ಮಡಿಕೇರಿ, ಜೂ. ೧೪: ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಮೂರನೇ ವರ್ಷದ “ವಿದ್ಯಾನಿಧಿ ವಿತರಣೆ” ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿನ ಪತ್ರಕರ್ತರ ೫೦ ಮಕ್ಕಳಿಗೆ ರೂ. ೨.೨೬ ಲಕ್ಷ ನೆರವನ್ನು ವಿತರಿಸಲಾಯಿತು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಆಯೋಜಿತ ವಿದ್ಯಾನಿಧಿ ವಿತರಣಾ ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕ ಕಲ್ಲಡ್ಕದ ನಾರಾಯಣ ಗೌಡ ಅವರು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಿಸಿದರು.
ವಿದ್ಯಾರ್ಥಿಗಳು ಹಾಗೂ ಪೋಷಕರನ್ನುದ್ದೇಶಿಸಿ ಮಾತನಾಡಿದ ಅವರು, ಒಳ್ಳೆಯ ಮನಸ್ಸು ಮತ್ತು ಒಳ್ಳೆಯ ಭಾವನೆ ಒಟ್ಟು ಸೇರಿದಾಗ ಮಾತ್ರ ಸಾಧನೆ ಸಾಧ್ಯ. ಕೊಡಗು ಪತ್ರಿಕಾ ಭವನ ಟ್ರಸ್ಟ್ ವಿದ್ಯಾನಿಧಿಯ ಮೂಲಕ ದೊಡ್ಡ ಮೊತ್ತದ ನೆರವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿರುವುದು ಉತ್ತಮ ಕಾರ್ಯವೆಂದು ಮೆಚ್ಚುಗೆಯ ವ್ಯಕ್ತಪಡಿಸಿದರು. ಸರಕಾರಿ ಶಾಲೆಗಳಲ್ಲಿ ಹಾಲು, ಹಣ್ಣು, ಊಟ, ಮೊಟ್ಟೆ, ಎಲ್ಲವೂ ಸಿಗುತ್ತದೆ, ಆದರೆ, ಶಿಕ್ಷಕರೇ ಇಲ್ಲ. ಅತಿಥಿ ಶಿಕ್ಷಕರೇ ಇಂದು ಶಾಲೆಯನ್ನು ಮುನ್ನಡೆಸಬೇಕಾದ ಪರಿಸ್ಥಿತಿ ಬಂದಿದೆ. ಒಬ್ಬರು ಅಥವಾ ಇಬ್ಬರು ಅಧ್ಯಾಪಕರು ಇಡೀ ಶಾಲೆಯನ್ನು ನಿಭಾಯಿಸಬೇಕಾಗಿದೆ. ಪಠ್ಯ ಚಟುವಟಿಕೆಯ ಜೊತೆಯಲ್ಲಿ ೧೦ ರೂ. ಗಳಿಗೆ ನೀಡಿದ ಊಟದ ಲೆಕ್ಕವನ್ನು ನೀಡಬೇಕಾಗಿದೆ. ಇದರ ಲೆಕ್ಕ ನೀಡಲು ನೆಟ್‌ವರ್ಕ್ ಸಮಸ್ಯೆಯಿಂದ ಬೆಟ್ಟದ ತುದಿಯನ್ನು ಏರಬೆೆÃಕಾಗಿದೆಯೆಂದು ಪ್ರಸ್ತುತ ವ್ಯವಸ್ಥೆಯನ್ನು ನಾರಾಯಣ ಗೌಡ ವಿಶ್ಲೇಷಿಸಿದರು.
ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್ ಮಾತನಾಡಿ, ಕೊಡಗು ಪತ್ರಿಕಾ ಭವನ ಟ್ರಸ್ಟ್ ನಿರಂತರ ಸಾಮಾಜಿಕ ಕಳಕಳಿಯನ್ನು ಸದ್ದುಗದ್ದಲವಿಲ್ಲದೆ ತೋರುತ್ತಾ ಬಂದಿದೆ. ಕೋವಿಡ್, ಪ್ರಾಕೃತಿಕ ವಿಕೋಪ ಸಂದರ್ಭಗಳಲ್ಲಿ ಆಹಾರದ ಕಿಟ್‌ಗಳನ್ನು ಜಿಲ್ಲಾ ವ್ಯಾಪ್ತಿಯ ಪತ್ರಕರ್ತರಿಗೆ ವಿತರಿಸಿದೆ. ೨೦೨೪ ರಿಂದ ವಿದ್ಯಾನಿಧಿ ವಿತರಣೆಯನ್ನು ವ್ಯವಸ್ಥಿತವಾಗಿ ಆರಂಭಿಸಲಾಗಿದ್ದು, ಆರಂಭಿಕ ವರ್ಷದಲ್ಲಿ ರೂ. ೧.೬೦ ಲಕ್ಷ, ೨೦೨೫ ರಲ್ಲಿ ೨೮ ವಿದ್ಯಾರ್ಥಿಗಳಿಗೆ ರೂ. ೨.೧೯ ಲಕ್ಷ ನೀಡಲಾಗಿದ್ದು, ಪ್ರಸ್ತುತ ವರ್ಷ ೫೦ ವಿದ್ಯಾರ್ಥಿಗಳಿಗೆ ರೂ. ೨.೨೬ ಲಕ್ಷ ನೀಡಲಾಗುತ್ತಿದೆಯೆಂದು ತಿಳಿಸಿದರು. ಮುಂದೆಯೂ ಟ್ರಸ್ಟ್ ನೀಡುವ ಎಲ್ಲಾ ಸೌಲಭ್ಯಗಳನ್ನು ಪತ್ರಕರ್ತರು ಹಾಗೂ ಅವರ ಮಕ್ಕಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಸ್ಥಾಪಕ ಅಧ್ಯಕ್ಷರು ಹಾಗೂ ಹಾಲಿ ಟ್ರಸ್ಟಿಗಳಾದ ಟಿ.ಪಿ. ರಮೇಶ್ ಅವರು ಮಾತನಾಡಿ, ವಿದ್ಯಾನಿಧಿಯನ್ನು ಪಡೆಯುವ ಮಕ್ಕಳು ನಿಶ್ಚಿತವಾದ ಗುರಿಸಾಧನೆಯತ್ತ ದೃಢವಾದ ಹೆಜ್ಜೆಗಳನ್ನಿರಿಸಬೇಕು. ಶೈಕ್ಷಣಿಕ ಹಂತದಲ್ಲಿ ಇಡುವ ಒಂದು ತಪ್ಪು ಹೆಜ್ಜೆಯಿಂದ ಮಕ್ಕಳ ಭವಿಷ್ಯ ಹಾಳಾಗಬಹುದೆಂದು ಎಚ್ಚರಿಸಿದ ಅವರು, ಶಿಕ್ಷಣದ ಹಂತದಲ್ಲಿ ಮಕ್ಕಳು ಹಾದಿತಪ್ಪದಂತೆ ಪೋಷಕರು ಎಚ್ಚರಿಕೆ ವಹಿಸುವಂತೆ ತಿಳಿಸಿದರು.
