ಸೋಮವಾರಪೇಟೆ, ಜೂ. ೧೫: ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಶಾಸಕರು, ಅಧಿಕಾರಿಗಳು ಹಾಗೂ ಜನಸಾಮಾನ್ಯರ ನಡುವಿನ ಸಂವಾದ ಕಾರ್ಯಕ್ರಮದಲ್ಲಿ ಹತ್ತಾರು ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಶಾಸಕರು-ಅಧಿಕಾರಿಗಳ ಗಮನ ಸೆಳೆದರು.
ಪ್ರಮುಖವಾಗಿ ಕಂದಾಯ ಹಾಗೂ ಅರಣ್ಯ ಇಲಾಖೆಗಳ ಬಗ್ಗೆ ಕೆಲಸ ಕಾರ್ಯಗಳ ಬಗ್ಗೆ ಸಂವಾದದಲ್ಲಿ ಭಾರೀ ಚರ್ಚೆಗಳು ನಡೆದವು. ಸೋಮವಾರಪೇಟೆ ಭಾಗದ ಹತ್ತಾರು ಸಂಘ ಸಂಸ್ಥೆಗಳ ಪ್ರಮುಖರು, ಗ್ರಾಮೀಣ ಭಾಗದಿಂದ ಆಗಮಿಸಿದ್ದ ನೂರಾರು ಸಾರ್ವಜನಿಕರು, ಅಧಿಕಾರಿಗಳ ಎದುರು ಸಮಸ್ಯೆಗಳನ್ನು ತೆರೆದಿಟ್ಟರು.
ಸಂವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅರುಣ್ ಕೊತ್ನಳ್ಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸೋಮವಾರಪೇಟೆ ತಾಲೂಕಿನ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಸಮಿತಿಯನ್ನು ರಚಿಸಲಾಗಿದ್ದು, ಈಗಾಗಲೇ ಹಲವಾರು ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಹಾಗೂ ಶಾಸಕರ ಗಮನ ಸೆಳೆಯಲಾಗಿದೆ ಎಂದರು.
ಕAದಾಯ ಇಲಾಖೆಯಲ್ಲಿ ದುರಸ್ತಿ ಕಾರ್ಯಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಸಿ ಮತ್ತು ಡಿ ಜಾಗದ ಸಮಸ್ಯೆ ಬಗೆಹರಿದಿಲ್ಲ. ಸೆಕ್ಷನ್ ೪ ವಿಚಾರದಲ್ಲಿ ಅರಣ್ಯ ಇಲಾಖೆ ರೈತರಿಗೆ ಅನಗತ್ಯ ಕಿರುಕುಳ ನೀಡುತ್ತಿದೆ. ಸಿ ಮತ್ತು ಡಿ ಜಾಗಕ್ಕೆ ಸಂಬAಧಿಸಿದAತೆ ಸರ್ಕಾರ ರಚಿಸಿರುವ ವಿಶೇಷ ಸಮಿತಿ ೬ ತಿಂಗಳಾದರೂ ವರದಿ ನೀಡಿಲ್ಲ. ಈ ಮಧ್ಯೆ ಅರಣ್ಯ ಇಲಾಖೆ ರೈತರ ಜಾಗಕ್ಕೆ ಸರ್ವೆ ಮಾಡಲು ಬರುತ್ತಿದೆ. ಇದು ಖಂಡನೀಯ ಎಂದು ರೈತ ಹೋರಾಟ ಸಮಿತಿಯ ಅಧ್ಯಕ್ಷ ಸುರೇಶ್ ಚಕ್ರವರ್ತಿ ಹೇಳಿದರು.
ರೈತರ ಜಮೀನನ್ನು ಅರಣ್ಯ ಎಂದು ನಮೂದಿಸಲು ಇಲಾಖೆಯವರು ಸರ್ವೆಗೆ ಬರುತ್ತಾರೆ. ಆದರೆ ಕಾಜೂರು ಮೀಸಲು ಅರಣ್ಯದಲ್ಲಿ ಲಕ್ಷಾಂತರ ಬೆಲೆ ಬಾಳುವ ತೇಗದ ಮರಗಳನ್ನು ಅರಣ್ಯಾಧಿಕಾರಿಗಳ ಕುಮ್ಮಕ್ಕಿನಿಂದಲೇ ಕಡಿಯಲಾಗಿದೆ. ಇಂತಹ ಮರಗಳ್ಳರ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಬಡ ರೈತರು ತಮ್ಮ ಜಾಗದಲ್ಲಿದ್ದ ಮರ ಕಡಿದರೆ ಹತ್ತಾರು ಮೊಕದ್ದಮೆ ದಾಖಲಿಸುತ್ತಾರೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಕೂತಿ ದಿನೇಶ್ ಆರೋಪಿಸಿದರು.
