ಮಡಿಕೇರಿ, ಜೂ. ೯: ಶಿಕ್ಷಣದೊಂದಿಗೆ ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆ ಬೆಳೆಸಿಕೊಂಡು ಸಾಹಿತ್ಯಾಸಕ್ತರಾಗಬೇಕು ಎಂದು ಭಾರತ ಸರ್ಕಾರದ ದಕ್ಷಿಣ ವಲಯ ಸಾಂಸ್ಕೃತಿಕ ನಿರ್ದೇಶಕ ಕೆ.ಕೆ.ಗೋಪಾಲಕೃಷ್ಣ ಅವರು ಕರೆ ನೀಡಿದರು.
ಕೇಂದ್ರ ಸಂಸ್ಕೃತಿ ಸಚಿವಾಲಯ, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ತಂಜಾವೂರು ಹಾಗೂ ಕುಶಾಲನಗರ ದಕ್ಷಿಣ ಸಿರಿ ಸ್ನೇಹ ಬಳಗದ ವತಿಯಿಂದ ಕೊಡ್ಲಿಪೇಟೆಯ ಎಸ್ಜಿಎಸ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ‘ಮಾನ್ಸೂನ್ ಸಾಂಸ್ಕೃತಿಕ ಉತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿ ಸನಾತನ ಸಂಸ್ಕೃತಿ ಹೊಂದಿದ್ದು, ಸಮಾನತೆ, ಭಾತೃತ್ವ, ಏಕತೆ ಹೊಂದಿದೆ. ವಿಶ್ವದಲ್ಲಿಯೇ ಭಾರತೀಯ ಸಂಸ್ಕೃತಿಗೆ ಹೆಚ್ಚಿನ ಸ್ಥಾನಮಾನ ಇದೆ. ಭಾರತ ಸರ್ಕಾರದ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರಿನಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ದಕ್ಷಿಣ ರಾಜ್ಯಗಳಲ್ಲಿ ಆಯಾಯ ಜಿಲ್ಲೆ, ರಾಜ್ಯಕ್ಕೆ ಸಂಬAಧಿಸಿದAತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಅದೇ ರೀತಿ ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ಕಲಾವಿದರುಗಳಿಗೆ ಹಾಗೂ ಅಕ್ಕಪಕ್ಕದ ಜಿಲ್ಲೆಯ ಕಲಾವಿದರು ಒಂದೆಡೆ ಸೇರಿ ಎರಡು ದಿನಗಳ ಕಾರ್ಯಕ್ರಮ “ಮಾನ್ಸೂನು ಉತ್ಸವ” ಎಂಬ ಹೆಸರಿನಡಿ ನಡೆಸಲು ಕನ್ನಡ ಸಿರಿ ಸ್ನೇಹ ಬಳಗ ನಮಗೆ ಸಹಕಾರ ನೀಡುತ್ತಿದೆ ಎಂದು ಶ್ಲಾಘಿಸಿದರು. ಮುಂದೆಯೂ ಸಹ ಕೊಡಗು ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಕಾರ್ಯಕ್ರಮ ನಡೆಸಲಾಗುವುದು ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮಿಜೀ ಮಾತನಾಡಿ, ನಮ್ಮ ವಿದ್ಯಾಸಂಸ್ಥೆಯಲ್ಲಿ ವಿಶೇಷವಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಿರುವುದು ಹೆಮ್ಮೆಯ ವಿಷಯ ಎಂದರು. ಸಮಾಜ ಇಂದು ಸಾಂಸ್ಕೃತಿಕ ಕಾರ್ಯಕ್ರಮವನ್ನು ಸ್ವೀಕರಿಸಿ ಇಂದಿನ ಪೀಳಿಗೆಗೆ ಪರಿಚಯಿಸಬೇಕೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಸಂಯೋಜಕ ಹಾಗೂ ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಮಾತನಾಡಿ, ಜಿಲ್ಲೆಯಲ್ಲಿ ಮಾನ್ಸೂನ್ ಮಳೆಯನ್ನು ಆಹ್ವಾನ ಮಾಡಿಕೊಳ್ಳುವ ಈ ಸಂದರ್ಭದಲ್ಲಿ ಮಾನ್ಸೂನ್ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೊಡ್ಲಿಪೇಟೆಯಲ್ಲಿ ನಡೆಸಲು ಸಂತೋಷವಾಗುತ್ತಿದ್ದು, ತಾವೆಲ್ಲರೂ ಸಂಸ್ಕೃತಿ ಸಾಹಿತ್ಯದ ಸದಭಿರುಚಿ ಬೆಳೆಸಿಕೊಳ್ಳಬೇಕು ಎಂದರು.
