ಮಡಿಕೇರಿ, ಜೂ. ೧೫: ಇಲ್ಲಿನ ಭಾರತೀಯ ವಿದ್ಯಾಭವನದ ಯೋಗ ಭಾರತಿ ಘಟಕವು ೨೫ ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ತಾ. ೧೭ ರಂದು ಸಂಜೆ ೬ಕ್ಕೆ ನಗರದ ರೆಡ್‌ಬ್ರಿಕ್ಸ್ ಸಭಾಂಗಣದಲ್ಲಿ ರಜತ ಮಹೋತ್ಸವ ಆಚರಿಸಲಿದೆ ಎಂದು ಯೋಗ ಭಾರತಿ ಘಟಕದ ಯೋಗ ಶಿಕ್ಷಕ ಕೆ.ಕೆ.ಮಹೇಶ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೦೧ರಲ್ಲಿ ಆರಂಭಗೊAಡ ಯೋಗ ಭಾರತಿಯು ನಿತ್ಯ ಯೋಗಾಭ್ಯಾಸದ ಮೂಲಕ ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುತ್ತಿದೆ. ಪ್ರತಿದಿನ ಬೆಳಗ್ಗೆ ೫.೩೦ಕ್ಕೆ ನಡೆಯುವ ಪ್ರಾಣಾಯಾಮ ಯೋಗಾಭ್ಯಾಸದಲ್ಲಿ ನೂರಾರು ಮಂದಿ ಭಾಗವಹಿಸುತ್ತಿದ್ದಾರೆ. ಮಹಿಳೆಯರಿಗಾಗಿ ಕಳೆದ ೧೦ ವರ್ಷಗಳಿಂದ ಯೋಗ ಸಂಧ್ಯಾ ಹೆಸರಿನಲ್ಲಿ ವಿಶೇಷ ತರಗತಿಗಳು ನಡೆಯುತ್ತಿವೆ. ಪ್ರತಿ ವರ್ಷ ರಥಸಪ್ತಮಿಯಂದು ೧೦೮ ಸೂರ್ಯ ನಮಸ್ಕಾರ ಹಾಗೂ ಪ್ರತಿ ತಿಂಗಳ ೨ನೇ ಶನಿವಾರ ರಾಜಾಸೀಟ್ ಉದ್ಯಾನದಲ್ಲಿ ೧೦೮ ಸೂರ್ಯ ನಮಸ್ಕಾರ ಅಭ್ಯಾಸವನ್ನು ಕಳೆದ ೧೦ ವರ್ಷಗಳಿಂದ ಆಯೋಜಿಸುತ್ತಾ ಬರಲಾಗಿದೆ ಎಂದು ವಿವರಿಸಿದರು.
ಯೋಗ ನಡಿಗೆ, ಪ್ರಕೃತಿ ವೀಕ್ಷಣೆ, ಚಾರಣದಂತಹ ಕಾರ್ಯಕ್ರಮಗಳ ಮೂಲಕ ಯೋಗಾಭ್ಯಾಸಿಗಳಲ್ಲಿ ಉತ್ಸಾಹ ಮೂಡಿಸಲಾಗುತ್ತಿದೆ. ಯೋಗ ಭಾರತಿಯು ಸ್ಥಳೀಯ ಶಾಲಾ-ಕಾಲೇಜು ಹಾಗೂ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಯೋಗದ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ಮಾಡುತ್ತಿದೆ. ರಜತ ಮಹೋತ್ಸವದ ಅಂಗವಾಗಿ ನಡೆಯುವ ಕಾರ್ಯಕ್ರಮದಲ್ಲಿ ಯೋಗ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ಆಯೋಜಿಸಲಾಗಿದೆ. ಆಹ್ವಾನಿತ ಗಣ್ಯರ ಸಮ್ಮುಖದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಯೋಗಾಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದರು. ತಾ.೧೭ ರಂದು ರೆಡ್‌ಬ್ರಿಕ್ಸ್ನ ಸತ್ಕಾರ ಸಭಾಂಗಣದಲ್ಲಿ ಸಂಜೆ ೬ಕ್ಕೆ ಯೋಗ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಲಿದೆ. ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ಅಪರ ಜಿಲ್ಲಾಧಿಕಾರಿ ಡಾ.ಸಹನ ಎಸ್.ಹಾದಿಮನಿ, ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್.ದೇವಯ್ಯ, ಯೋಗಭಾರತಿಯ ಪೋಷಕರಾದ ಡಾ.ಮನೋಹರ್ ಜಿ.ಪಾಟ್ಕರ್, ಶಕ್ತಿ ಪತ್ರಿಕೆಯ ಸಂಪಾದಕ ಜಿ.ಚಿದ್ವಿಲಾಸ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಜಿ.ಶೈಲಜಾ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಯೋಗ ಶಿಕ್ಷಕಿ ಸರಿತಾ, ಪ್ರಮುಖರಾದ ಸಂಗೀತ ಪ್ರಸನ್ನ, ಸುದೀರ್, ಪ್ರಭಾಕರ್, ಸರೋಜಿನಿ ಇದ್ದರು.