ಸಿ ಮತ್ತು ಡಿ ಜಾಗದ ಸಮಸ್ಯೆ ಬಗೆಹರಿಸಲು ಈಗಾಗಲೇ ಸರ್ಕಾರ ಸಮಿತಿ ರಚಿಸಿದೆ. ಸೆಕ್ಷನ್ ೪ ಅಡಿಯಲ್ಲಿ ವಾಸ್ತವಾಂಶದ ಸರ್ವೆ ನಡೆದರೆ ಮಾತ್ರ ಸರ್ಕಾರ ಹಾಗೂ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಸಾಧ್ಯ. ಇಲ್ಲವಾದರೆ ಈ ಹಿಂದೆ ಮಾಡಿದಂತೆ ಅಧಿಕಾರಿಗಳು ಕಚೇರಿಯಲ್ಲಿಯೇ ಕುಳಿತು ವರದಿ ಸಲ್ಲಿಸುವ ಸಂಭವವಿದೆ ಎಂದು ಶಾಸಕ ಡಾ. ಮಂತರ್ ಗೌಡ ಹೇಳಿದರು. ಸರ್ವೆ ಮಾಡುವುದಿದ್ದರೆ ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಸರ್ವೆ ನಡೆಸಬೇಕು. ಅದಕ್ಕೂ ಮುನ್ನ ಸಮಿತಿಯ ವರದಿ ಬರುವವರೆಗೂ ರೈತರ ಜಾಗಕ್ಕೆ ಅಧಿಕಾರಿಗಳು ಬರಬಾರದು ಎಂದು ಸುರೇಶ್ ಆಗ್ರಹಿಸಿದರು.
ಸಿ ಮತ್ತು ಡಿ ಜಾಗದ ಸಮಸ್ಯೆ, ಸೆಕ್ಷನ್ ೪ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೂ ಸಹ ಜವಾಬ್ದಾರಿ ಹೊರಬೇಕು. ಇದು ರೈತರ ಅಳಿವು ಉಳಿವಿನ ಪ್ರಶ್ನೆಯಾಗಿದೆ ಎಂದರು. ಜನರಿಗೆ ಸಮಸ್ಯೆಯಾದರೆ ಸಹಿಸಲು ಸಾಧ್ಯವಿಲ್ಲ. ವಾಸ್ತವಾಂಶದ ವರದಿ ಸಲ್ಲಿಕೆಯಾಗಬೇಕು. ರೈತರನ್ನು ಒಕ್ಕಲೆಬ್ಬಿಸುವ ಯತ್ನ ನಡೆಸಿದರೆ ಸುಮ್ಮನಿರುವುದಿಲ್ಲ ಎಂದು ಶಾಸಕ ಮಂತರ್ ಗೌಡ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ವೇದಿಕೆಯಲ್ಲಿದ್ದ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ ಮಾತನಾಡಿ, ವನ್ಯಪ್ರಾಣಿ ಮತ್ತು ಮಾನವ ಸಂಘರ್ಷ ತಡೆಗೆ ಸರ್ಕಾರ ಮುಂದಾಗಬೇಕು. ರೈತರು, ಅರಣ್ಯ ಇಲಾಖೆಯನ್ನು ಒಳಗೊಂಡAತೆ ಸರ್ಕಾರ ಸಾರ್ವಜನಿಕ ಜನಸಂಪರ್ಕ ಸಭೆ ಮಾಡಬೇಕು. ಮೀಸಲು ಅರಣ್ಯದಲ್ಲಿ ಸೋಲಾರ್ ಫೆನ್ಸಿಂಗ್, ಕಂದಕ ನಿರ್ಮಿಸಲಾಗಿದ್ದರೂ ನಿರ್ವಹಣೆಯಾಗುತ್ತಿಲ್ಲ. ಈ ಬಗ್ಗೆ ಅರಣ್ಯ ಇಲಾಖೆಗೆ ಕ್ರಮ ವಹಿಸಬೇಕೆಂದರು.
