ಮಡಿಕೇರಿ, ಜೂ. ೧೨: ಮಕ್ಕಳು ಭವಿಷ್ಯದ ಪ್ರಜೆಗಳಾಗಿದ್ದು, ಮಕ್ಕಳಿಗೆ ಶಿಕ್ಷಣ, ಆರೋಗ್ಯ, ಆಟ-ಪಾಠ ಮತ್ತು ಸುರಕ್ಷಿತಾ ಬಾಲ್ಯ ದೊರೆಯುವುದು ಮೂಲಭೂತ ಹಕ್ಕಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ಬೆಳವಣಿಗೆಗೆ ಗಮನಹರಿಸಬೇಕು ಎಂದು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಸಿ.ಕೆ. ಬಸವರಾಜ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಕ್ಕಳ ವಿಶೇಷ ಪೊಲೀಸ್ ಘಟಕ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಮಕ್ಕಳ ರಕ್ಷಣಾ ಘಟಕ, ಮಡಿಕೇರಿ ವಕೀಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಡತನ, ಅಜ್ಞಾನ, ನಿರುದ್ಯೋಗ ಮತ್ತು ಸಾಮಾಜಿಕ ಸಮಸ್ಯೆಗಳ ಕಾರಣದಿಂದ ಅನೇಕ ಮಕ್ಕಳು ಕಾರ್ಖಾನೆ, ಹೊಟೇಲ್, ಅಂಗಡಿಗಳಲ್ಲಿ ಕೆಲಸದಲ್ಲಿ ತೊಡಗಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಇದನ್ನು ತಪ್ಪಿಸಿ ೧೪ ವರ್ಷದೊಳಗಿನ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು ಎಂದು ಅವರು ಸಲಹೆ ನೀಡಿದರು.

ಮಕ್ಕಳು ರಾಷ್ಟçದ ಅಮೂಲ್ಯ ಆಸ್ತಿ ಹಾಗೂ ಭವಿಷ್ಯದ ನಿರ್ಮಾತೃಗಳಾಗಿದ್ದು, ಶಾಲೆಯಲ್ಲಿ ಕಲಿಯಬೇಕಾದ, ಆಟವಾಡಬೇಕಾದ ಮತ್ತು ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕಾದ ವಯಸ್ಸಿನಲ್ಲಿ ದುಡಿಮೆಗೆ ತಳ್ಳಲ್ಪಡುವುದು ಅತ್ಯಂತ ವಿಷಾದನೀಯ ಎಂದರು.

ಸರ್ಕಾರ ಪ್ರತಿಯೊಬ್ಬ ವಿದ್ಯಾರ್ಥಿಗೂ ಮಧ್ಯಾಹ್ನದ ಬಿಸಿಯೂಟ, ವಿದ್ಯಾರ್ಥಿ ನಿಲಯ, ವಸತಿ ಶಾಲೆಗಳು, ಶಿಷ್ಯವೇತನ, ಉಚಿತ ಬಸ್‌ಪಾಸ್ ವ್ಯವಸ್ಥೆ ಹೀಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳನ್ನು ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಎಷ್ಟೆ ಕಷ್ಟ ಬಂದರೂ ಸಹ ಶಿಕ್ಷಣದಿಂದ ವಂಚಿತರಾಗಬಾರದು.

ಬಾಲ ಕಾರ್ಮಿಕ ಪದ್ಧತಿಯಿಂದ ಮಕ್ಕಳ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆ ಕುಂಠಿತವಾಗಲಿದೆ. ಇದರಿಂದ ಶಿಕ್ಷಣದ ಹಕ್ಕು ಮೊಟಕುಗೊಳ್ಳಲಿದೆ. ಮಕ್ಕಳ ಭವಿಷ್ಯದ ಕನಸು ನಶಿಸುತ್ತದೆ. ಆದ್ದರಿಂದ ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ.

ಸಂವಿಧಾನದ ಮತ್ತು ವಿವಿಧ ಕಾನೂನುಗಳು ಮಕ್ಕಳ ರಕ್ಷಣೆಗೆ ವಿಶೇಷ ಮಹತ್ವ ನೀಡಿವೆ. ಭಾರತೀಯ ಸಂವಿಧಾನದ ಅನುಚ್ಛೇದ ೨೪ ರ ಪ್ರಕಾರ ೧೪ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕಾರ್ಖಾನೆ, ಗಣಿ ಅಥವಾ ಇತರೆ ಅಪಾಯಕಾರಿ ಉದ್ಯೋಗಗಳಲ್ಲಿ ನೇಮಿಸಿಕೊಳ್ಳುವುದನ್ನು ನಿಷೇಧಿಸಿದೆ. ಹಾಗೆಯೇ ಅನುಚ್ಛೇದ ೨೧ ಎ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ನೀಡಿದೆ ಎಂದು ಬಸವರಾಜು ಅವರು ವಿವರಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ಮಕ್ಕಳಿಗೆ ಬಾಲ್ಯ ಒಂದು ಉತ್ತಮ ಘಟ್ಟವಾಗಿದೆ. ಬಾಲ್ಯದಲ್ಲಿ ಸದಾ ಚಟುವಟಿಕೆಯಿಂದ ಇರಬೇಕು.

