ನನ್ನನ್ನು ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಗೆ ಕರೆದೊಯ್ಯಲಾಯಿತು. ಅಲ್ಲಿ ತಿಮರೋಡಿ ನನಗೆ ಅಶ್ಲೀಲ ಭಾಷೆಯಲ್ಲಿ ನಿಂದಿಸಿ, ತಪ್ಪು ಸ್ಥಳ ತೋರಿಸಿದ್ದೇನೆಂದು ಆರೋಪಿಸಿದರು. ಗಿರೀಶ್ ಮಟ್ಟಣ್ಣನವರ್ ನನ್ನ ತಲೆಯನ್ನು ಗೋಡೆಗೆ ಚಚ್ಚಿ ಗಾಯಗೊಳಿಸಿದರು. ಮಹೇಶ್ ಶೆಟ್ಟಿ ತಿಮರೋಡಿ ನನ್ನ ಬೆನ್ನ ಮೇಲೆ ಮೊಣಕಾಲೂರಿ, ನಾವು ಹೇಳಿದಂತೆ ಕೇಳದಿದ್ದರೆ ಎಲುಬು ಮುರಿಯುತ್ತೇವೆ ಎಂದು ಬೆದರಿಸಿದರು. ಧರ್ಮಸ್ಥಳದ ಧರ್ಮಾಧಿಕಾರಿ ಯನ್ನು ಜೈಲಿಗೆ ಕಳುಹಿಸುತ್ತಾನೆ ಎಂದು ನನ್ನ ಮೇಲೆ ನಂಬಿಕೆ ಇಟ್ಟಿದ್ದರೂ ಅದು ಸಾಧ್ಯವಾಗುತ್ತಿಲ್ಲವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ನನ್ನ ವಿರುದ್ಧ ಜಾತಿ ಹೆಸರು ತೆಗೆದು ನಿಂದನೆ ಮಾಡಿದರು ಎಂದು ತಿಳಿಸಿದ್ದಾನೆ.

ಮರುದಿನ ನಾವು ಹೇಳಿದ ಸ್ಥಳಗಳನ್ನು ತೋರಿಸುವಂತೆ ನಿರಂತರ ಒತ್ತಡ ಹೇರಿದ ಮತ್ತು ಬಲವಂತ ಮಾಡಿದ್ದಕ್ಕೆ ನಾನು ಅವರು ಸೂಚಿಸಿದ ಸ್ಥಳಗಳ ಬದಲು ಯಾವುದೇ ತಲೆಬುರುಡೆ ಅಥವಾ ಅಸ್ಥಿ ಅವಶೇಷ ಸಿಗದ ಸಮೀಪದ ಸ್ಥಳಗಳನ್ನು ಉದ್ದೇಶಪೂರ್ವಕವಾಗಿ ತೋರಿಸಿದೆ. ಇದರಿಂದ ಕೆರಳಿದ ತಿಮರೋಡಿ ಚಾಕು ಹಿಡಿದು ನನ್ನ ಕೊಂದು ಅದೇ ಜಾಗದಲ್ಲಿ ಹೂಳಿಬಿಡುವುದಾಗಿ ಬೆದರಿಕೆ ಹಾಕಿದರು. ಇದರಿಂದ ನನಗೆ ತೀವ್ರ ಭಯವಾಯಿತು. ನಾನು ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ ಒಳಗಾದೆ. ತಿಮರೋಡಿ ನನ್ನ ಮೇಲೆ ಹೇರಿದ ಸೂಚನೆಗಳನ್ನು ಪಾಲಿಸಲು ನನಗೆ ಸಾಧ್ಯವಾಗಲಿಲ್ಲ. ಧರ್ಮಸ್ಥಳದ ವಿರುದ್ಧ ಸುಳ್ಳು ಸಾಕ್ಷ್ಯ ನೀಡಲು ಆತ್ಮಸಾಕ್ಷಿ ಅನುಮತಿಸಲಿಲ್ಲ. ನಾನು ಜೀವಂತ ಇದ್ದರೆ ನನ್ನ ಸುಳ್ಳು ಸಾಕ್ಷ್ಯದಿಂದ ಧರ್ಮಸ್ಥಳದ ಧರ್ಮಾಧಿಕಾರಿಯವರಿಗೆ ಹಾನಿ ಆಗಬಹುದೆಂದು ಭಾವಿಸಿ, ಜೀವವನ್ನೇ ತೆಗೆದುಕೊಳ್ಳಲು ಪ್ರಯತ್ನಿಸಿದೆ. ಗಿರೀಶ್ ಮಟ್ಟಣ್ಣನವರ್ ಮತ್ತು ಅವರ ಸಹಚರರು ನನ್ನ ತಡೆದು, ತಾವು ಬಯಸಿದ ಸುಳ್ಳು ಸಾಕ್ಷ್ಯ ನೀಡಲು ಬೇರೆ ಯಾರೂ ಇಲ್ಲ ಎಂದು ಹೇಳಿ ಹಲ್ಲೆ ಮಾಡಿದರು ಎಂದು ಅರ್ಜಿಯಲ್ಲಿ ಚಿನ್ನಯ್ಯ ಹೇಳಿಕೊಂಡಿದ್ದಾನೆ.