ಸರ್ವೆ ಇಲಾಖೆಯಿಂದ ಶನಿವಾರಸಂತೆ ಭಾಗದಲ್ಲಿ ಪ್ರಾಪರ್ಟಿ ಕಾರ್ಡ್ ನೀಡಲಾಗಿದೆ. ಆದರೆ ನಿವೇಶನ ಪರಿವರ್ತನೆ ಸಂದರ್ಭ ಅಡಚಣೆಯಾಗುತ್ತಿದೆ. ಇದರಿಂದಾಗಿ ನಿವೇಶನಕ್ಕೆ ಸಂಬAಧಿಸಿದAತೆ ದಾಖಲೆಗಳನ್ನು ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಾರ್ವಜನಿಕರು ಗಮನ ಸೆಳೆದರು. ಈ ಬಗ್ಗೆ ಇಲಾಖೆಯ ಉನ್ನತ ಅಧಿಕಾರಿಗಳ ಗಮನ ಸೆಳೆಯುವುದಾಗಿ ಎಡಿಎಲ್‌ಆರ್ ಪರಮೇಶ್ ತಿಳಿಸಿದರು. ಶಿಕ್ಷಣ ಇಲಾಖೆಗೆ ಸಂಬAಧಿಸಿದAತೆ ನಡೆದ ಚರ್ಚೆಯಲ್ಲಿ ಮಾತನಾಡಿದ ನಿವೃತ್ತ ಶಿಕ್ಷಕ ಶಿವಕುಮಾರ್ ಅವರು, ಹಲವಷ್ಟು ಸರ್ಕಾರಿ ಶಾಲೆಗಳು ಮುಚ್ಚಿದ್ದು, ಇನ್ನೂ ಹಲವು ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿದೆ. ಇಂತಹ ಶಾಲೆಗಳಲ್ಲಿರುವ ಮಕ್ಕಳು ಬೇರೆ ಶಾಲೆಗಳಿಗೆ ತೆರಳಲು ಕಷ್ಟಕರವಾಗಿದೆ ಎಂದರು.
ಕಡಿಮೆ ಮಕ್ಕಳ ಹಾಜರಾತಿ ಇರುವ ಶಾಲೆಗಳು ಮುಚ್ಚಲ್ಪಟ್ಟಿವೆ. ೧ ರಿಂದ ೫ನೇ ತರಗತಿವರೆಗೆ ಕಡಿಮೆ ಮಕ್ಕಳಿದ್ದರೂ ಸಹ ಶಿಕ್ಷಕರ ನಿಯೋಜನೆಗೆ ಕ್ರಮವಹಿಸಲಾಗುತ್ತಿದೆ ಎಂದು ಬಿಇಓ ಕೃಷ್ಣಪ್ಪ ಹೇಳಿದರು.
ಸೋಮವಾರಪೇಟೆ ಭಾಗದಿಂದ ಉನ್ನತ ಶಿಕ್ಷಣವನ್ನು ಅರಸಿ ಮಕ್ಕಳು ದೂರದ ನಗರ ಪ್ರದೇಶಗಳಿಗೆ ತೆರಳುತ್ತಿದ್ದಾರೆ. ಈ ಹಿನ್ನೆಲೆ ಸ್ಥಳೀಯವಾಗಿ ನರ್ಸಿಂಗ್, ಕಾನೂನು ಕಾಲೇಜುಗಳನ್ನು ಸ್ಥಾಪಿಸಲು ಶಾಸಕರು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಯಿತು.
ಹಲವಷ್ಟು ಅಪರಾಧ, ಮಾದಕ ವಸ್ತುಗಳ ಬಳಕೆ ಪ್ರಕರಣದಲ್ಲಿ ಅಪ್ರಾಪ್ತರು ಭಾಗಿಯಾಗಿರುತ್ತಿರುವುದು ಆಘಾತಕಾರಿಯಾಗಿದೆ. ಇದರೊಂದಿಗೆ ಫೋಕ್ಸೋ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು. ಮಕ್ಕಳ ಗ್ರಾಮ ಸಭೆಗಳಿಗೆ ಶಾಸಕರು ಭಾಗಿಯಾದರೆ ಸಮಸ್ಯೆಗಳು ಹೆಚ್ಚಿನ ಮಟ್ಟದಲ್ಲಿ ಪರಿಹಾರ ಕಾಣಲಿವೆ ಎಂದರು.
ಶುAಠಿ ಗ್ರಾಮದ ಭರತ್‌ಕುಮಾರ್ ಮಾತನಾಡಿ, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳನ್ನು ತೆರೆಯಬೇಕು. ಎಲ್ಲಾ ವಿಷಯಕ್ಕೂ ಶಿಕ್ಷಕರನ್ನು ನೇಮಿಸಬೇಕೆಂದರು.
ಪೊಲೀಸ್ ಇಲಾಖೆಗೆ ಸಂಬAಧಿಸಿದAತೆ ವಿಷಯ ಪ್ರಸ್ತಾಪಿಸಿದ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಕೆ.ಎನ್. ದೀಪಕ್, ಸೋಮವಾರಪೇಟೆ, ಶನಿವಾರಸಂತೆ ಠಾಣೆಯಲ್ಲಿ ಸಿಬ್ಬಂದಿಗಳ ಕೊರತೆಯಿದ್ದು, ಭರ್ತಿಗೆ ಕ್ರಮ ವಹಿಸಬೇಕು. ಸಂತೆ ದಿನಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಿದೆ. ಮಾದಾಪುರ ಹಾಗೂ ಕೊಡ್ಲಿಪೇಟೆ ಠಾಣೆಯನ್ನು ಸಬ್ ಇನ್ಸ್ಪೆಕ್ಟರ್ ಠಾಣೆಗಳನ್ನಾಗಿ ಮೇಲ್ದರ್ಜೆಗೆ ಏರಿಸಬೇಕು. ಬೀಟ್ ಪೊಲೀಸರು ಗ್ರಾಮಗಳಿಗೆ ತೆರಳುವಂತೆ ಸೂಚನೆ ನೀಡಬೇಕು ಎಂದರು.
