ಮಡಿಕೇರಿ, ಜೂ. ೧೫ ತನ್ನ ಗಂಡ ಮಗುವನ್ನು ಕರೆದುಕೊಂಡು ಹೋಗಿದ್ದು ಇದುವರೆಗೂ ಪತ್ತೆಯಾಗಿಲ್ಲದ ಕಾರಣ ಇಬ್ಬರನ್ನೂ ಪತ್ತೆ ಹಚ್ಚಿ ಕೊಡುವಂತೆ ಮಹಿಳೆಯೊಬ್ಬರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೂರ್ನಾಡಿನ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಭವ್ಯ ಹಾಗೂ ಪತಿ ಜಮ್ಸಿ ತಿಮ್ಮಯ್ಯ ಇವರುಗಳ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ಪುಟ್ಟ ಮಗು ತಾಯಿಯೊಂದಿಗಿದ್ದು, ಪತಿ ಮಕ್ಕಳ ಕಲ್ಯಾಣ ಸಮಿತಿ ವತಿಯಿಂದ ಮಗುವನ್ನು ನೋಡಿಕೊಂಡು ಬರಲು ಅನುಮತಿ ಪಡೆದಿದ್ದರು.

ತಾ. ೧೦ರಂದು ಮಗುವನ್ನು ನೋಡಲೆಂದು ಬಂದ ತಿಮ್ಮಯ್ಯ ಅವರು ಮಗುವನ್ನು ಕಾರಿನಲ್ಲಿ ಕರೆದುಕೊಂಡು ಹೋದ ಬಳಿಕ ನಾಪತ್ತೆಯಾಗಿದ್ದಾರೆ ಅಲ್ಲದೆ ಅವರ ದೂರವಾಣಿ ಕೂಡ ಸ್ವಿಚ್ ಆಫ್ ಆಗಿದ್ದು ಭವ್ಯ ಅವರು ಪೊಲೀಸ್ ಠಾಣೆಯಲ್ಲಿ ಪುಕಾರು ನೀಡಿ ಇಬ್ಬರ ಪತ್ತೆಗಾಗಿ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.