ಚೆಯ್ಯಂಡಾಣೆ, ಜೂ. ೮: ಚೆಯ್ಯಂಡಾಣೆ ಹಾಗೂ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮರುಕಳಿಸಿದ್ದು ಬೆಳೆಗಾರರ ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆಗಳು ಫಸಲು ಭರಿತ ಗಿಡಗಳನ್ನು ತುಳಿದು ನಾಶಪಡಿಸಿ ಅಪಾರ ನಷ್ಟ ಉಂಟುಮಾಡಿವೆ. ಕಾಡಾನೆ ಹಾವಳಿಯಿಂದ ಗ್ರಾಮದಲ್ಲಿ ಜನರು ಓಡಾಡಲು ಭಯಪಡುವಂತಹ ಪರಿಸ್ಥಿತಿ ಉದ್ಭವವಾಗಿದ್ದು, ಈ ಹಿನ್ನೆಲೆಯಲ್ಲಿ ಕಾಡಾನೆಗಳು ಜೀವ ಬಲಿ ಪಡೆಯುವ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳುವಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಚೆಯ್ಯಂಡಾಣೆಯಲ್ಲಿ ನಡೆಯಿತು.

ಕೊಕೇರಿಯಲ್ಲಿ ಮಾಜಿ ಸೈನಿಕರ ಮೇಲೆ ಕಾಡಾನೆ ದಾಳಿ ನಡೆದ ಘಟನೆ ಮಾಸುವ ಮುನ್ನವೇ ಬೆಳಿಗ್ಗೆ ಮಧ್ಯಾಹ್ನ, ಸಂಜೆ ಎನ್ನದೆ ರಸ್ತೆಯಲ್ಲಿ ಕಾಡಾನೆಗಳು ಸಂಚರಿಸುತ್ತಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಕೃಷಿ ಕಾರ್ಮಿಕರು ರಸ್ತೆಯಲ್ಲಿ ನಡೆದಾಡಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಾಡಾನೆ ಕಾರ್ಯಾಚರಣೆ ಬೇಡ, ಕಾಡಾನೆಯನ್ನು ಸೆರೆ ಹಿಡಿಯಬೇಕೆಂದು ಒತ್ತಾಯಿಸಿದರು.

ನರಿಯಂದಡ ಗ್ರಾಮದ ನಿವಾಸಿ ಪೊಕ್ಕುಳಂಡ್ರ ಧನೋಜ್ (ದಿವ್ಯ) ಮಾತನಾಡಿ ಈ ವ್ಯಾಪ್ತಿಯಲ್ಲಿ ಕಳೆದ ೮ ವರ್ಷಗಳಿಂದ ಕಾಡಾನೆ ಹಾವಳಿ ಮಿತಿಮೀರಿದೆ, ತೋಟಗಳಿಗೆ ತೆರಳಲು, ವಿದ್ಯಾರ್ಥಿಗಳು ಶಾಲೆಗೆ ತೆರಳಲು ಭಯಪಡುವಂತಾಗಿದೆ. ಎರಡು ಬಾರಿ ಮುಖ್ಯ ರಸ್ತೆ ತಡೆದು ಪ್ರತಿಭಟನೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಾಮಕಾವ್ಯವಸ್ಥೆಗೆ ಅರಣ್ಯಾಧಿಕಾರಿಗಳು ಬರುತ್ತಾರೆ ಹೋಗುತ್ತಾರೆ. ಸಿಬ್ಬಂದಿಗಳನ್ನು ಕಳುಹಿಸಿ ಪ್ರಯೋಜನವಿಲ್ಲ ಆರ್‌ಎಫ್‌ಒ ಸ್ಥಳಕ್ಕೆ ಬರಬೇಕು. ಕಳೆದ ಬಾರಿ ೫ ಆನೆ ಹಿಡಿಯಲು ಅನುಮತಿ ಸಿಕ್ಕಿದ್ದರೂ ಕೂಡ ಅದರಲ್ಲಿ ಒಂದು ಆನೆ ಕಾರ್ಯಾಚರಣೆ ವೇಳೆ ಸಾವನ್ನಪ್ಪಿತ್ತು. ಇನ್ನೊಂದು ಕುಂಟಾನೆಯನ್ನು ಸೆರೆ ಹಿಡಿದಿದ್ದರು. ಆದರೆ ಉಳಿದ ೩ ಆನೆಯನ್ನು ಹಿಡಿಯಲು ಬಾಕಿ ಇದೆ ಎಂದ ಅವರು ಕೂಡಲೇ ಆನೆಯನ್ನು ಸೆರೆ ಹಿಡಿಯಿರಿ ಎಂದು ಒತ್ತಾಯಿಸಿದರು.