ಸೋಮವಾರದAದು ಪಟ್ಟಣದಲ್ಲಿ ಪಾರ್ಕಿಂಗ್ ಸಮಸ್ಯೆ ಮಿತಿಮೀರುತ್ತಿದ್ದು, ಪ.ಪಂ. ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಯ ಆವರಣದಲ್ಲಿ ಖಾಸಗಿ ವಾಹನಗಳ ನಿಲುಗಡೆಯಿಂದ ಆ್ಯಂಬ್ಯುಲೆನ್ಸ್ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದರು. ಪಟ್ಟಣದಲ್ಲಿ ಈಗಾಗಲೇ ವಾಹನಗಳ ಪಾರ್ಕಿಂಗ್‌ಗೆ ಸ್ಥಳ ನಿಗದಿಪಡಿಸಲಾಗಿದೆ ಎಂದು ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಹೇಳಿದರು. ನಿಯಮ ಮೀರುವ ವಾಹನಗಳ ಮಾಲೀಕರಿಗೆ ದಂಡ ವಿಧಿಸಬೇಕೆಂದು ಮಂತರ್ ಗೌಡ ಅವರು ಪೊಲೀಸರಿಗೆ ನಿರ್ದೇಶನ ನೀಡಿದರು. ಪ್ರವಾಸೋದ್ಯಮ ಇಲಾಖೆಗೆ ಸಂಬAಧಿಸಿದ ವಿಷಯಗಳ ಬಗ್ಗೆ ಶಾಂತಳ್ಳಿಯ ಅಂಕುಶ್ ಅವರು ಶಾಸಕರು ಹಾಗೂ ಅಧಿಕಾರಿಗಳ ಗಮನ ಸೆಳೆದರು.
ಸಂವಾದದಲ್ಲಿ ಪ್ರಮುಖವಾಗಿ ತೋಟಗಾರಿಕೆ ಹಾಗೂ ಕೃಷಿ, ಪೊಲೀಸ್ ಇಲಾಖೆ, ಆರ್‌ಟಿಓ, ತಾಲೂಕು ಪಂಚಾಯಿತಿ, ಸೂಡಾ ಮತ್ತು ಮೂಡಾ, ಆರೋಗ್ಯ ಇಲಾಖೆ, ಸೆಸ್ಕ್, ಪ್ರವಾಸೋದ್ಯಮ ಇಲಾಖೆಗಳ ಬಗ್ಗೆ ಚರ್ಚೆ ನಡೆಯಿತು. ತಾಲೂಕು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ಇಲಾಖೆಯಿಂದ ತಹಶೀಲ್ದಾರ್ ಕೃಷ್ಣಮೂರ್ತಿ, ಪೊಲೀಸ್ ಇನ್ಸ್ಪೆಕ್ಟರ್ ಮುದ್ದುಮಹದೇವ, ಸೆಸ್ಕ್ ಎಇಇ ವಿನಯ್‌ಕುಮಾರ್, ಶಿಕ್ಷಕಿ ಕೆ.ಟಿ. ಚಂದ್ರಕಲಾ, ಡಾ. ಜಮೀರ್ ಅಹಮ್ಮದ್, ಸೆಸ್ಕ್ ಜೂನಿಯರ್ ಇಂಜಿನಿಯರ್ ಲೋಕೇಶ್, ಸಾರ್ವಜನಿಕ ಸೇವಾ ವಿಭಾಗದಲ್ಲಿ ಶಾಸಕ ಡಾ. ಮಂತರ್ ಗೌಡ, ಮಲೆನಾಡ ಸ್ವರ್ಗ ತಂಡದ ಬಿನುಗೌಡ, ನಿವೃತ್ತ ತಹಶೀಲ್ದಾರ್ ಜಯರಾಂ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹೂವಯ್ಯ ಮಾಸ್ಟರ್, ಸಾಹಿತಿ ಹೇಮಂತ್ ಪಾರೇರ, ಪತ್ರಕರ್ತರಾದ ಹಿರಿಕರ ರವಿ, ವಿಜಯ್ ಹಾನಗಲ್ ಅವರುಗಳನ್ನು ಸನ್ಮಾನಿಸಲಾಯಿತು.