ವೀರಾಜಪೇಟೆ, ಜೂ. ೧೪: ರಕ್ತದಾನವೇ ಶ್ರೇಷ್ಠದಾನವಾಗಿದ್ದು ಇನ್ನೊಬ್ಬರ ಜೀವ ಉಳಿಸುವ ಈ ಕಾರ್ಯ ಎಲ್ಲರಿಗೂ ಮಾದರಿಯಾಗಬೇಕು ಎಂದು ವೀರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್ ಪೊನ್ನಣ್ಣ ಹೇಳಿದರು.
ಸಹಾರ ಫ್ರೆಂಡ್ಸ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕೊಡಗು ಜಿಲ್ಲಾ ಆಸ್ಪತ್ರೆ ರಕ್ಷಣಾ ಘಟಕದ ಸಂಯುಕ್ತ ಆಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ವೀರಾಜಪೇಟೆಯ ಸೀತಾಲಕ್ಷಿ÷್ಮÃ ಸಭಾಂಗಣದಲ್ಲಿ ಆಯೋಜಿಸಿದ ಎರಡನೇ ವರ್ಷದ ಬೃಹತ್ ರಕ್ತದಾನ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ನೂರ ನಲ್ವತ್ತು ಕೋಟಿ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ರಕ್ತದ ಬೇಡಿಕೆ ಹೆಚ್ಚು ಕಂಡುಬರುತ್ತಿದ್ದು, ರಕ್ತದಾನಿಗಳು, ಸಂಘ ಸಂಸ್ಥೆಗಳು ಮುಂದೆ ಬರಬೇಕು ಅದೇ ರೀತಿ ಜಿಲ್ಲೆಯಲ್ಲಿಯು ಸಹ ಸಂಘ ಸಂಸ್ಥೆಗಳು ರಕ್ತದಾನ ಶಿಬಿರವನ್ನು ಮಾಡುವ ಮೂಲಕ ಅನೇಕ ರೋಗಿಗಳಿಗೆ ಹಾಗೂ ಅಪಘಾತಕ್ಕೆ ಒಳಗಾದವರಿಗೆ ರಕ್ತ ನೀಡುವ ಮೂಲಕ ಜೀವ ದಾನ ಮಾಡಲು ಮುಂದಾಗಬೇಕು ಎಂದು ಹೇಳಿದರು
ಸಹಾರಾ ಫ್ರೆಂಡ್ಸ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ನಯಾಜ್ ಮಾತನಾಡಿ ನಮ್ಮ ಸಂಸ್ಥೆಯು ರಕ್ತದಾನ ಮಾತ್ರವಲ್ಲದೆ ಅನಾರೋಗ್ಯಕ್ಕೆ ಒಳಗಾಗಿರುವ ವ್ಯಕ್ತಿಗಳಿಗೆ ದಾನಿಗಳಿಂದ ಸಹಾಯ ಹಸ್ತ ಪಡೆದು ವೀಲ್ ಚೇರ್, ನೀರಿನ ಹಾಸಿಗೆ, ಕೃತಕ ಕಾಲು ನೀಡುತ್ತಾ ಬಂದಿದ್ದೇವೆ ಎಂದು ತಿಳಿಸಿದರು. ಕೊಡಗು ಜಿಲ್ಲಾ ಆಸ್ಪತ್ರೆ ಹಾಗೂ ರಕ್ತನಿಧಿ ಘಟಕದ ವೈದ್ಯರಾದ ಡಾ ಕರುಂಬಯ್ಯ ಮಾತನಾಡಿ ರಕ್ತದಾನ ಮಾಡುವುದರಿಂದ ಅನೇಕ ರೋಗಗಳು ನಿವಾರಣೆಯಾಗುತ್ತವೆ. ಅಲ್ಲದೇ ಒಂದು ಜೀವವನ್ನು ಉಳಿಸಿದಂತಾಗುತ್ತದೆ. ಜಿಲ್ಲೆಯಲ್ಲಿ ರಕ್ತದ ಅವಶ್ಯಕತೆ ಹೆಚ್ಚಿದ್ದು, ದಾನಿಗಳು ರಕ್ತದಾನ ಮಾಡಲು ಮುಂದಾಗಬೇಕು ಎಂದು ತಿಳಿಸಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಮಂಜುನಾಥ್ ಮಾತನಾಡಿ ರಕ್ತದಾನ ಮಾಡುವುದು ಉತ್ತಮ ಕಾರ್ಯವಾಗಿದ್ದು, ಇದರಿಂದ ಅನೇಕ ರೋಗಿಗಳಿಗೆ ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭ ಚಾಮಿಗ್ರೂಪ್‌ನ ಮಾಲೀಕರಾದ ಸುರೇಶ್, ಸೂರಜ್ ಹೊಸೂರು, ಪುರಸಭೆ ಮಾಜಿ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಅಯೀಷ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರಾವೂಫ್, ಶಶಿಧರನ್ ಸೇರಿದಂತೆ ಸಂಸ್ಥೆಯ ಸದಸ್ಯರು ಹಾಗೂ ಕೊಡಗು ಜಿಲ್ಲಾ ವೈದ್ಯಕೀಯ ಕಾಲೇಜಿನ ರಕ್ತನಿಧಿ ಘಟಕ ಸಿಬ್ಬಂದಿ ಹಾಗೂ ರಕ್ತದಾನಿಗಳು ಹಾಜರಿದ್ದರು. ಕಾರ್ಯಕ್ರಮದಲ್ಲಿ ಅತೀ ಹೆಚ್ಚು ರಕ್ತದಾನ ಮಾಡಿದವರಿಗೆ ಸನ್ಮಾನ ಮಾಡಲಾಯಿತು.