ಚೆಟ್ಟಳ್ಳಿ, ಜೂ. ೧೧: ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕೋಳಿ ಮಾಂಸದ ಮಳಿಗೆಗಳ ಟೆಂಡರ್ ಹಾಗೂ ಲೈಸನ್ಸ್ ವಿಚಾರ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಲೈಸನ್ಸ್ ಪಡೆಯದೇ ಕೋಳಿ ಅಂಗಡಿ ನಡೆಸಲಾಗಿದೆ ಎಂಬ ಕಾರಣಕ್ಕೆ ಪಂಚಾಯಿತಿ ಅಧಿಕಾರಿಗಳು ಅಂಗಡಿಗೆ ಬೀಗ ಜಡಿದಿರುವುದು ಸ್ಥಳೀಯವಾಗಿ ವಿವಾದಕ್ಕೆ ಕಾರಣವಾಗಿದೆ.
ಗ್ರಾಮ ಪಂಚಾಯಿತಿಯ ಕೋಳಿ ಮಳಿಗೆಗೆ ಈ ವರ್ಷ ನಡೆದ ಟೆಂಡರ್‌ನಲ್ಲಿ ರೂ. ೬.೬೫ ಲಕ್ಷಕ್ಕೂ ಅಧಿಕ ಮೊತ್ತಕ್ಕೆ ಹರಾಜು ನಡೆದಿದ್ದು, ಪಂಚಾಯಿತಿಗೆ ಉತ್ತಮ ಆದಾಯ ಬಂದಿದೆ. ಆದರೆ ಇದೇ ವೇಳೆ ಕಾಫಿ ಬೋರ್ಡ್ ವ್ಯಾಪ್ತಿಯ ಖಾಸಗಿ ಜಾಗದಲ್ಲಿ ಕೋಳಿ ಮಾಂಸದ ಅಂಗಡಿ ಆರಂಭಿಸಿದ ವ್ಯಕ್ತಿಗೆ ಲೈಸನ್ಸ್ ನೀಡದಿರುವುದು ಹಾಗೂ ಅಂಗಡಿಗೆ ಬೀಗ ಜಡಿದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಚೆಟ್ಟಳ್ಳಿಯಲ್ಲಿ ಕೋಳಿ ಮಾಂಸದ ವ್ಯಾಪಾರದ ವಿಚಾರ ಹೊಸದಲ್ಲ. ಹಲವು ವರ್ಷಗಳಿಂದ ಪಂಚಾಯಿತಿ ಮಳಿಗೆಗಳಿಗೆ ಟೆಂಡರ್ ನೀಡುವ ಜೊತೆಗೆ ಖಾಸಗಿ ಅಂಗಡಿಗಳಿಗೆ ಲೈಸನ್ಸ್ ನೀಡುವ ಪದ್ಧತಿಯೂ ಜಾರಿಯಲ್ಲಿತ್ತು. ನಂತರ ಟೆಂಡರ್ ಪಡೆದವರಿಗೆ ನಷ್ಟವಾಗುತ್ತಿದೆ ಎಂಬ ಆಕ್ಷೇಪಗಳ ಹಿನ್ನೆಲೆಯಲ್ಲಿ ಪಂಚಾಯಿತಿಯಿAದ ಎರಡು ಕಿಲೋ ಮೀಟರ್ ದೂರದಲ್ಲಿ ಮಾತ್ರ ಖಾಸಗಿ ಕೋಳಿ ಅಂಗಡಿಗಳಿಗೆ ಅವಕಾಶ ನೀಡುವ ತೀರ್ಮಾನ ಕೈಗೊಳ್ಳಲಾಗಿತ್ತು ಎನ್ನಲಾಗಿದೆ.
ಪ್ರಸ್ತುತ ಪ್ರಕರಣದಲ್ಲಿ ಅಂಗಡಿ ಪಂಚಾಯಿತಿಯಿAದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿದ್ದರೂ ಲೈಸನ್ಸ್ ನೀಡದೇ ಕ್ರಮ ಕೈಗೊಂಡಿರುವುದು ಸಮಂಜಸವೇ ಎಂಬ ಪ್ರಶ್ನೆ ಉದ್ಭವಿಸಿದೆ. ಹೆಚ್ಚಿಗೆ ಟೆಂಡರ್ ಹಣ ಪಡೆಯಲಾಗಿದ್ದು ಜೊತೆಗೆ ಆಡಳಿತ ಮಂಡಳಿಯ ಅವಧಿ ಮುಗಿದಿರುವುದರಿಂದ ಹೊಸ ಲೈಸನ್ಸ್ ನೀಡಲು ಸಾಧ್ಯವಿಲ್ಲ ಎಂಬುದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಲ್ಪರವರ ಸ್ಪಷ್ಟನೆಯಾಗಿದೆ.
ಈ ವಿವಾದ ಸ್ಥಳೀಯ ವ್ಯಾಪಾರಿಗಳಲ್ಲಿ ಆತಂಕ ಮೂಡಿಸಿದ್ದು, ಭವಿಷ್ಯದಲ್ಲಿ ಕೋಳಿ ಮಾಂಸದ ವ್ಯಾಪಾರ ನಡೆಸಲು ಯಾವ ನಿಯಮಗಳು ಅನ್ವಯವಾಗಲಿವೆ ಎಂಬ ಗೊಂದಲ ಹೆಚ್ಚಿಸಿದೆ.
ಗ್ರಾಮ ಪಂಚಾಯಿತಿಯ ಹಿಂದಿನ ತೀರ್ಮಾನಗಳು, ಪ್ರಸ್ತುತ ನಿಯಮಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಿ ಶಾಸಕರು ಹಾಗೂ ಮೇಲಧಿಕಾರಿಗಳು ಸ್ಪಷ್ಟ ಮಾರ್ಗಸೂಚಿ ನೀಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
ಕೋಳಿ ಮಾಂಸದ ಮಳಿಗೆಗಳ ಹರಾಜು ಮತ್ತು ಲೈಸನ್ಸ್ ವ್ಯವಸ್ಥೆಯಲ್ಲಿ ಏಕರೂಪತೆ ಇಲ್ಲದಿರುವುದು ಇಂತಹ ವಿವಾದಗಳಿಗೆ ಪ್ರಮುಖ ಕಾರಣವಾಗಿದೆ. ಆದ್ದರಿಂದ ಭವಿಷ್ಯದಲ್ಲಿ ಸ್ಪಷ್ಟ ನೀತಿ ರೂಪಿಸಿ, ಟೆಂಡರ್ ಪಡೆದವರ ಹಿತಾಸಕ್ತಿ ಹಾಗೂ ಇತರ ವ್ಯಾಪಾರಿಗಳ ಹಕ್ಕುಗಳ ನಡುವೆ ಸಮತೋಲನ ಸಾಧಿಸುವ ಅಗತ್ಯವಿದೆ.
ಲೈಸನ್ಸ್ ಗೊಂದಲದ ಈ ಪ್ರಕರಣ ಈಗ ಮೇಲಧಿಕಾರಿಗಳಿಗೆ ತಲುಪಿದ್ದು, ಮುಂದಿನ ನಿರ್ಧಾರವೇ ಚೆಟ್ಟಳ್ಳಿಯ ಕೋಳಿ ವ್ಯಾಪಾರದ ಭವಿಷ್ಯವನ್ನು ನಿರ್ಧರಿಸಲಿದೆ.
- ಪುತ್ತರಿರ ಕರುಣ್ ಕಾಳಯ್ಯ