ಶನಿವಾರಸಂತೆ, ಜೂ.೯: ಸಮೀಪದ ಕೊಡ್ಲಿಪೇಟೆ ಹೋಬಳಿ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಪುರ ಗ್ರಾಮದಲ್ಲಿ ಸೋಮವಾರ ಮುಂಜಾನೆ ಗ್ರಾಮಸ್ಥರಿಗೆ ೪ ಕಾಡಾನೆಗಳ ದರ್ಶನವಾಗಿದ್ದು, ಭಯಭೀತರಾಗಿದ್ದಾರೆ.
ಬೆಳಿಗ್ಗೆ ೯ ಗಂಟೆಗೆ ಗ್ರಾಮದ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಕಾಡಾನೆಗಳ ಹಿಂಡಿನಲ್ಲಿದ್ದ ದೊಡ್ಡ ಗಾತ್ರದ ಆನೆಯೊಂದು ಕೃಷಿಕ ಕೆ.ಟಿ.ಅಪ್ಪಾಜಿ ಗೌಡ ಅವರನ್ನು ಬೆನ್ನಟಿದ್ದು; ಅದೃಷ್ಟವಶಾತ್ ಓಡಿ ಅವರು ಪ್ರಾಣ ಉಳಿಸಿಕೊಂಡಿದ್ದಾರೆ.
ಈ ವ್ಯಾಪ್ತಿಯಲ್ಲಿ ೬ ಕಾಡಾನೆಗಳಿದ್ದು ೪ ಆನೆಗಳು ಗ್ರಾಮದೊಳಗೆ ಬಂದಿವೆ. ದೊಡ್ಡ ಗಾತ್ರದ ಆನೆ ಆಗಾಗ್ಗೆ ದಾಳಿಗೆ ಮುಂದಾಗುತ್ತಾ ತೋಟ-ಗದ್ದೆಗಳಿಗೆ ನುಗ್ಗುತ್ತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಕಾಡಾನೆಗಳ ಗುಂಪಿನಲ್ಲಿದ್ದ ದೊಡ್ಡ ಗಾತ್ರದ ಆನೆಯೊಂದು ನನ್ನ ಬೆನ್ನಟ್ಟಿ ಬಂದಾಗ ಅಪಾಯ ಅರಿತು ಓಡಿ ತಪ್ಪಿಸಿಕೊಂಡೆ.ಕೂಲಿ ಕಾರ್ಮಿಕರು ಕೆಲಸಕ್ಕೆ ತೆರಳುವ ಸಮಯದಲ್ಲೆ ಕಾಡಾನೆಗಳು ದಾಳಿ ನಡೆಸಿರುವುದು ಆತಂಕ ಮೂಡಿಸಿದೆ. ಗ್ರಾಮಸ್ಥರೂ ಆತಂಕಕ್ಕೆ ಒಳಗಾಗಿದ್ದಾರೆ.
ಈ ಘಟನೆಯನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ, ಆ ಆನೆಯನ್ನು ಸೆರೆ ಹಿಡಿದು ಸ್ಥಳಾಂತರ ಮಾಡಬೇಕು ಎಂದು ಕೆ.ಟಿ.ಅಪ್ಪಾಜಿ ಗೌಡ ಆಗ್ರಹಿಸಿದ್ದಾರೆ. ಕೊಡ್ಲಿಪೇಟೆ ವಾಣಿಜ್ಯೋದ್ಯಮಿಗಳ ಸಂಘದ ಸ್ಥಾನೀಯ ಸಮಿತಿ ಅಧ್ಯಕ್ಷ ಎಚ್.ಸಿ.ಯತೀಶ್ ಕುಮಾರ್ ಮಾತನಾಡಿ, ಕಾಡಾನೆಗಳ ವಿಚಾರದಲ್ಲಿ ಅರಣ್ಯ ಇಲಾಖೆ ಶೀಘ್ರ ಕ್ರಮ ಕೈಗೊಳ್ಳಬೇಕು. ಅರಣ್ಯ ಇಲಾಖೆ ಹಾಗೂ ಶಾಸಕರು ಸರ್ಕಾರದ ಗಮನ ಸೆಳೆದು ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಘಟನೆ ಬಗ್ಗೆ ಶನಿವಾರಸಂತೆ ವಲಯ ಕೊಡ್ಲಿಪೇಟೆ ಶಾಖೆ ಉಪ ವಲಯ ಅರಣ್ಯಾಧಿಕಾರಿ ವಿಶ್ವನಾಥ್ ಪ್ರತಿಕ್ರಿಯಿಸಿ, ಕಾಡಾನೆಗಳನ್ನು ಗ್ರಾಮದ ಸಮೀಪ ಇರುವ ಅರಣ್ಯಕ್ಕೆ ಓಡಿಸಲಾಗಿದೆ. ಈ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸದ ಕಾರಣ ಆನೆಗಳ ಚಲನ-ವಲನ ತಕ್ಷಣಕ್ಕೆ ತಿಳಿಯುತ್ತಿಲ್ಲ, ಇಲಾಖೆಯ ಸಿಬ್ಬಂದಿ ಆ ಭಾಗದಲ್ಲಿ ನಿರಂತರ ಕಾರ್ಯಾಚರಣೆಯಲ್ಲಿರುತ್ತಾರೆ. ಆನೆ ದಾಳಿಯಿಂದಾಗಿರುವ ಬೆಳೆ ನಾಶ, ನಷ್ಟಗಳಿಗೆ ಅರಣ್ಯ ಇಲಾಖೆಗೆ ಅರ್ಜಿ ನೀಡಬಹುದು ಎಂದು ಮಾಹಿತಿ ನೀಡಿದರು.