಿದೆ ಎಂದರು.

ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು mಂಣಟಿAತಿi, ಮಹಿಳಾ ದಿನ ಎಂದರೆ ಅಡುಗೆ ಮನೆಯನ್ನು ಬಿಟ್ಟು ಸಮಾಜದಲ್ಲಿ ನಾವು ಕಂಡುಕೊಳ್ಳುವ ಅಸ್ತಿತ್ವ ಎನ್ನುವುದನ್ನು ಮಹಿಳೆಯರು ಅರಿತುಕೊಳ್ಳಬೇಕಿದೆ ಎಂದರು. ಸಮಾಜದಲ್ಲಿ ಮಹಿಳೆಯರಿಗೆ ಭಯಮುಕ್ತ ವಾತಾವರಣ ಕಲ್ಪಿಸಿಕೊಡುವುದು ಸೇರಿದಂತೆ ಮಹಿಳೆಯರ ಹಕ್ಕುಗಳಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳುವುದೇ ಮಹಿಳೆಯರಿಗೆ ನೀಡುವ ನಿಜವಾದ ಗೌರವ ಎಂದರು. ಮಕ್ಕಳಿಗಾಗಿ ಆಸ್ತಿ, ಸಂಪತ್ತು ಕೂಡಿಡುವುದರೊಂದಿಗೆ ಉತ್ತಮ ಮೌಲ್ಯಗಳನ್ನು ಕಲಿಸಿಕೊಡುವ ಜವಾಬ್ದಾರಿ ಪೋಷಕರ ಮೇಲಿದೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕುಶಾಲನಗರ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಪ್ರದೀಪ್ ಕುಮಾರ್ ಅವರು, ಮಹಿಳಾ ಸುರಕ್ಷತಾ ಕಾನೂನುಗಳ ಬಗ್ಗೆ ಮಾತನಾಡಿದರು.

ಎನ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕಿ ಆಶಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕುಶಾಲನಗರ ಟೌನ್ ಪೊಲೀಸ್ ಠಾಣಾಧಿಕಾರಿಗಳಾದ ಹೆಚ್.ಟಿ ಗೀತಾ, ಶಿವಣ್ಣ, ಸಂಚಾರ ಠಾಣಾಧಿಕಾರಿ ಗಣೇಶ್, ಎನ್.ಟಿ.ಸಿ. ಮಾಲೀಕ ಅಬ್ದುಲ್ ಸಲಾಂ, ಸಿಬ್ಬಂದಿಗಳು ಇದ್ದರು.