ಇಡೀ ರಾತ್ರಿ ಪರಿಸ್ಥಿತಿಯ ಬಗ್ಗೆ ಆಲೋಚಿಸಿ, ನಾನು ಸಿಕ್ಕಿ ಬಿದ್ದಿರುವೆನು ಮತ್ತು ತಿಮರೋಡಿ ಹಾಗೂ ಮಟ್ಟಣ್ಣನವರ್ ಅವರನ್ನು ನಿಯಂತ್ರಿಸುತ್ತಿರುವ ವ್ಯಕ್ತಿಗಳು ನನ್ನನ್ನು ಕೊಲ್ಲಬಹುದು. ಹಾಗಾಗಿ ಸೂಕ್ತ ಅಧಿಕಾರಿಗಳ ಮುಂದೆ ಸತ್ಯ ಬಹಿರಂಗಪಡಿಸಲು ನಿಶ್ಚಯಿಸಿದೆ. ಆ ಮೇಲೆ, ನಾನು ಎಸ್ ಐಟಿ ಅಧಿಕಾರಿಗಳ ಮುಂದೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ, ಜಯಂತ್, ಕುಡ್ಲ ರಾಮ್ ಪೇಜ್‌ನ ಅಜಯ್ ಅಂಚನ್, ಸಮೀರ್ ಎಂ.ಡಿ. ಮತ್ತು ಇತರರು ಧರ್ಮಸ್ಥಳದ ವಿರುದ್ಧ ರೂಪಿಸಿದ ಷಡ್ಯಂತ್ರದ ಬಗ್ಗೆ ತಿಳಿಸಿದೆ ಎಂದಿದ್ದಾನೆ.

ಎಸ್‌ಐಟಿ ಅಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ನ್ಯಾಯಾಲಯದ ಮುಂದೆ ಧರ್ಮಸ್ಥಳ ದೇವಸ್ಥಾನ ಮತ್ತು ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ರಚಿಸಿದ ಷಡ್ಯಂತ್ರವನ್ನು ಹಾಗೂ ತಮ್ಮನ್ನು ಶೋಷಿಸಿ ದುರ್ಬಳಕೆ ಮಾಡಿಕೊಂಡ ರೀತಿಯನ್ನು ಬಹಿರಂಗಪಡಿಸಿದೆ. ನ್ಯಾಯಾಲಯ ನನ್ನ ವಿರುದ್ಧ ದಾಖಲಾದ ಕ್ರೈಂ ನಂಬರ್೩೯/೨೦೨೫ (ಎಫ್‌ಐಆರ್) ಸಂಬAಧ ನನ್ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು ಎಂದು ಚಿನ್ನಯ್ಯ ಅರ್ಜಿಯಲ್ಲಿ ತಿಳಿಸಿದ್ದಾನೆ. - ಕೃಪೆ : ಕನ್ನಡಪ್ರಭ