ನಾಡು ನುಡಿ ಭಾಷೆಗಾಗಿ ನಾವೆಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕು ಎಂದರು. ಇದಕ್ಕಾಗಿ ಅನೇಕ ಶರಣರು ಸಮಾಜದ ಏಳಿಗೆಗೆ ದುಡಿದು ಕೊಡುಗೆ ನೀಡಿದ್ದಾರೆ ಎಂದರು.
ವಿದ್ಯಾರ್ಥಿಗಳು ಸಂಸ್ಕೃತಿಯ ಕಡೆಗೆ ಮಾರುಹೋಗುವುದರೊಂದಿಗೆ ಕಲೆಗೆ ಪ್ರೋತ್ಸಾಹ ನೀಡಬೇಕು. ಇಂದು ಅನೇಕ ಜನಪದ ಕಲೆಗಳು ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಇಂತಹ ಇಲಾಖೆ ಬಾಹ್ಯ ಪ್ರಪಂಚಕ್ಕೆ ಕಲೆಯನ್ನು ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ವೇದಿಕೆಯಲ್ಲಿ ಪದ್ಮಶ್ರೀ ಪುರ¸ ರಾಣಿ ಮಾಚಯ್ಯ, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ರವೀಂದ್ರ ಕುಮಾರ್, ಎಸ್.ಜಿ.ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ತನುಜ, ಕಾರ್ಯದರ್ಶಿ ನಂಜುAಡ, ಮಣಜೂರು ಮಂಜುನಾಥ್, ಪತ್ರಕರ್ತ ನಾಗರಾಜ, ಕೆ.ಅಶ್ವಥ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎರಡು ದಿನಗಳ ಕಾಲ ಮಾನ್ಸೂನ್ ಉತ್ಸವ ಕಾರ್ಯಕ್ರಮ ನಡೆಸಲು ಕಾರಣರಾದ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕ ಕೆ.ಕೆ.ಗೋಪಾಲಕೃಷ್ಣ ಸೇರಿದಂತೆ ಶಾಲೆಯಲ್ಲಿ ಎಸ್ಎಸ್ ಎಲ್ಸಿಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಬರಲು ಶ್ರಮಿಸಿದ ಪ್ರಾಂಶುಪಾಲರಾದ ತನುಜ ಹಾಗೂ ಕಾರ್ಯದರ್ಶಿ ನಂಜುAಡ ಅವರನ್ನು ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೊಡಗಿನ ಉಮ್ಮತ್ತಾಟ್, ಊರೋಟ್ಟಿಕೋಟ್, ಬಾಳೋಪಾಟ್, ಕಂಸಾಳೆ, ಡೊಳ್ಳು ಕುಣಿತ, ಜೇನುಕುರುಬ ನೃತ್ಯ, ಜಾನಪದ ಹಾಡುಗಳು, ಜಾನಪದ ನೃತ್ಯ, ಕೋಲಾಟ್, ಮುಂತಾದ ಕಲೆಗಳು ಪ್ರದರ್ಶಿಸಿ ಜನಮನ ರಂಜಿಸುವಲ್ಲಿ ಯಶಸ್ವಿಯಾಯಿತು.
ಶಾಲೆಯ ಕನ್ನಡ ಭಾಷಾ ಪ್ರಾಧ್ಯಾಪಕರಾದ ಚಂದ್ರಶೇಖರ ಸ್ವಾಗತಿಸಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.