ಕೋವರ್‌ಕೊಲ್ಲಿ ಇಂದ್ರೇಶ್

ಬೆAಗಳೂರು, ಜೂ. ೧೦; ಚೆಕ್ ಬೌನ್ಸ್ ಪ್ರಕರಣಗಳಲ್ಲಿ ವಿಧಿಸಲಾದ ದಂಡವನ್ನು ಪಾವತಿಸದ ಆರೋಪಿಗೆ ವಿಧಿಸಲಾಗುವ ಗರಿಷ್ಠ ಶಿಕ್ಷೆ ಎರಡು ವರ್ಷವನ್ನು ಮೀರಿ ಆತನನ್ನು ಜೈಲಿನಲ್ಲಿ ಇರಿಸುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ನೆಗೋಶಿಯೇಬಲ್ ಇನ್ಸು÷್ಟçಮೆಂಟ್ಸ್ ಕಾಯ್ದೆಯ ಸೆಕ್ಷನ್ ೧೩೮ರಡಿ ದಾಖಲಾದ ಮೂರು ಚೆಕ್‌ಬೌನ್ಸ್ ಪ್ರಕರಣಗಳಲ್ಲಿ ತಲಾ ಮೂರು ವರ್ಷದ ಶಿಕ್ಷೆಗೆ ಒಳಗಾಗಿದ್ದ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೬೫ ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ ೮(೩) ಪ್ರಕಾರ ದಂಡ ಪಾವತಿಸದಿದ್ದರೆ ವಿಧಿಸುವ ಜೈಲು ಶಿಕ್ಷೆ ಮೂಲ ಅಪರಾಧಕ್ಕೆ ನಿಗದಿಪಡಿಸಿರುವ ಗರಿಷ್ಠ ಶಿಕ್ಷೆಯ ನಾಲ್ಕನೇ ಒಂದು ಭಾಗವನ್ನು ಮೀರಬಾರದು. ಚೆಕ್ ಬೌನ್ಸ್ ಅಪರಾಧಕ್ಕೆ ಗರಿಷ್ಠ ಎರಡು ವರ್ಷ ಜೈಲು ಶಿಕ್ಷೆ ನಿಗದಿಯಾಗಿರುವುದರಿಂದ, ದಂಡ ಪಾವತಿಸದಿದ್ದರೆ ಗರಿಷ್ಠ ಆರು ತಿಂಗಳವರೆಗೆ ಮಾತ್ರ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದು ಪೀಠ ತಿಳಿಸಿದೆ.

ಅಲ್ಲದೆ, ಜೈಲು ಶಿಕ್ಷೆ ಅನುಭವಿಸಿದ ಮಾತ್ರಕ್ಕೆ ದಂಡ ಪಾವತಿಸುವ ಹೊಣೆಗಾರಿಕೆ ಕೊನೆಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ಕಾನೂನಿನ ಪ್ರಕಾರ ಸರ್ಕಾರ ಅಥವಾ ದೂರುದಾರರು ನಂತರವೂ ಆಸ್ತಿ ಜಪ್ತಿ ಸೇರಿದಂತೆ ಇತರೆ ಕಾನೂನು ಕ್ರಮಗಳ ಮೂಲಕ ದಂಡದ ಮೊತ್ತವನ್ನು ವಸೂಲಿ ಮಾಡಬಹುದು ಎಂದು ಹೇಳಿದೆ.

ದೆಹಲಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ನ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಪೀಠ, ದಂಡ ಪಾವತಿಸದಿದ್ದಕ್ಕಾಗಿ ವಿಧಿಸುವ ಜೈಲು ಶಿಕ್ಷೆ ಹೆಚ್ಚುವರಿ ಶಿಕ್ಷೆಯಲ್ಲ. ಅದು ಕೇವಲ ನ್ಯಾಯಾಲಯದ ಹಣಕಾಸು ಆದೇಶವನ್ನು ಜಾರಿಗೊಳಿಸುವ ಕ್ರಮವಾಗಿದೆ. ದಂಡ ಪಾವತಿಸಲು ಅಸಮರ್ಥನಾದ ವ್ಯಕ್ತಿಯನ್ನು ದೀರ್ಘಾವಧಿ ಜೈಲಿನಲ್ಲಿ ಇರಿಸುವುದು ಸಂವಿಧಾನದ ವೈಯಕ್ತಿಕ ಸ್ವಾತಂತ್ರ‍್ಯದ ತತ್ವಗಳಿಗೆ ವಿರುದ್ಧವಾಗಲಿದೆ ಎಂದು ತಿಳಿಸಿದ್ದು, ಕಳೆದ ಆರು ತಿಂಗಳಿನಿAದ ಜೈಲಿನಲ್ಲಿದ್ದ ವ್ತಕ್ತಿಯನ್ನು ಬಿಡುಗಡೆ ಮಾಡುವಂತೆ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ : ಅರ್ಜಿದಾರನ ವಿರುದ್ಧ ಚೆಕ್‌ಬೌನ್ಸ್ ಪ್ರಕರಣಗಳಲ್ಲಿ ದೋಷಾರೋಪಣೆ ಸಾಬೀತಾಗಿದ್ದು, ಕೋಟ್ಯಂತರ ರೂಪಾಯಿ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪ್ರತಿ ಪ್ರಕರಣದಲ್ಲೂ ಹೆಚ್ಚುವರಿಯಾಗಿ ಮೂರು ತಿಂಗಳ ಸರಳ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದರು.