ಮಡಿಕೇರಿ, ಜೂ. ೮: ಕೊಡಗಿಗೆ ಮುಂಗಾರು ಪ್ರವೇಶಿಸಿದ ಬೆನ್ನಲ್ಲೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಗೆ ಎನ್‌ಡಿಆರ್‌ಎಫ್ ಯೋಧರ ತಂಡ ಆಗಮಿಸಿದೆ. ಆಂಧ್ರಪ್ರದೇಶದ ವಿಜಯವಾಡದಲ್ಲಿರುವ ೧೦ನೇ ಬೆಟಾಲಿಯನ್ ಎನ್‌ಡಿಆರ್‌ಎಫ್ ತಂಡದ ರ‍್ಯಾಪಿಡ್ ರೆಸ್ಪಾನ್ಸ್ ಟೀಮ್‌ನ ಮೂವತ್ತು ಮಂದಿ ಯೋಧರು ನಗರದ ಮುತ್ತಪ್ಪ ದೇವಾಲಯದ ಬಳಿ ಇರುವ ಸಹಕಾರ ಇಲಾಖೆ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ವಾಸ್ತವ್ಯ ಹೂಡಿದ್ದಾರೆ. ಎರಡು ಲಾರಿಗಳಲ್ಲಿ ಮಡಿಕೇೆ್ಗ ಆಗಮಿಸಿರುವ ಎನ್‌ಡಿಆರ್‌ಎಫ್ ಯೋಧರ ತಂಡ ಪ್ರವಾಹ ಭೂಕುಸಿತ ಸೇರಿದಂತೆ ಎಲ್ಲಾ ರೀತಿಯ ಪ್ರಾಕೃತಿಕ ವಿಕೋಪಗಳನ್ನು ಎದುರಿಸುವ ಪರಿಣತಿ ಹೊಂದಿದ್ದು, ಅಪಾಯ ಎದುರಾಗುವ ಸಂದರ್ಭ ಜನಜಾನುವಾರುಗಳ ರಕ್ಷಣೆಗೆ ಬೇಕಾದ ಅಗತ್ಯ ರಕ್ಷಣಾ ಪರಿಕರಗಳೊಂದಿಗೆ ಆಗಮಿಸಿದೆ.

ರಕ್ಷಣಾ ತಂಡದಲ್ಲಿ ಶ್ವಾನ

‘ಹನಿ’ ಎಂಬ ಹೆಸರಿನ ಜರ್ಮನ್ ಶಫರ್ಡ್ ಶ್ವಾನ ಕೂಡ ರಕ್ಷಣಾ ತಂಡದಲ್ಲಿ ಕಾರ್ಯನಿರ್ವಹಿಸಲಿದೆ. ಕಟ್ಟಡಗಳು ಕುಸಿತಗೊಂಡಾಗ ಅವಶೇಷಗಳಡಿ ಯಾರಾದರೂ ಸಿಲುಕಿಕೊಂಡರೆ ಅವರ ಇರುವಿಕೆಯನ್ನು ಪತ್ತೆಹಚ್ಚಲು ಈ ಶ್ವಾನಕ್ಕೆ ತರಬೇತಿ ನೀಡಲಾಗಿದೆ.