ಗೋಣಿಕೊಪ್ಪಲು, ಜೂ. ೧೩: ದ. ಕೊಡಗಿನ ಅರಣ್ಯ ಪ್ರದೇಶದಲ್ಲಿ ಆತಂಕದ ವಾತಾವರಣ ಮುಂದುವರೆದಿದೆ. ಮನುಷ್ಯನ ಪ್ರಾಣತೆಗೆದ ಕಾಡಾನೆಯನ್ನು ಹಿಡಿಯಲು ಅರಣ್ಯ ಇಲಾಖೆ ನಡೆಸುತ್ತಿರುವ ಕಾರ್ಯಾಚರಣೆಗೆ ಇದೀಗ ಒಂದು ವಾರ ಕಳೆದರೂ ಯಾವುದೇ ಸುಳಿವು ಸಿಕ್ಕಿಲ್ಲ. ಕೋಣನಕಟ್ಟೆ ಸುತ್ತಮುತ್ತಲಿನ ಅರಣ್ಯ ಪ್ರದೇಶ, ರೈತರ ಬೆಳೆಗಾರರ ಕಾಫಿ ತೋಟವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಜಾಲಾಡಿದರೂ ಕೂಡ ಸಂಧ್ಯಾ ಅವರನ್ನು ಬಲಿ ತೆಗೆದುಕೊಂಡಿದ್ದ ಹಂತಕ ಕಾಡಾನೆಯ ಸುಳಿವು ಮಾತ್ರ ಇನ್ನೂ ಲಭಿಸಿಲ್ಲ.

ಕಳೆದೊಂದು ವಾರದಿಂದ ತಿತಿಮತಿ ಮತ್ತು ಸುತ್ತಮುತ್ತಲ ಅರಣ್ಯ ಪ್ರದೇಶದಲ್ಲಿ ಭಯದ ನೆರಳು ಕವಿದಿದೆ. ಹಂತಕ ಕಾಡಾನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ರೈತರ ಕಾಫಿ ತೋಟಗಳು, ದಟ್ಟ ಅರಣ್ಯದ ಪ್ರತಿ ಇಂಚಿನಲ್ಲೂ ಹುಡುಕಾಟ ನಡೆಸುತ್ತಿದ್ದಾರೆ.

ಈ ಕಾರ್ಯಾಚರಣೆಗೆ ಬೆಂಬಲವಾಗಿ ತಿತಿಮತಿ ಮತ್ತಿಗೋಡು ಆನೆ ಶಿಬಿರದ ೬ ಸಾಕಾನೆಗಳನ್ನು ಸಿದ್ಧವಾಗಿ ಇಡಲಾಗಿದೆ. ಕಾಡಾನೆ ಸುಳಿವು ಸಿಗುತ್ತಿದ್ದಂತೆಯೇ ಕೂಡಲೇ ಆ ಸ್ಥಳಕ್ಕೆ ತೆರಳಲು ಹಾಗೂ ಅದನ್ನು ಕಟ್ಟಿಹಾಕಲು ಸಕಲ ಸಿದ್ಧತೆಗಳು ನಡೆದಿದೆ. ಅರಣ್ಯ ಇಲಾಖೆಯ ವೈದ್ಯರು ಅರವಳಿಕೆ ತಜ್ಞರು ಆನೆಗಾಗಿ ಕಾದು ಕುಳಿತ್ತಿದ್ದಾರೆ.

ಆನೆಯ ನಿಖರವಾದ ಸ್ಥಳವನ್ನು ಪತ್ತೆ ಹಚ್ಚಲು ಅತ್ಯಾಧುನಿಕ ಡ್ರೋನ್ ತಂತ್ರಜ್ಞಾನವನ್ನೂ ಈಗಾಗಲೇ ಬಳಸಲಾಗಿದೆ. ಆದರೆ ಡ್ರೋನ್ ಕಣ್ಣುಗಳಿಗೂ ಆನೆ ಸಿಗುತ್ತಿಲ್ಲ. ಇದರಿಂದಾಗಿ ಕಾರ್ಯಾಚರಣೆಯಲ್ಲಿ ತೊಡಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಕಂಗಾಲಾಗಿದ್ದಾರೆ. ತಿತಿಮತಿ ವಲಯದ ಅರಣ್ಯ ಅಧಿಕಾರಿಗಳು ಮತ್ತು ಮತ್ತಿಗೋಡು ವನ್ಯಜೀವಿ ವಿಭಾಗದ ಸಿಬ್ಬಂದಿ ಕಾಡಾನೆಯನ್ನು ಸೆರೆ ಹಿಡಿಯಲೇಬೇಕೆಂಬ ದೃಢ ನಿರ್ಧಾರದೊಂದಿಗೆ ಕಾರ್ಯಾಚರಣೆಯಲ್ಲಿ ಮುಂದುವರೆದಿದ್ದಾರೆ. ತಿತಿಮತಿ ಅರಣ್ಯ ವಲಯ ಆರ್‌ಎಫ್‌ಒ ಗಂಗಾಧರ್, ಮತ್ತಿಗೋಡು ವನ್ಯಜೀವಿ ವಿಭಾಗದ ದೇವರಾಜ್ ಸೇರಿದಂತೆ ಇಲಾಖೆಯ ಸಿಬ್ಬಂದಿ ಕೂಬಿಂಗ್ ಮುಂದುವರೆಸಿದ್ದಾರೆ. -ಹೆಚ್.ಕೆ. ಜಗದೀಶ್