ಕೊಕೇರಿ ಗ್ರಾಮದ ಎಸ್.ಎಸ್. ಸುಮಂತ್ ಮಾತನಾಡಿ ಒಂದು ವಾರದ ಹಿಂದೆ ಮಾಜಿ ಸೈನಿಕನ ಮೇಲೆ ದಾಳಿ ನಡೆಸಿದ ಆನೆಯನ್ನು ಸೆರೆ ಹಿಡಿಯಬೇಕು. ಈ ಆನೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಓಡಿಸಲು ತೋಟಕ್ಕೆ ತೆರಳಿದರೆ ಅವರನ್ನೇ ಅದು ಬೆನ್ನಟ್ಟುತ್ತಿದೆ. ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಬನ್ನಿ ಎಂದರೆ ಸಿಬ್ಬಂದಿಯನ್ನು ಕಳುಹಿಸುತ್ತಾರೆ. ಕಳೆದ ವರ್ಷ ತೋಟ ಸರ್ವನಾಶವಾಗಿ ೧೧ಲಕ್ಷ ಪರಿಹಾರಕ್ಕೆ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದರೆ ಸಿಕ್ಕಿದ್ದು ೧೧ ಸಾವಿರ. ಮುಂದಿನ ೧೦ ದಿನಗಳ ಒಳಗೆ ಆನೆಯನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಬೇಕು ಇಲ್ಲವಾದರೆ ಗ್ರಾಮಸ್ಥರು, ಸಂಘ ಸಂಸ್ಥೆಗಳು ಒಟ್ಟು ಸೇರಿ ವೀರಾಜಪೇಟೆ ನಾಪೋಕ್ಲು ಮುಖ್ಯ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸುತ್ತೇವೆ ಎಂದರು.

ಗ್ರಾಮಸ್ಥರಾದ ವಕೀಲ ಕೋಡಿಮಣಿಯಂಡ ಪೂವಯ್ಯ ಮಾತನಾಡಿ ತನ್ನ ಮನೆಯ ಗೇಟ್ ಸಮೀಪ ಸ್ಥಳೀಯ ಸರಕಾರಿ ಉದ್ಯೋಗಿ ಒಬ್ಬರನ್ನು ಆನೆ ದಾಳಿ ಮಾಡಲು ಮುಂದಾಗಿದೆ. ಅವರು ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇರುವ ಕೆರೆಗಳಲ್ಲೂ ಆನೆಗಳ ಹಿಂಡು ನಡೆದಾಡಿ ಮುಚ್ಚಿಹೋಗಿವೆ. ಪರಿಹಾರಕ್ಕಾಗಿ ಹತ್ತು ಸಾವಿರ ಖರ್ಚು ಮಾಡಿದರೆ ಮುನ್ನೂರು, ಐನೂರು ಕೊಡುತ್ತಾರೆ. ನಮ್ಮ ನೋವನ್ನು ಕೇಳುವವರಿಲ್ಲ ಎಂದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ನೆಲ್ಲಮಕ್ಕಡ ವಿವೇಕ್,ಮನೋಜ್, ರಮೇಶ್ ಪ್ರಕಾಶ್, ಆನೆ ಕಾರ್ಯಾಚರಣೆ ತಂಡದ ಡಿಆರ್‌ಎಫ್‌ಒ ಪ್ರಶಾಂತ್, ಗಾರ್ಡ್ ಅಣ್ಣಾಸ್ ಗುಡ್ಡೆ, ಕ್ಯಾಂಪ್ ಸಿಬ್ಬಂದಿ ಮತ್ತಿತರರು ಇದ್ದರು.