ಮುಳ್ಳೂರು, ಜೂ. ೯: ಕೊಡಗು ಜಿಲ್ಲೆಯಲ್ಲಿ ದಿನೇ ದಿನೇ ಮಾನವ- ವನ್ಯಜೀವಿಗಳ ಸಂಘರ್ಷ ಹೆಚ್ಚಾಗುತ್ತಿದೆ. ಕಾಡಾನೆ, ಹುಲಿ, ಚಿರತೆ ಹಳ್ಳಿಗಳಲ್ಲಿ ಸಂಚರಿಸುತ್ತಿದ್ದು, ಈ ಪೈಕಿ ಕಾಡಾನೆ ದಾಳಿಗೆ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದರೆ ಹುಲಿ, ಚಿರತೆ ಬಾಯಿಗೆ ಗ್ರಾಮಸ್ಥರು ಮನೆಯಲ್ಲಿ ಸಾಕಿದ ದನ - ಕರುಗಳು, ನಾಯಿಗಳು ಆಹಾರವಾಗುತ್ತಿವೆ.
ಸೋಮವಾರಪೇಟೆ ತಾಲೂಕಿನ ಆಲೂರು-ಸಿದ್ದಾಪುರ ವ್ಯಾಪ್ತಿಯಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಭಾನುವಾರ ರಾತ್ರಿ ಚಿರತೆಯೊಂದು ಆಲೂರು - ಸಿದ್ದಾಪುರ ಬಳಿಯ ಕಡ್ಲೆಮಕ್ಕಿ ಗ್ರಾಮದ ವಿಠಲ ಮತ್ತು ದೇವಕ್ಕಿ ಎಂಬುವರ ಮನೆಗಳಲ್ಲಿ ಸಾಕಿದ ನಾಯಿಗಳನ್ನು ಎಳೆದುಕೊಂಡು ಹೋಗಿ ತಿಂದು ಹಾಕಿದೆ. ಅದೇ ರಾತ್ರಿ ಚಿರತೆಯೊಂದು ಮಾಲಂಬಿ ಗ್ರಾಮದ ಪಾಪು ಎಂಬುವವರ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರುವನ್ನು ಎಳೆದುಕೊಂಡು ಹೋಗಲು ಯತ್ನಿಸಿದ್ದು, ಕಟ್ಟಿ ಹಾಕಿದ್ದರಿಂದ ಚಿರತೆಗೆ ಕರುವನ್ನು ಎಳೆದುಕೊಂಡು ಹೋಗಲು ಸಾಧ್ಯವಾಗಿರಲಿಲ್ಲ. ಚಿರತೆ ದಾಳಿಗೆ ಕರು ತೀವ್ರವಾಗಿ ಗಾಯಗೊಂಡಿದೆ. ಭಾನುವಾರ ರಾತ್ರಿ ಆಲೂರು-ಸಿದ್ದಾಪುರ ವ್ಯಾಪ್ತಿಯಲ್ಲಿ ಮಳೆ ಬಿದ್ದಿರುವ ಹಿನ್ನೆಲೆಯಲ್ಲಿ ಎರಡು ಚಿರತೆಗಳು ಸಂಚಾರ ಮಾಡಿರುವುದಕ್ಕೆ ಹೆಜ್ಜೆ ಗುರುತು ಸಾಕ್ಷಿಯಾಗಿದೆ. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. -ಭಾಸ್ಕರ್ ಮುಳ್ಳೂರು