- ಅಣ್ಣೀರ ಹರೀಶ್ ಮಾದಪ್ಪ
ಶ್ರೀಮಂಗಲ, ಜೂ. ೧೨: ಸತತ ಎರಡನೇ ವರ್ಷವೂ ಮುಂಗಾರು ಸಂದರ್ಭದಲ್ಲಿ ರಸಗೊಬ್ಬರ ದರ ಮತ್ತೆ ಏರಿಕೆಯಾಗಿದ್ದು, ಬಲು ಭಾರವಾದ ಹೊರೆಯನ್ನು ರೈತ, ರಸಗೊಬ್ಬರ ದರ ಏರಿಕೆ ಮೂಲಕ ಹೊರಬೇಕಾಗಿದೆ.ರಸಗೊಬ್ಬರ ದರ ಏರಿಕೆಯಿಂದ ರೈತರು ಬೆಳೆಯುವ ಬೆಳೆಗಳಿಗೆ ಮತ್ತಷ್ಟು ಉತ್ಪಾದನಾ ವೆಚ್ಚ ಹೆಚ್ಚಳವಾಗಲಿದ್ದು, ತಾವು ಪಡೆಯುವ ಲಾಭದ ಪ್ರಮಾಣ ಇಳಿಮುಖವಾಗಲಿದೆ.
ಹವಾಮಾನ ವೈಪರೀತ್ಯ, ಮಾರುಕಟ್ಟೆ ಅಸ್ಥಿರತೆ, ಬೆಲೆ ಕುಸಿತ, ಅವೈಜ್ಞಾನಿಕ ಮಾರುಕಟ್ಟೆ, ದಲ್ಲಾಳಿಗಳ ಹಾವಳಿ, ವನ್ಯಪ್ರಾಣಿಗಳ ಉಪಟಳ, ಕಾರ್ಮಿಕರ ಕೊರತೆ, ಕಾರ್ಮಿಕರ ವೇತನ ಹೆಚ್ಚಳ, ಕಾರ್ಮಿಕರ ದುಡಿಮೆ ಸಮಯ ಕಡಿತ ಹಾಗೂ ಲಭ್ಯವಿರುವ ಕಾರ್ಮಿಕರಲ್ಲಿ ಕೌಶಲ್ಯತೆ ಕೊರತೆ, ವನ್ಯಪ್ರಾಣಿ ಹಾವಳಿ ಸೇರಿದಂತೆ ಹಲವಾರು ಸಮಸ್ಯೆಗಳಿಂದ ನಲುಗಿರುವ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ಆಧಾರಿತ ರೈತ ಸಮುದಾಯ ಇದೀಗ ಮತ್ತೆ ಮುಂಗಾರು ಮುನ್ನ ರಸಗೊಬ್ಬರ ದರ ತೀವ್ರ ಹೆಚ್ಚಳದಿಂದ ನಲುಗುವಂತೆ ಆಗಿದೆ.
ಮುಂಗಾರು ಮುನ್ನ ಬೆಳೆಗಳಿಗೆ ಪೋಷ ಕಾಂಶವನ್ನು ನೀಡಬೇಕಾದ ಅನಿವಾರ್ಯತೆಯಲ್ಲಿ ರಸಗೊಬ್ಬರ ಬಳಕೆ ಅನಿವಾರ್ಯವಾಗಿದೆ. ಆದರೆ ಸಾರಜನಕ, ರಂಜಕ, ಪೊಟ್ಯಾಷ್ ರಸಗೊಬ್ಬರಗಳು ಭಾರಿ ಏರಿಕೆಯನ್ನು ಕಂಡಿದ್ದು, ಇದರೊಂದಿಗೆ ಲಘು ಪೋಷಕಾಂಶ ರಸಗೊಬ್ಬರಗಳು ಸಹ ಏರಿಕೆ ಕಂಡಿದೆ
ರಸಗೊಬ್ಬರ ೨೦ :೨೦: ೦:೧೩ ಇದೀಗ ರೂ. ೧,೪೫೦ ರಿಂದ ೮೦೦ ಹೆಚ್ಚಳವಾಗಿದ್ದು ಪ್ರತಿ ಚೀಲಕ್ಕೆ ೩೫೦ ಹೆಚ್ಚಳವಾಗಿದೆ. ಹಾಗೆಯೇ ೧೫ :೧೫:೧೫ ಕಾಂಪ್ಲೆಕ್ಸ್ ರಸಗೊಬ್ಬರ ರೂ. ೧,೬೫೦ ರಿಂದ ೧,೯೫೦ಕ್ಕೆ ಏರಿಕೆಯಾಗಿದ್ದು, ಇದರಿಂದ ಪ್ರತಿ ಚೀಲಕ್ಕೆ ರೂ. ೩೦೦ ಹೆಚ್ಚಳವಾಗಿದೆ.
