ಸಿದ್ದಾಪುರ, ಜೂ. ೧೦: ಕಾರಿನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಸಂದರ್ಭ ಏಕಾಏಕಿ ಕಾಡಾನೆ ಯೊಂದು ದಾಳಿ ನಡೆಸಿದ ಪರಿಣಾಮ ಕಾರು ಜಖಂಗೊAಡಿದ್ದು ಕಾರಿನಲ್ಲಿದ್ದ ನಾಲ್ವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದ ಶಿಲ್ಪಿ ಕಾಫಿ ತೋಟದೊಳಗೆ ಬುಧವಾರ ಬೆಳಿಗ್ಗೆ ನಡೆದಿದೆ.
ಬಾಡಗ - ಬಾಣಂಗಾಲ ಗ್ರಾಮದ ಚೌಡಿಕಾಡು ಎಂಬಲ್ಲಿ ವಾಸ ಮಾಡಿಕೊಂಡಿರುವ ಸುಭಾಷ್ ಎಂಬವರು ತಮ್ಮ ಸ್ನೇಹಿತರಾದ ಸುಬ್ರಮಣಿ, ಪ್ರಸಾದ್, ಸುರೇಶ್ ಎಂಬವರೊAದಿಗೆ ಆಚಾರಿ ಕೆಲಸಕ್ಕೆ ಬೆಳಿಗ್ಗೆ ೭ ಗಂಟೆಯ ಸಮಯಕ್ಕೆ ಕರಡಿಗೋಡು ಗ್ರಾಮದ ಶಿಲ್ಪಿ ಕಾಫಿ ತೋಟದೊಳಗೆ ಖಾಸಗಿ ಸಂಸ್ಥೆಯ ರೆಸಾರ್ಟ್ಗೆ ಸೇರಿದ ವಿಲ್ಲಾದ ಕೆಲಸಕ್ಕೆ ತೆರಳುವ ಸಂದರ್ಭ ಕಾಫಿ ತೋಟದೊಳಗೆ ಇದ್ದ ನಾಲ್ಕು ಕಾಡಾನೆಗಳ ಪೈಕಿ ಒಂದು ಕಾಡಾನೆ ಏಕಾಏಕಿ ಬಂದು ಸುಭಾಷ್ ಅವರು ಚಾಲನೆ ಮಾಡುತ್ತಿದ್ದ ಕಾರಿನ ಮೇಲೆ ದಾಳಿ ನಡೆಸಿದೆ.
ಈ ಸಂದರ್ಭ ಕಾರಿನಲ್ಲಿ ಕುಳಿತುಕೊಂಡಿದ್ದ ನಾಲ್ವರು ಯಾವುದೇ ಶಬ್ದ ಮಾಡದ ಹಿನ್ನೆಲೆಯಲ್ಲಿ ಅದೃಷ್ಟವಶಾತ್ ನಾಲ್ವರು ಪಾರಾಗಿದ್ದಾರೆ. ಕಾಡಾನೆ ದಾಳಿಗೆ ಸಿಲುಕಿದ ಕಾರಿನ ಮುಂಭಾಗ ಜಖಂಗೊAಡಿದೆ. ಈ ಬಗ್ಗೆ ಸುಭಾಷ್ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ ಮಾರ್ಗದರ್ಶನದಲ್ಲಿ ಅಮ್ಮತ್ತಿ ಶಾಖೆಯ ಉಪ ಅರಣ್ಯ ಅಧಿಕಾರಿ ಮನೋಜ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
- ವಾಸು