ವೀರಾಜಪೇಟೆ, ಜೂ. ೯: ಪ್ರಕೃತಿಯ ಉಳಿವಿಗಾಗಿ ಮಾನವರು ಗಿಡ ಮರವನ್ನು ಬೆಳೆಸುವ ಮೂಲಕ ಪ್ರಕೃತಿಯನ್ನು ಪ್ರೀತಿಸುವಂತಾಗಬೇಕು ಎಂದು ಗೋಣಿಕೊಪ್ಪಲು ಪ್ರೌಢಶಾಲೆ ಶಿಕ್ಷಕ ಕೃಷ್ಣಚೈತನ್ಯ ಹೇಳಿದರು.

ವೀರಾಜಪೇಟೆ ಸಮೀಪದ ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗರಾಜೇAದ್ರ ಭವನದಲ್ಲಿ ನಡೆದ ಹೊಂಬೆಳಕು ಕಿರಣ ೨೪೪ ನೇ ಮಾಸಿಕ ತತ್ವಚಿಂತನಾಗೋಷ್ಠಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ವಿಶ್ವ ಪರಿಸರ ದಿನದ ಅಂಗವಾಗಿ ‘ಪ್ರಕೃತಿಯ ಕೌತುಕಗಳು’ ಎಂಬ ವಿಷಯದ ಬಗ್ಗೆ ಮಾತನಾಡಿ, ಪರಿಸರ ನಮ್ಮ ಮನೆ ಸುತ್ತಲು ಉತ್ತಮ ಪರಿಸರದಿಂದ ಇದ್ದಲ್ಲಿ ಉತ್ತಮವಾದ ಗಾಳಿ, ಶುದ್ಧ ನೀರು ಲಭಿಸುತ್ತದೆ. ಪ್ರತಿಯೊಂದು ವಸ್ತುವೂ ಅಣುಗಳಿಂದಾದರೆ ಪ್ರತಿಯೊಂದು ಜೀವರಾಶಿಗಳಿರುವ ಜೀವಕೋಶಗಳಿಂದ ರಚಿಸಲ್ಪಟ್ಟಿವೆ. ಮಾನವನಿಂದ ಪ್ರಕೃತಿಯ ಮೇಲೆ ನಡೆಯುತ್ತಿರುವ ಕ್ರೌರ್ಯದಿಂದ ಆಗುವ ದುಷ್ಪರಿಣಾಮಗಳು ಇವುಗಳಿಂದಾಗಿ ಮಾನವನೇ ಸಂಕಷ್ಟಗಳು ಎದುರಿಸಬೇಕಾಗುತ್ತದೆ. ಆದರಿಂದ ಸಾಧ್ಯವಾದಷ್ಟು ಗಿಡಗಳನ್ನು ಬೆಳೆಸಿ ಪ್ರಕೃತಿಯನ್ನು ಸಮೃದ್ಧಿಯಾಗಿಡಬೇಕು. ಕೊಡಗಿನ ಪ್ರಕೃತಿ ಸೌಂದರ್ಯದಲ್ಲಿ ನೀರು, ಗಾಳಿ ಶುದ್ದವಾಗಿದೆ. ಇದನ್ನು ಕಲುಷಿತಗೊಳಿಸದಂತೆ ಮನವಿ ಮಾಡಿದರು.

ವೈದ್ಯರು, ಪಕ್ಷಿ ತಜ್ಞ ಡಾ. ಎಸ್.ವಿ. ನರಸಿಂಹನ್ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಕೃತಿ ಪಾಠ ಕಲಿಸುವ ಗುರುವಂತೆ, ಪರಿಸರ ನಮಗೆ ಜ್ಞಾನವನ್ನು ಮಾತ್ರವಲ್ಲ ನೀತಿ ಪಾಠವನ್ನೂ ಕಲಿಸುತ್ತದೆ. ಪ್ರಕೃತಿಯನ್ನು ಅರಿತರೆ ನಾವು ದೇವರ ಮನಸ್ಸನ್ನು ಅರಿತಂತೆ. ಪ್ರಕೃತಿಯೇ ದೇವರ ಸೃಷ್ಠಿ. ಪ್ರಕೃತಿಯಲ್ಲಿರುವಂತ ಗರಿಕೆಹುಲ್ಲು ಸೇರಿದಂತೆ ಪ್ರತಿ ವಸ್ತುಗಳು ಮಾನವನ ಉಪಯೋಗಕ್ಕೆ ಬರುತ್ತದೆ. ಅದರಿಂದ ಪ್ರಕೃತಿಯನ್ನು ಪ್ರೀತಿಸುವಂತಾಗಬೇಕು ಎಂದರು. ಗಿಡ ನೆಡುವುದು ಉತ್ತಮ, ಆದರೆ ಗಿಡನೆಟ್ಟು ಅದನ್ನು ಪೋಷಿಸದಿದ್ದರೆ ಮುಂದಿನ ವರ್ಷ ಮತ್ತೆ ಅದೇ ಜಾಗಕ್ಕೆ ಗಿಡ ನೆಡುವಂತಾಗಲಿದೆ ಎಂದರು.

ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿಗಳಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಸಭಿಕರನ್ನುದ್ದೇಶಿಸಿ ಮಾತನಾಡಿ, ಉತ್ತಮ ಪರಿಸರದಲ್ಲಿ ಕೆಡುಕನ್ನು ಮಾಡದೆ ಒಳಿತನ್ನು ಮಾಡುವಂತಾಗಬೇಕು. ಮನುಷ್ಯ ತನ್ನ ಬದುಕಿನಲ್ಲಿ ತನ್ನನ್ನು ತಾನು ತಿಳಿದುಕೊಂಡು ನಿರ್ಮಲವಾದ ಮನಸ್ಸನ್ನು ರೂಢಿಸಿಕೊಳ್ಳುವಂತಾಗಬೇಕು. ಪ್ರಕೃತಿಯ ಬಗ್ಗೆ ಆಂದೋಲನವಾಗಬೇಕಾಗಿದೆ. ಪ್ರತಿ ವರ್ಷಕ್ಕೊಂದು ಗಿಡ ನೆಟ್ಟು ಪೋಷಿಸದಿದ್ದರೆ ಮರುಭೂಮಿ ಆಗಲಿದೆ. ಅದರಿಂದ ಸಾಧ್ಯವಾದಷ್ಟು ಮನೆ ತೋಟಗಳಲ್ಲಿ ಗಿಡಮರಗಳನ್ನು ಬೆಳೆಸುವ ಮೂಲಕ ಪ್ರಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವಂತಾಗಬೇಕು. ಗಿಡ ನೆಡುವುದು ಎಷ್ಟು ಮುಖ್ಯವೊ ಅದನ್ನು ಬೆಳೆಸುವುದು ಅಷ್ಟೆ ಮುಖ್ಯವಾಗಿದೆ ಎಂದು ಸ್ವಾಮೀಜಿ ಹೇಳಿದರು. ವೇದಿಕೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಪೊನ್ನಂಪೇಟೆ-ವೀರಾಜಪೇಟೆ ತಾಲೂಕು ಘಟಕದ ಅಧ್ಯಕ್ಷ ಎನ್.ಎಂ. ರಾಜೇಶ್, ನಿರ್ದೇಶಕ ಎಸ್.ಎಲ್. ಮಹದೇವಪ್ಪ ಉಪಸ್ಥಿತರಿದ್ದರು. ವಾತ್ಸಲ್ಯ, ಸುಶ್ಮಿತಾ, ಸೋನಾ ಕಾರ್ಯಕ್ರಮ ನಿರ್ವಹಿಸಿದರು.