ಕುಶಾಲನಗರ, ಜೂ. ೧೫ : ಮೈಸೂರಿನಿಂದ ಕೊಡಗು ಜಿಲ್ಲೆಗೆ ಪಿಕಪ್ ವಾಹನ ಮೂಲಕ ಹಂದಿಗಳನ್ನು ಸಾಗಿಸುತ್ತಿದ್ದ ವೇಳೆ ಸತ್ತು ಹೋಗಿದ್ದ ಹಂದಿಯನ್ನು ಹೆದ್ದಾರಿ ಬದಿಯ ಆನೆಕಾಡು ಮೀಸಲು ಅರಣ್ಯ ಬಳಿ ವಾಹದಿಂದ ಎಸೆದ ಪ್ರಸಂಗ ವರದಿಯಾಗಿದೆ.
ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಪ್ರಶ್ನೆ ಮಾಡಲು ಮುಂದಾದ ಸಂದರ್ಭ ಚಾಲಕ ಅಲ್ಲಿಂದ ವಾಹನದೊಂದಿಗೆ ಪರಾರಿಯಾಗಿದ್ದ. ವಾಹನದ ನೋಂದಣಿ ಸಂಖ್ಯೆಯನ್ನು ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಸಿಬ್ಬಂದಿಗಳ ಗಮನಕ್ಕೆ ನೀಡಿ ವಾಹನವನ್ನು ತಡೆಯುವಂತೆ ತಿಳಿಸಲಾಗಿತ್ತು.
ಭಾನುವಾರ ರಾತ್ರಿ ಮಡಿಕೇರಿ ಕಡೆಯಿಂದ ಕುಶಾಲನಗರ ಮಾರ್ಗವಾಗಿ ಮೈಸೂರು ಕಡೆಗೆ ಹಿಂತಿರುಗುತ್ತಿದ್ದ ಈ ಪಿಕ್ಅಪ್ ವಾಹನವನ್ನು ತಪಾಸಣಾ ಕೇಂದ್ರದ ಸಿಬ್ಬಂದಿ ಧರ್ಮ ತಡೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಮತ್ತೆ ಪರಾರಿ ಆಗಲು ಯತ್ನಿಸಿದ ವಾಹನವನ್ನು ಪತ್ತೆಹಚ್ಚಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ವಶಕ್ಕೆ ಪಡೆಯಲಾಗಿದೆ. ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.