ಸೋಮವಾರಪೇಟೆ, ಜೂ. ೧೩: ತಾಲೂಕಿನ ಹಂಡ್ಲಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟವು ಎನ್‌ಆರ್‌ಎಲ್‌ಎಂ ಮಿಷನ್ ಅಡಿಯಲ್ಲಿ ಉತ್ತಮ ಕಾರ್ಯನಿರ್ವಹಣೆ, ಸ್ವಸಹಾಯ ಸಂಘಗಳ ಅಭಿವೃದ್ಧಿಯಲ್ಲಿನ ವಿಶೇಷ ಕೊಡುಗೆಗಾಗಿ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಭಾಜನವಾಗಿದೆ.
ಗ್ರಾ.ಪಂ.ನಲ್ಲಿ ನಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂಸ್ಥೆ-ಸAಜೀವಿನಿ ಒಕ್ಕೂಟದ ಸಭೆಯಲ್ಲಿ ಮಾತನಾಡಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅಂಜನಾದೇವಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಅವರ ಮಾರ್ಗದರ್ಶನ, ಒಕ್ಕೂಟದ ಪದಾಧಿಕಾರಿಗಳು, ಸಿ.ಆರ್.ಪಿ., ಸದಸ್ಯರ ಸಮರ್ಪಿತ ಸೇವೆ ಮತ್ತು ಶ್ರಮದ ಫಲವಾಗಿ ಜಿಲ್ಲಾಮಟ್ಟದ ಪ್ರಶಸ್ತಿ ಲಭಿಸಿದೆ ಎಂದು ಅಭಿಪ್ರಾಯಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಬೇಕು. ಎಲ್ಲರೂ ಆ ನಿಟ್ಟಿನಲ್ಲಿ ಶ್ರಮವಹಿಸಬೇಕು ಎಂದು ಆಶಿಸಿದರು.