ಕೊಡಗು ಪತ್ರಿಕಾ ಭವನ ಟ್ರಸ್ಟ್ ಬೆಳ್ಳಿ ಮಹೋತ್ಸವ ಆಚರಣೆಯ ಹೊಸ್ತಿಲಲ್ಲಿದ್ದು, ಆ ಸಮಾರಂಭದ ಸಂದರ್ಭ ವಿದ್ಯಾನಿಧಿಯಿಂದ ನೆರವು ಪಡೆದ ಎಲ್ಲಾ ಮಕ್ಕಳನ್ನೂ ಆಹ್ವಾನಿಸುವಂತಾಗಬೇಕೆನ್ನುವ ಆಶಯವನ್ನು ವ್ಯಕ್ತಪಡಿಸಿದರು. ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ. ಕೇಶವ ಕಾಮತ್, ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಹಂತದಲ್ಲಿ ದೊರಕುವ ಎಲ್ಲಾ ಅವಕಾಶಗಳನ್ನು ಸದುಪಯೋಗÀಪಡಿಸಿಕೊಳ್ಳಬೇಕು. ಅದು ಬುದ್ಧಿವಂತಿಕೆಯಾಗುತ್ತದೆ. ಮಕ್ಕಳು ತಮ್ಮ ಶಿಕ್ಷಣದ ಹಂತದಲ್ಲಿ ಪಾಠ ಪ್ರವಚನಗಳೊಂದಿಗೆ ಸಾಮಾನ್ಯ ಜ್ಞಾನವನ್ನು ಪಡೆದುಕೊಳ್ಳಬೇಕು. ಶಿಕ್ಷಣದ ಬಳಿಕ ಎದುರಾಗುವ ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಲು ಸಾಮಾನ್ಯ ಜ್ಞಾನ ಅತ್ಯಂತ ಸಹಕಾರಿಯಾಗಲಿದೆ. ಟ್ರಸ್ಟ್ ಮೂಲಕ ನೀಡುತ್ತಿರುವ ವಿದ್ಯಾನಿಧಿ ಪಡೆಯುವ ಮಕ್ಕಳು, ಭವಿಷ್ಯದಲ್ಲಿ ತಾವು ಸಮಾಜಕ್ಕೆ ಏನನ್ನಾದರು ನೀಡುವಂತಹ ಸಾಮರ್ಥ್ಯವನ್ನು ಪಡೆಯಬೇಕೆಂದರು.
ಟ್ರಸ್ಟಿ ಅನಿಲ್ ಎಚ್.ಟಿ. ಅವರು ಕಾರ್ಯಕ್ರಮ ನಿರೂಪಿಸಿ ಮಾತನಾಡಿ, ಪ್ರಸಕ್ತ ಸಾಲಿನ ಅ.೧೫ ರಂದು ಪತ್ರಿಕಾ ಭವನ ೨೫ ವರ್ಷದ ಸಂಭ್ರಮವನ್ನು ಆಚರಿಸಿಕೊಳ್ಳಲಿದೆ ಎಂದು ತಿಳಿಸಿದರು.
ವಿದ್ಯಾನಿಧಿ ಪಡೆದ ಮಕ್ಕಳ ಪೋಷಕರಾದ ಜಿ.ವಿ. ರವಿಕುಮಾರ್, ಅನುಷಾ, ರಂಜಿತ್ ಕವಲಪಾರ, ಕುಡೆಕಲ್ ಸಂತೋಷ್. ಎಸ್.ಎ. ಮುರಳೀಧರ್ ಅವರು ಮಾತನಾಡಿ, ಟ್ರಸ್ಟ್ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಪತ್ರಕರ್ತ ನವೀನ್ ಚಿಣ್ಣಪ್ಪ ಪ್ರಾರ್ಥಿಸಿ, ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಕೋಶಾಧಿಕಾರಿ ಕೆ.ತಿಮ್ಮಪ್ಪ ಸ್ವಾಗತಿಸಿದರು. ಟ್ರಸ್ಟಿ ಮಧೋಶ್ ಪೂವಯ್ಯ ಉದ್ಘಾಟಕರ ಪರಿಚಯ ಮಾಡಿಕೊಟ್ಟರು, ಟ್ರಸ್ಟಿ ವಿ.ಪಿ. ಸುರೇಶ್ ವಂದಿಸಿದರು.