(ಕಾಯಪಂಡ ಶಶಿ ಸೋಮಯ್ಯ)
ಮಡಿಕೇರಿ, ಜೂ. ೧೩: ಕೊಡಗು ಜಿಲ್ಲೆ ವಿಶೇಷವಾಗಿ ಕೃಷಿ ಪ್ರಧಾನ ಜಿಲ್ಲೆಯಾಗಿ ಈ ಹಿಂದಿನಿAದಲೂ ಪ್ರತೀತಿ ಗಳಿಸಿದೆ. ಆದರೆ ವರ್ಷಗಳು ಉರುಳುತ್ತಿರುವಂತೆ ಈ ಜಿಲ್ಲೆಯಲ್ಲಿ ಕೃಷಿಯ ಪ್ರಮಾಣ ಇಳಿಕೆಯಾಗುತ್ತಲೇ ಬರುತ್ತಿದೆ. ಸುಮಾರು ೩೫ ಸಾವಿರದಿಂದ ೪೦ ಸಾವಿರ ಹೆಕ್ಟೇರ್‌ಗಳಷ್ಟು ಪ್ರದೇಶಗಳಲ್ಲಿ ಈ ಹಿಂದೆ ಭತ್ತದ ಕೃಷಿಯನ್ನು ಮಾಡಲಾಗುತ್ತಿತ್ತು. ಇದೀಗ ವರ್ಷಂಪ್ರತಿ ಈ ವಿಸ್ತೀರ್ಣ ಕಡಿಮೆಯಾಗುತ್ತಿದೆ. ಹತ್ತು - ಹಲವಾರು ಕಾರಡಣಗಳಿಂದ ರೈತರು ಭತ್ತದ ಕೃಷಿಯತ್ತ ನಿರಾಸಕ್ತಿ ತೋರುತ್ತಿದ್ದಾರೆ.
ಬಹುತೇಕ ಕೃಷಿ ಗದ್ದೆಗಳು ಇನ್ನಿತರ ಉದ್ದೇಶಗಳಿಗೆ ಪರಿವರ್ತನೆಗೊಳ್ಳುತ್ತಿವೆ. ಎಲ್ಲೆಡೆ ನಿವೇಶನಗಳು, ಮನೆಗಳು ಏಳುತ್ತಿವೆ. ಇದರೊಂದಿಗೆ ಭೌಗೋಳಿಕವಾಗಿ ಉಂಟಾಗುತ್ತಿರುವ ವ್ಯತ್ಯಾಸಗಳು, ವಾತಾವರಣದ ಏರುಪೇರು, ಕಾಡಾನೆ - ಕಾಡುಹಂದಿಗಳAತಹ ವನ್ಯಪ್ರಾಣಿಗಳ ಕಾಟ, ಉದ್ಯೋಗ ಮತ್ತಿತರ ಕಾರಣಗಳಿಂದ ಯುವ ಜನಾಂಗ, ನಗರ ಪ್ರದೇಶಗಳತ್ತ ತೆರಳುತ್ತಿದ್ದು, ಇಲ್ಲಿ ಕೇವಲ ವಯಸ್ಕರು ಮಾತ್ರ ಇರುವಂತಹ ಪರಿಸ್ಥಿತಿ ಇನ್ನಿತರ ಕಾರಣಗಳಿಂದ ಕೃಷಿ ಕಡಿಮೆಯಾಗುತ್ತಿದೆ. ಇದರೊಂದಿಗೆ ಭತ್ತದ ಗದ್ದೆಗಳಲ್ಲಿ ಭತ್ತದ ಬದಲಾಗಿ, ಕಾಫಿ, ಅಡಿಕೆ, ಬಾಳೆ, ಶುಂಠಿಯAತಹ ಬೇಸಾಯ ಕಂಡು ಬರುತ್ತಿದೆ. ಇದು ಒಂದೆಡೆಯಾದರೆ, ಎಕರೆಗಟ್ಟಲೆ ಗದ್ದೆಗಳು ಪಾಳು ಬೀಳುತ್ತಿರುವುದು ಜಿಲ್ಲೆಯಲ್ಲಿ ಕಂಡುಬರುತ್ತಿರುವ ಈಗಿನ ಸನ್ನವೇಶವಾಗಿದೆ.
ಕಳೆದ ಸಾಲಿನಲ್ಲಿ ೪ ಸಾವಿರ ಹೆಕ್ಟೇರ್ ಕಡಿಮೆ
ಕೃಷಿ ಇಲಾಖೆಯ ಮಾಹಿತಿಯಂತೆ ೨೦೨೫-೨೬ನೇ ಸಾಲಿನಲ್ಲಿ ಮತ್ತೆ ೪ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿ ಕಡಿಮೆಯಾಗಿದೆ. ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ೨೩ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿಯ ಗುರಿ ಹೊಂದಲಾಗಿತ್ತು. ಆದರೆ ಈ ಗುರಿಯಲ್ಲಿ ಕೇವಲ ೧೯ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತ ಬೆಳೆಯಲಾಗಿದ್ದು, ೪ ಸಾವಿರ ಹೆಕ್ಟೇರ್‌ನಲ್ಲಿ ಗುರಿ ಸಾಧನೆಯಾಗಿಲ್ಲ. ಸಾಂಪ್ರದಾಯಿಕವಾಗಿ ಭತ್ತ ಬೆಳೆಯುವ ಹಲವು ಕೃಷಿಕರು ಹಾಗೂ ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಭತ್ತದ ಬೆಳೆಯ ಪುನರೋತ್ಥಾನದ ಚಿಂತನೆ ನಡೆಸಿ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿರುವ ಕೆಲವು ಸಂಘ - ಸಂಸ್ಥೆಗಳ ಮೂಲಕವಷ್ಟೆ ಒಂದಷ್ಟು ಭತ್ತ ಬೆಳೆಯಲಾಗುತ್ತಿದೆ. ಜತೆಗೆ ಹಿಂದಿನಿAದಲೂ ಸಾಂಪ್ರದಾಯಿಕ ಕೃಷಿಯಲ್ಲಿನ ಆಸಕ್ತಿಯಿಂದ ಕಷ್ಟ - ನಷ್ಟಗಳ ನಡುವೆಯೂ ಭತ್ತ ಬೆಳೆಯುವ ಸಣ್ಣ ರೈತರ ಕೊಡುಗೆಯೂ ಇಲ್ಲಿ ಪ್ರಮುಖವಾಗಿದೆ.
ಹಬ್ಬಗಳೂ ಸಾಂಕೇತಿಕ
ಜಿಲ್ಲೆಯದ್ದೇ ಆದ ಹಬ್ಬ ಹರಿದಿನಗಳು ಕೂಡ ಕೃಷಿಗೆ ಪೂರಕವಾಗಿರುವುದು ಕೊಡಗಿನ ವಿಶೇಷತೆಯಾಗಿದೆ. ಆದರೆ, ಪ್ರಸ್ತುತದ ವರ್ಷಗಳಲ್ಲಿ ಈ ಹಬ್ಬಾಚರಣೆಗಳೂ ಕೂಡ ಸಾಂಕೇತಿಕವಾಗಿ ಕಂಡುಬರುತ್ತಿದೆ. ಪುತ್ತರಿ (ಹುತ್ತರಿ) ಸಂದರ್ಭದಲ್ಲಿ ಮನೆಯಂಗಳದಲ್ಲಿ ಹೂಕುಂಡಗಳಲ್ಲಿ ಕದಿರು ತೆಗೆಯುವ ಪ್ರಸಂಗ ಇದಕ್ಕೆ ಸಾಕ್ಷಿಯಾಗಿದೆ.
ಈ ಬಾರಿ ೧೯ ಸಾವಿರ ಹೆಕ್ಟೇರ್ ಗುರಿ
ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ೧೯ ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ಕಳೆದ ವರ್ಷದ ಗುರಿಯನ್ನು ಬೆಳೆ ಸಮೀಕ್ಷೆ ಮೂಲಕ ಕೃಷಿ ಇಲಾಖೆಯ ಕೇಂದ್ರ ಕಚೇರಿ ಮೂಲಕ ನಡೆಸಲಾಗಿದ್ದು, ೨೩ ಸಾವಿರ ಹೆಕ್ಟೇರ್ ಗುರಿಯಲ್ಲಿ ಕೇವಲ ೧೯ ಸಾವಿರ ಹೆಕ್ಟೇರ್‌ನಲ್ಲಿ ಗುರಿ ಸಾಧನೆಯಾಗಿದೆ. ಈ ವರ್ಷ ಇಷ್ಟು ಹೆಕ್ಟೇರ್ ಪ್ರದೇಶವನ್ನು ಮಾತ್ರ ಪರಿಗಣಿಸಲಾಗುತ್ತಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಕೃಷಿ ಇಲಾಖೆಯ ಎಂದಿನ ಕೆಲಸ
ಈ ಬಾರಿಯೂ ಕೃಷಿಕರಿಗೆ ಅನುಕೂಲವಾಗುವಂತೆ ರೈತರಿಗೆ ಕೃಷಿ ಇಲಾಖೆಯ ಮೂಲಕ ಬಿತ್ತನೆ ಬೀಜವನ್ನು ಒದಗಿಸಲು ಕೃಷಿ ಇಲಾಖೆ ಕಾರ್ಯೋನ್ಮುಖವಾಗಿದೆ. ಜಿಲ್ಲೆಯ ಒಟ್ಟು ೧೬ ರೈತ ಸಂಪರ್ಕ ಕೇಂದ್ರಗಳ ಮೂಲಕ ಭತ್ತದ ಬಿತ್ತನೆ ಬೀಜವನ್ನು ದಾಸ್ತಾನು ಮಾಡಲಾಗಿದ್ದು, ಇದೀಗ ವಿತರಣೆಯೂ ಆರಂಭಗೊAಡಿದೆ. ಆರ್.ಎನ್.ಆರ್, ತುಂಗಾ, ಐ.ಆರ್ ೬೪, ಅತಿರಾ, ಇಂಟಾನ್ ಸೇರಿದಂತೆ ಸ್ಥಳೀಯವಾಗಿ ಬೆಳೆಯುವ ಭತ್ತದ ಬಿತ್ತನೆ ಬೀಜಗಳು ಲಭ್ಯವಿರುವುದಾಗಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್ ಅವರು ತಿಳಿಸಿದ್ದಾರೆ. ಜಿಲ್ಲೆಗೆ ೧೩೫೨ ಕ್ವಿಂಟಾಲ್‌ನಷ್ಟು ಬಿತ್ತನೆ ಬೀಜದ ಅಗತ್ಯವಿದೆ. ಪ್ರಸ್ತುತ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿಯೂ ಸಾಮರ್ಥ್ಯಕ್ಕೆ ತಕ್ಕಂತೆ ದಾಸ್ತಾನು ಇದೆ. ರೈತರು ಈಗಾಗಲೇ ಬಿತ್ತನೆ ಬೀಜ ಪಡೆಯುತ್ತಿದ್ದಾರೆ. ಆದರೆ ಈ ಬಾರಿ ಮಳೆ ಕ್ಷೀಣವಾಗಿ ಕಂಡು ಬರುತ್ತಿರುವುದು ಸಸಿಮಡಿಗೆ ಒಂದಷ್ಟು ವಿಳಂಬವಾಗಿ ಕಂಡಬರುತ್ತಿದೆ ಎಂದು ಅವರು ತಿಳಿಸಿದ್ದಾರೆ.