ಸಿದ್ದಾಪುರ, ಜೂ. ೧೫: ತೋಟದಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದ ಆನೆಗಳನ್ನು ಕಾಡಿಗೆ ಅಟ್ಟುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ತಿತಿಮತಿ ವಲಯ ಅರಣ್ಯ ವ್ಯಾಪ್ತಿಯ ಚೆನ್ನಂಗಿ ಶಾಖೆಯ ವ್ಯಾಪ್ತಿಗೆ ಒಳಪಡುವ ಮೇಕೂರು-ಹೊಸ್ಕೇರಿ, ಬಾಡಗ- ಬಾಣಂಗಾಲ ಗ್ರಾಮದ ಮತ್ತು ಘಟ್ಟದಳ್ಳ ಭಾಗದ ಕಾಫಿ ತೋಟಗಳಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡಿತು. ಎರಡು ಗುಂಪಿನಲ್ಲಿ ೫ ಮರಿಯಾನೆಗಳು ಸೇರಿದಂತೆ ೨೭ ಕಾಡಾನೆಗಳು ಕಂಡುಬAದವು ಎಂದು ಕಾರ್ಯಾಚರಣೆ ತಂಡದ ಅಧಿಕಾರಿ ಮಾಹಿತಿ ನೀಡಿದ್ದಾರೆ. ಎರಡು ಕಾಡಾನೆಗಳ ಹಿಂಡನ್ನು ಕಾರ್ಯಾಚರಣೆ ನಡೆಸಿ ಮಾಲ್ದಾರೆಯ ಗ್ರಾಮದ ಮೂಲಕ ದುಬಾರೆ ಮೀಸಲು ಅರಣ್ಯಕ್ಕೆ ಅಟ್ಟಲಾಯಿತು. ಕಾಡಿಗಟ್ಟಲ್ಪಟ್ಟ ಆನೆಗಳು ರಾತ್ರಿ ಸಮಯದಲ್ಲಿ ಮತ್ತೆ ಲಗ್ಗೆ ಇಟ್ಟು ಕಾಫಿ ತೋಟಗಳಲ್ಲಿ ಬೆಳೆ ಮತ್ತು ಕೃಷಿಗಳನ್ನು ಧ್ವಂಸಗೊಳಿಸುತ್ತವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದು, ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಸರಕಾರ ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಒತ್ತಾಯಿಸಿದ್ದಾರೆ.

ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಮಾರ್ಗದರ್ಶನದಲ್ಲಿ, ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ಹಾಗೂ ಉಪವಲಯ ಅರಣ್ಯ ಅಧಿಕಾರಿ ಶಶಿ ಪಿ.ಟಿ. ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯ ಅಧಿಕಾರಿ ದೇವರಾಜ್, ಆರ್‌ಆರ್‌ಟಿ. ತಂಡದ ಸಿಬ್ಬಂದಿ ಶಂಕರ್, ಪ್ರಜ್ವಲ್, ರಂಜಿತ್, ಸುಂದರ, ಪ್ರವೀಣ, ರೋಷನ್, ಆಕಾಶ್, ಪ್ರದೀಪ್, ಧನು, ಅರುಣ, ಹಾಗೂ ವನ್ಯಜೀವಿ ವಲಯದ ಸಿಬ್ಬಂದಿ ಹಾಜರಿದ್ದರು.