ಸೋಮವಾರಪೇಟೆ, ಜೂ. ೧೧: ಸಮೀಪದ ಶುಂಠಿ ಹಾಗೂ ಶುಂಠಿ ಮಂಗಳೂರು ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬೀಟಿಕಟ್ಟೆಯಿಂದ ಸುಂಠಿ ಗ್ರಾಮದವರೆಗಿನ ರಸ್ತೆಯಲ್ಲಿನ ಗುಂಡಿಮುಚ್ಚುವ ಮತ್ತು ದುರಸ್ತಿ ಕಾರ್ಯವನ್ನು ಸ್ವಯಂಪ್ರೇರಿತವಾಗಿ ಮಾಡಿದರು.

ಮಳೆಗಾಲ ಶುರುವಾದ ಬೆನ್ನೆಲ್ಲೇ ಗ್ರಾಮಕ್ಕೆ ವಿದ್ಯುತ್ ಪೂರೈಕೆಯಾಗುವ ೧೧ ಕೆವಿ ವಿದ್ಯುತ್ ತಂತಿಗಳ ಮೇಲೆ ಬಾಗಿದ್ದ ಮರಗಳನ್ನು ತೆರವುಗೊಳಿಸಲಾಯಿತು.

ಗ್ರಾಮಸ್ಥರು ಪ್ರತಿ ವರ್ಷ ಇದೇ ರೀತಿಯ ಶ್ರಮದಾನ ಕಾರ್ಯಗಳನ್ನು ನಡೆಸುತ್ತಿದ್ದು, ಸ್ವಂತ ಖರ್ಚಿನಲ್ಲಿ ರಸ್ತೆ ಗುಂಡಿ ಮುಚ್ಚುವುದು ಹಾಗೂ ಗ್ರಾಮದ ಅಭಿವೃದ್ಧಿ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿರುವುದು ವಿಶೇಷವಾಗಿದೆ.

ಕಾರ್ಯಕ್ರಮದಲ್ಲಿ ಅಧ್ಯಕ್ಷ ವಿನೋದ್ ಎಸ್.ಕೆ, ಉಪಾಧ್ಯಕ್ಷ ಚಿನ್ನಪ್ಪ ಎಸ್.ಆರ್, ಖಜಾಂಜಿ ಗಿರೀಶ್ ಎಸ್.ಎಂ, ಗ್ರಾಮ ಸಲಹೆಗಾರರಾದ ನಾಗರಾಜು ಎಸ್.ಬಿ (ಗುಂಡಣ್ಣ) ಹಾಗೂ ಪಾಂಡು ಎಸ್.ವಿ ಸೇರಿದಂತೆ

ಶುಂಠಿ ಹಾಗೂ ಶುಂಠಿ ಮಂಗಳೂರು ಗ್ರಾಮಸ್ಥರು ಶ್ರಮದಾನದಲ್ಲಿ ಪಾಲ್ಗೊಂಡರು.