ಹಾಗೆಯೇ ಮತ್ತೊಂದು ಜನಪ್ರಿಯ ಕಾಂಪ್ಲೆಕ್ಸ್ ರಸಗೊಬ್ಬರ ೧೯: ೧೯:೧೯ ಸಂಪೂರ್ಣ ರೂ. ೧,೮೦೦ ರಿಂದ ೨,೩೦೦ಕ್ಕೆ ಹೆಚ್ಚಳವಾಗಿದ್ದು ಪ್ರತಿ ಚೀಲಕ್ಕೆ ೫೦೦ ರೂಪಾಯಿಯಷ್ಟು ಹೆಚ್ಚಳವಾಗಿದೆ. ಹಾಗೆಯೇ ೧೬ :೧೬: ಕಾಂಪ್ಲೆಕ್ಸ್ ರಸಗೊಬ್ಬರ ರೂ. ೧,೪೭೫ ರಿಂದ ೨,೨೫೦ಕ್ಕೆ ಅಂದರೆ ೭೭೫ ಪ್ರತಿ ಚೀಲಕ್ಕೆ ಹೆಚ್ಚಳವಾಗಿದೆ. ಕಾಳು ಕಟ್ಟಲು ಹಾಗೂ ಬೆಳೆಗಳಿಗೆ ರೋಗಗಳಿಂದ ರಕ್ಷಣೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಎಂಓಪಿ ಪೊಟ್ಯಾಷ್ ರಸಗೊಬ್ಬರ ರೂ. ೧,೬೦೦ ದಿಂದ ೨,೦೦೦ಕ್ಕೆ ಹೆಚ್ಚಳವಾಗಿದ್ದು ಪ್ರತಿ ಚೀಲಕ್ಕೆ ೪೦೦ ಹೆಚ್ಚಳವಾಗಿದೆ. ಜನಪ್ರಿಯ ಇಫ್ಕೋ ಸಂಸ್ಥೆಯ ೧೦:೨೬ :೨೬ ಮತ್ತು ಡಿ.ಎ.ಪಿ. ರಸಗೊಬ್ಬರ ಬಹುತೇಕ ಕಡೆ ದಾಸ್ತಾನು ಲಭ್ಯವಿಲ್ಲದೇ ಕೊರತೆ ಕಂಡು ಬಂದಿದೆ. ಯುರಿಯಾ ರಸಗೊಬ್ಬರ ೨೬೭ ರಿಂದ ೨೯೦ ರಷ್ಟು ಅಂದರೆ ಪ್ರತಿ ಚೀಲಕ್ಕೆ ರೂ. ೨೩ ಹೆಚ್ಚಳವಾಗಿದೆ.
ಯೂರಿಯಾ ರಸಗೊಬ್ಬರ ಒಂದು ಎಕರೆಗೆ ೪೫ ಕೆ.ಜಿ.ಯ ಒಂದು ಬ್ಯಾಗ್ ಮಾತ್ರ ನೀಡಲು ಎಫ್.ಐ.ಡಿ. ಮೂಲಕ ಮಿತಿಗೊಳಿಸಲಾಗಿದೆ. ಯೂರಿಯಾ ಗೊಬ್ಬರ ಎಕರೆಗೆ ಒಂದು ಚೀಲಕ್ಕೆ ಮಿತಿಗೊಳಿಸಿರುವುದರಿಂದ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಮಿಶ್ರಣ ಮಾಡಿ ಬಳಸುವ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಅನ್ನು ಪ್ರತ್ಯೇಕವಾಗಿ ಮಿಶ್ರಣ ಮಾಡಿ ಬಳಸುವುದಕ್ಕೆ ರೈತರಿಗೆ ಸಾಧ್ಯವಿಲ್ಲದಂತಾಗಿದೆ.
ಇದರಿಂದ ರಂಜಕಯುಕ್ತ ಸಿಂಗಲ್ ಸೂಪರ್ ಫಾಸ್ಪೆಟ್ ಮತ್ತು ಟ್ರಿಪಲ್ ಸೂಪರ್ ಪಾಸ್ಪೇಟ್ ಮತ್ತು ರಾಕ್ ಪಾಸ್ಪೆಟ್ ರಸಗೊಬ್ಬರಕ್ಕೆ ಬೇಡಿಕೆ ಕಡಿಮೆಯಾಗಿದೆ.
ಯೂರಿಯಾ ರಸಗೊಬ್ಬರ ಎಕರೆಗೆ ಒಂದು ಚೀಲಕ್ಕೆ ಮಿತಿಗೊಳಿಸಿರುವುದರಿಂದ ಹೆಚ್ಚಿನ ರೈತರು ಇದೀಗ ದುಬಾರಿಯಾದರೂ ಕಾಂಪ್ಲೆಕ್ಸ್ ರಸಗೊಬ್ಬರವನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ಅಮೋನಿಯಂ ಸಲ್ಫೇಟ್ ರಸಗೊಬ್ಬರ ಬಳಸಬಹುದು, ಅದು ಪ್ರತಿ ಚೀಲಕ್ಕೆ ರೂ. ೯೫೦ ದರವಿದ್ದು ಯೂರಿಯಾ ಪೋಷಕಾಂಶಕ್ಕೆ ಸರಿಹೊಂದಿಸಲು ಎರಡು ಚೀಲ ಅಮೋನಿಯಂ ಸಲ್ಫೇಟ್ ಬಳಸಬೇಕಾಗುತ್ತದೆ. ಇದರಿಂದ ದರ ದುಬಾರಿಯಾಗುವ ಹಿನ್ನೆಲೆಯಲ್ಲಿ ಅಮೋನಿಯಂ ಸಲ್ಫೇಟ್ ಬಳಸುವುದಕ್ಕೂ ಸಹ ರೈತರಿಗೆ ಸಂಕಷ್ಟ ಉಂಟಾಗಿದೆ. ಡಿಎಪಿ(ಡೈ ಅಮೋನಿಯಂ ಪಾಸ್ಪೆಟ್) ರಸಗೊಬ್ಬರದಲ್ಲಿ ಶೇ. ೧೮ ಸಾರಜನಕ ಇದ್ದು ಶೇ. ೪೮ ರಂಜಕ ವಿರುತ್ತದೆ. ಯೂರಿಯಾ ಪ್ರಮಾಣ ತಗ್ಗಿಸಲು ಡಿಎಪಿ ರಸಗೊಬ್ಬರಗಳು ಲಭ್ಯವಿಲ್ಲದ ಕಾರಣ ಈ ಆಯ್ಕೆಯು ರೈತನಿಗೆ ಇಲ್ಲದಂತಾಗಿದೆ.
ಹಲವಡೆ ಹಳೆಯ ರಸಗೊಬ್ಬರ ದಾಸ್ತಾನು ಲಭ್ಯವಿದ್ದು ಅದನ್ನು ಹಳೆಯ ದರ ದಲ್ಲಿಯೇ ನೀಡಬೇಕಾಗಿದೆ.
ಕೆಲವೆಡೆ ಹೊಸ ದರದಲ್ಲಿ ಮಾರಾಟ ಮಾಡುತ್ತಿದ್ದು ಈ ಬಗ್ಗೆ ರಸಗೊಬ್ಬರ ಖರೀದಿಸುವ ರೈತರು ಎಚ್ಚರವಹಿಸಿ, ಚೀಲದ ಮೇಲಿರುವ ಗರಿಷ್ಠ ಮಾರಾಟ ಬೆಲೆಯನ್ನು ಪರಿಶೀಲಸಿ ಖರೀದಿಸುವ ಜಾಗೃತೆ ವಹಿಸಬೇಕಾಗಿದೆ ಎಂದು ರೈತ ಮುಖಂಡರು ಕಿವಿಮಾತು ಹೇಳಿದ್ದಾರೆ. ಕಾನೂನು ಪ್ರಕಾರ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚುವರಿಯಾಗಿ ಮಾರಾಟ ಮಾಡುವಂತಿಲ್ಲ. ಆದ್ದರಿಂದ ಚೀಲದ ಮೇಲೆ ನಮೂದಿಸಿರುವ ಗರಿಷ್ಠ ಮಾರಾಟ ಬೆಲೆಗಿಂತ ಕಡಿಮೆ ದರದಲ್ಲಿ ಮಾರಾಟ ಮಾಡಬಹುದೇ ಹೊರತು, ಹೆಚ್ಚಿನ ದರವನ್ನು ವಸೂಲಿ ಮಾಡಿದರೆ ರಶೀತಿ ಪಡೆದು ಕೃಷಿ ಅಧಿಕಾರಿಗಳಿಗೆ ದೂರು ನೀಡಬಹುದು. ಇದಲ್ಲದೆ ಕಾಫಿ, ಕಾಳುಮೆಣಸು ಹಾಗೂ ಅಡಿಕೆ ಇತ್ಯಾದಿ ಕೊಳೆರೋಗ ನಿಯಂತ್ರಣಕ್ಕೆ ಸಿಂಪಡಣೆಗೆ ಬಳಸುವ ಕಾಪರ್ ಸಲ್ಫೇಟ್ ದರವು ಸಹ ಭಾರಿ ಹೆಚ್ಚಳವಾಗಿದೆ. ಕಳೆದ ವರ್ಷ ಮುಂಗಾರು ವೇಳೆ ಕೆ.ಜಿ. ಒಂದಕ್ಕೆ ೩೦೦ ರಿಂದ ೩೨೦ ಇದ್ದ ದರ ಇದೀಗ ೫೦೦ ರಿಂದ ೫೪೦ ವರೆಗೆ ಏರಿಕೆಯಾಗಿದೆ. ಇದು ಮತ್ತೆ ರೈತರಿಗೆ ಹೊರೆಯಾಗಿದ್ದು, ಹೊಸ ದರ ಕೇಳಿ ರೈತ-ಬೆಳೆಗಾರ ಕಂಗಾಲು ಆಗುವಂತಾಗಿದೆ.