ಮತ್ತೋರ್ವನಿಗಾಗಿ ಶೋಧ
ಕುಶಾಲನಗರ, ಜೂ. ೧೧: ಬುಧವಾರ ಸಂಜೆ ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟ ಇಬ್ಬರು ಯುವಕರ ಪೈಕಿ ಓರ್ವನ ಮೃತದೇಹವನ್ನು ಕುಶಾಲನಗರ ಪೊಲೀಸರು ನದಿಯಿಂದ ಪತ್ತೆ ಮಾಡಿದ್ದಾರೆ.
ನದಿಗೆ ಈಜಲು ತೆರಳಿದಾಗ ನಾಗಾಲ್ಯಾಂಡ್ ಮೂಲದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಕುಶಾಲನಗರದ ಆಟೋ ಚಾಲಕ ಎಂ.ಬಿ. ಮುನೀರ್ ಎಂಬವರು ಗುರುವಾರ ಸಂಜೆ ೪ ಗಂಟೆ ವೇಳೆಗೆ ಮೃತಪಟ್ಟ ಯುವಕ ಬೆಸೆಸೋಕುಮ್ ೨೪ ಎಂಬಾತನ ಮೃತದೇಹವನ್ನು ನದಿ ನೀರಿನ ಆಳದಿಂದ ಪತ್ತೆ ಹಚ್ಚಿ ಹೊರತೆಗೆದಿದ್ದಾರೆ. ನಂತರ ಮೃತ ದೇಹವನ್ನು ನದಿಯ ತಟಕ್ಕೆ ತಂದು ಪೊಲೀಸರ ಮೂಲಕ ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಬೆಳಗ್ಗಿನಿಂದ ಅಗ್ನಿಶಾಮಕ ದಳದ ತಂಡ ದುಬಾರೆ ರ್ಯಾಫ್ಟಿಂಗ್ ಮತ್ತು ಕುಶಾಲನಗರ ಪೊಲೀಸರು ಮೃತ ದೇಹದ ಪತ್ತೆ ಕಾರ್ಯದಲ್ಲಿ ತೊಡಗಿದ್ದರು. ಘಟನೆ ನಡೆದ ನದಿ ವ್ಯಾಪ್ತಿಯಲ್ಲಿ ಬೆಳಗ್ಗಿನಿಂದ ಮಧ್ಯಾಹ್ನ ತನಕ ಶೋಧ ಕಾರ್ಯ ನಡೆದಿತ್ತು. ಮೃತ ದೇಹಗಳ ಸುಳಿವು ಪತ್ತೆ ಆಗಿರಲಿಲ್ಲ.
ಇನ್ನೊಬ್ಬ ಯುವಕ ಯಾಂಕಾನ್ ಸುಳಿವು ಇದುವರೆಗೂ ಪತ್ತೆಯಾಗಿಲ್ಲ. ಕುಶಾಲನಗರ ಟೌನ್ ಪೊಲೀಸ್ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್ ಮಾರ್ಗದರ್ಶನದಲ್ಲಿ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಶಿವಣ್ಣ, ಸಹಾಯಕ ಸಬ್ಇನ್ಸ್ಪೆಕ್ಟರ್ ಮಂಜುನಾಥ್, ಶಿವರಾಜ್ ಸೇರಿದಂತೆ ಹೊಟೇಲ್ ಮಾಲೀಕ ರೋಹನ್ ಕಾರ್ಯಪ್ಪ, ಸ್ಥಳೀಯರಾದ ದಂಡಿನಪೇಟೆ ರಿಜ್ವಾನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.