ಸಿದ್ದಾಪುರ, ಜೂ. ೧೦ : ಹಾಲುಗುಂದ, ಬೈರಂಬಾಡ, ಕಣ್ಣಂಗಾಲ ಯಡೂರು, ಪಲ್ಲಕೆರೆ ಗುಹ್ಯ ಗ್ರಾಮಗಳ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದ ಹಾಗೂ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿರುವ ಕಾಡಾನೆಗಳನ್ನು ಕಾಡಿಗಟ್ಟುವಂತೆ ಗ್ರಾಮಸ್ಥರು ಒತ್ತಾಯಿಸಿದ ಮೇರೆಗೆ ಬುಧವಾರದಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಕಾರ್ಯಾಚರಣೆ ನಡೆಯಿತು. ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳು ಮರಿಯಾನೆಗಳೊಂದಿಗೆ ಸೇರಿ ಕಾರ್ಯಾಚರಣೆ ಸಂದರ್ಭದಲ್ಲಿ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಸುತ್ತಾಡುತ್ತಾ ಕಾಫಿ ತೋಟಗಳಿಂದ ಕಾಡಿನತ್ತ ತೆರಳಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ವಿಫಲಗೊಂಡಿತು.

ಅರಣ್ಯ ಇಲಾಖೆ ಅಧಿಕಾರಿಗಳು ಎರಡು ತಂಡಗಳನ್ನು ರಚನೆ ಮಾಡಿದ್ದು ಒಂದು ತಂಡ ಹಾಲುಗುಂದ-ಬೈರAಬಾಡ ಭಾಗದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಹಿಂಡನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಯನ್ನು ನಡೆಸಿತು. ಮತ್ತೊಂದು ತಂಡ ಪಲ್ಲಕೆರೆ-ಗುಹ್ಯ, ಭಾಗದ ಕಾಫಿ ತೋಟಗಳಲ್ಲಿ ಕಾರ್ಯಾಚರಣೆ ನಡೆಸಿತು. ಈ ಎರಡು ತಂಡಗಳು ಮಳೆಯ ನಡುವೆ ಕಾಫಿ ತೋಟಗಳಲ್ಲಿ ಸುತ್ತಾಡಿ ಸುಮಾರು ಎಂಟರಿAದ ಹತ್ತು ಸುತ್ತು ಕಾರ್ಯಾಚರಣೆ ನಡೆಸಿದರೂ ಕೂಡ ಕಾಡಾನೆಗಳ ಗುಂಪು ಬೇರ್ಪಟ್ಟು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಕಾರ್ಯಾಚರಣೆ ತಂಡವನ್ನು ಸುತ್ತಾಡಿಸಿತು. ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಕಾಡಾನೆಗಳು ಕಾಫಿ ತೋಟವನ್ನು ಬಿಟ್ಟು ಕದಲುತ್ತಿಲ್ಲ ಎಂದು ಕಾರ್ಯಾಚರಣೆ ತಂಡದ ಅಧಿಕಾರಿ ಮಾಹಿತಿ ನೀಡಿದರು. ಬೆಳಿಗ್ಗಿನಿಂದ ಸಂಜೆವರೆಗೂ ಕಾರ್ಯಾಚರಣೆ ನಡೆಸಿದರೂ ಕೂಡ ಮರಿಯಾನೆಗಳೊಂದಿಗೆ ಸೇರಿ ಕಾಫಿ ತೋಟದ ಒಳಗೆ ಕಾಡಾನೆಗಳು ಉಳಿದುಕೊಂಡಿವೆ. ಕಾರ್ಯಾಚರಣೆ ವೇಳೆ ಸುಮಾರು ೪೪ ಕಾಡಾನೆಗಳು ಕಂಡುಬAದವು ಎಂದು ಕಾರ್ಯಾಚರಣೆ ತಂಡದ ಸಿಬ್ಬಂದಿ ತಿಳಿಸಿದಾರೆ. ಡ್ರೋನ್ ಕ್ಯಾಮೆರಾ ಬಳಸಿ ಕಾಡಾನೆಗಳ ಚಲನವಲನವನ್ನು ಕಂಡು ಹಿಡಿದು ಕಾರ್ಯಾಚರಣೆ ನಡೆಸಲಾಯಿತು. ಕಾರ್ಯಾಚರಣೆಯಲ್ಲಿ ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಮಾರ್ಗದರ್ಶನದಲ್ಲಿ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ ನೇತೃತ್ವದಲ್ಲಿ ಉಪ ವಲಯ ಅರಣ್ಯ ಅಧಿಕಾರಿಗಳಾದ ಮನೋಜ್, ರಾಘವ, ಶ್ರೀನಿವಾಸ, ದೇವರಾಜ್, ಪ್ರಶಾಂತ್, ಆನೆ ಟ್ರಾಕರ್ ಕಾರ್ತಿಕ್, ಹಾಲುಗುಂದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕುಶಾ ದಿನೇಶ್, ಮತ್ತು ವಿರಾಜಪೇಟೆ, ತಿತಿಮತಿ, ಆನೆ ಕ್ಷೀಪ್ರ ಕಾರ್ಯಪಡೆ ತಂಡದ ಸಿಬ್ಬಂದಿ, ಆರ್‌ಆರ್‌ಟಿ ತಂಡದ ಸಿಬ್ಬಂದಿ ಸೇರಿದಂತೆ ಸುಮಾರು ೩೫ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಎನ್.ಜಿ.ಓ. ಸಿಬ್ಬಂದಿ ಹಾಜರಿದ್ದರು.ಡಾ ತಮ್ಮಯ್ಯ ಅವರು ಡ್ರೋನ್ ಕ್ಯಾಮೆರಾ ಬಳಸಿ ಕಾರ್ಯನಿರ್ವಹಿಸಿದರು.

ಇಂದು ಕಾರ್ಯಾಚರಣೆ

ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ತಾ.೧೧ರಂದು ಹಾಲುಗುಂದ, ಬೈರಂಬಾಡ, ಕಣ್ಣಂಗಾಲ, ಯಡೂರು, ಪಲ್ಲಕೆರೆ, ಗುಹ್ಯ ಗ್ರಾಮದಲ್ಲಿ ನಡೆಯಲಿದೆ. ಈ ಹಿನ್ನೆಲೆ ಗ್ರಾಮಸ್ಥರು, ಬೆಳೆಗಾರರು, ಕಾರ್ಮಿಕರು, ಶಾಲಾ ಕಾಲೇಜು ಮಕ್ಕಳು, ಸಾರ್ವಜನಿಕರು, ವಾಹನ ಚಾಲಕರು ಎಚ್ಚರಿಕೆ ವಹಿಸಿ ಕಾರ್ಯಾಚರಣೆ ಸಂದರ್ಭ ಅರಣ್ಯ ಇಲಾಖೆಯೊಂದಿಗೆ ಸಹಕರಿಸುವಂತೆ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ ಮನವಿ ಮಾಡಿದ್ದಾರೆ. - ವಾಸು ಎ .ಎನ್.