ಬಾಲ್ಯದಲ್ಲಿ ಆಟವಾಡಿದ ನೆನಪು ಸದಾ ಸ್ಮರಿಸುವಂತಿರಬೇಕು. ಇದರಿಂದ ಮಕ್ಕಳಲ್ಲಿ ಕ್ರಿಯಾಶೀಲತೆ ಕಾಣಬಹುದು. ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ದುಡಿಮೆಗೆ ದೂಡುವುದು ಕಡಿಮೆಯಾಗಿದೆ. ಆದರೂ ಸಹ ಸಂಪೂರ್ಣವಾಗಿ ಮಕ್ಕಳ ಬಾಲ್ಯ ವ್ಯವಸ್ಥೆಯನ್ನು ಗೌರವಿಸಿ ಅವರ ಕ್ರಿಯಾಶೀಲ ಬೆಳವಣಿಗೆಗೆ ಪ್ರೋತ್ಸಾಹಿಸಬೇಕು.

ಇತ್ತೀಚಿನ ದಿನಗಳಲ್ಲಿ ಮಕ್ಕಳು ಮಾದಕ ವಸ್ತುಗಳ ವ್ಯಸನಕ್ಕೆ ತುತ್ತಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಮಾದಕ ವಸ್ತುಗಳ ಮಾರಾಟ, ಸೇವನೆ ಕಂಡುಬAದಲ್ಲಿ ಮಾಹಿತಿ ನೀಡುವಂತಾಗಬೇಕು. ಮುಚ್ಚಿಡುವ ಪ್ರಯತ್ನ ಆಗಬಾರದು ಎಂದರು.

ಬಾಲಕಾರ್ಮಿಕ ಪದ್ಧತಿ ಹಾಗೂ ಬಾಲ್ಯ ವಿವಾಹ ಒಂದು ಸಾಮಾಜಿಕ ಪಿಡುಗು ಆಗಿದ್ದು, ಇವುಗಳನ್ನು ನಿರ್ಮೂಲನೆ ಮಾಡಲು ಎಲ್ಲರೂ ಪ್ರಯತ್ನಿಸಬೇಕು ಎಂದರು.

ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಮಾತನಾಡಿ, ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು. ಶಿಕ್ಷಣ, ಆರೋಗ್ಯ ಮತ್ತು ಶಿಸ್ತುಬದ್ಧ ಜೀವನಕ್ಕೆ ಒತ್ತು ನೀಡಬೇಕು. ಮಕ್ಕಳಿಗೆ ಒಳ್ಳೆಯ ನೀತಿ ಮತ್ತು ಮೌಲ್ಯವನ್ನು ಕಲಿಸಬೇಕು. ಇದರಿಂದ ಉತ್ತಮ ನಾಗರಿಕರಾಗಿ ಬೆಳೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜು ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ‘ಉತ್ತಮ ಕಲಿಕೆ, ಉಜ್ವಲ ಭವಿಷ್ಯ’ ಘೋಷ ವಾಕ್ಯ ಪ್ರಕಟಿಸಿದೆ. ಈ ನಿಟ್ಟಿನಲ್ಲಿ ಕಲಿಕೆಗೆ ಒತ್ತು ನೀಡಿ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು ಎಂದರು.

ಬಾಲ್ಯವ್ಯವಸ್ಥೆ ಹಾಗೂ ಕಿಶೋರ ವ್ಯವಸ್ಥೆ ಕಾರ್ಮಿಕ ಕಾಯ್ದೆ ಕುರಿತು ವಕೀಲ ಯಾಲದಾಳು ಮನೋಜ್ ಬೋಪಯ್ಯ ಮಾತನಾಡಿ, ಕಾನೂನು, ನಿಯಮಗಳು ಏನೇ ಇದ್ದರೂ ಸಹ ಸ್ವಯಂ ನಿರ್ವಹಣೆ ಮತ್ತು ಪಾಲನೆ ಅತೀ ಮುಖ್ಯ. ಮಕ್ಕಳ ರಕ್ಷಣೆ ಮತ್ತು ಕಾನೂನು ಕಟ್ಟುಪಾಡುಗಳನ್ನು ಪಾಲಿಸುವುದು ಹಿಂದಿನಿAದಲೂ ಇದ್ದು, ಬಾಲ್ಯ ವ್ಯವಸ್ಥೆಯಲ್ಲಿ ಕ್ರಿಯಾಶೀಲತೆ ಮತ್ತು ಕೌಶಲ್ಯತೆಯನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದರು.

ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ ೨೦೨೬ರ ಪ್ರಕಾರ ೧೪ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ಕೆಲಸಕ್ಕೆ ನೇಮಿಸುವುದು ಕಾನೂನು ಬಾಹಿರವಾಗಿದೆ. ೧೪ ರಿಂದ ೧೮ ವರ್ಷ ವಯಸ್ಸಿನ ಕಿಶೋರರನ್ನು ಅಪಾಯಕಾರಿ ಉದ್ಯೋಗಗಳಲ್ಲಿ ಕೆಲಸಕ್ಕೆ ನೇಮಿಸುವುದನ್ನೂ ಈ ಕಾಯ್ದೆ ನಿಷೇಧಿಸಿದೆ. ಕಾನೂನು ಉಲ್ಲಂಘಿಸುವವರಿಗೆ ದಂಡ ಹಾಗೂ ಜೈಲು ಶಿಕ್ಷೆಯನ್ನೂ ವಿಧಿಸಲಾಗುತ್ತದೆ ಎಂದರು.

ಕಾರ್ಮಿಕ ಇಲಾಖೆಯ ತಾಲೂಕು ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಎA. ಯತ್ನಟ್ಟಿ ಮಾತನಾಡಿ, ಕೊಡಗು ಜಿಲ್ಲೆ ಬಾಲಕಾರ್ಮಿಕ ಮುಕ್ತ ಜಿಲ್ಲೆ ಎಂಬ ಕೀರ್ತಿಗೆ ಪಾತ್ರವಾಗಬೇಕೆಂಬ ಮಹಾತ್ವಾಕಾಂಕ್ಷೆಯಿAದ ಜಿಲ್ಲೆಯಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಸ್ಥಾಪಿಸಲಾಗಿದೆ. ಅದರಂತೆ ೨೦೧೭ ರಿಂದ ಇಲ್ಲಿಯವರಗೆ ಸುಮಾರು ೩,೪೫೫ ತಪಾಸಣೆ ಕೈಗೊಂಡಿದ್ದು, ೩೦ ಬಾಲಕಾರ್ಮಿಕರು ಹಾಗೂ ೬೪ ಕಿಶೋರ ಕಾರ್ಮಿಕರು ಕಂಡುಬAದಿದ್ದು, ಇವರುಗಳ ಪೈಕಿ ೩೭ ಮಕ್ಕಳನ್ನು ಪುನರ್ವಸತಿಗೊಳಿಸಲಾಗಿದ್ದು, ಇನ್ನುಳಿದ ೫೭ ಮಕ್ಕಳನ್ನು ಪೋಷಕರ ವಶಕ್ಕೆ ಒಪ್ಪಿಸಲಾಗಿದೆ ಎಂದರು.

ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಆರ್. ಶೀರಾಝ್ ಅಹ್ಮದ್ ಅವರನ್ನು ಬಾಲ ಹಾಗೂ ಕಿಶೋರ ಕಾರ್ಮಿಕರನ್ನು ರಕ್ಷಿಸುವಲ್ಲಿ ಉತ್ತಮ ಕೆಲಸ ನಿರ್ವಹಿಸಿದ್ದಕ್ಕಾಗಿ ಇದೇ ಸಂದರ್ಭ ಸನ್ಮಾನಿಸಲಾಯಿತು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ವಿ. ಅಂಬಿಕಾ ಇತರರು ಇದ್ದರು. ಹಿರಿಯ ಕಾರ್ಮಿಕ ನಿರೀಕ್ಷಕ ಎಸ್. ಶಶಿಧರ್ ಸ್ವಾಗತಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಬಿ.ಎಸ್. ಜಯಪ್ಪ ನಿರೂಪಿಸಿದರು. ಕಾರ್ಮಿಕ ಇಲಾಖೆಯ ಪ್ರಥಮ ದರ್ಜೆ ಸಹಾಯಕಿ ಯಶೋಧ ಪ್ರಾರ್ಥಿಸಿದರು. ಕೊಡಗು ವಿದ್ಯಾಲಯದ ವಿದ್ಯಾರ್ಥಿನಿಯರು ನಾಡಗೀತೆ ಮತ್ತು ವಂದೇಮಾತರA ಗೀತೆ ಹಾಡಿದರು. ಗಿರೀಶ್ ಮತ್ತು ತಂಡದವರು ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಮಹತ್ವದ ಕುರಿತು ಹಾಡಿದರು.