ಸೋಮವಾರಪೇಟೆ, ಜೂ. ೬: ಪಟ್ಟಣ ಸೇರಿದಂತೆ ಸುತ್ತಮುತ್ತಲ ಪ್ರಮುಖ ರಸ್ತೆಗಳಲ್ಲಿ ಆರ್‌ಟಿಓ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ನಿಯಮ ಮೀರಿದ ವಾಹನಗಳ ಮಾಲೀಕರಿಗೆ ದಂಡ ವಿಧಿಸಿದರು.
ಪಟ್ಟಣದ ಆಟೋ ನಿಲ್ದಾಣ, ಬಸ್ ನಿಲ್ದಾಣ, ಶಾಲಾ ಆವರಣಗಳಲ್ಲಿ ವಾಹನಗಳ ತಪಾಸಣೆ ನಡೆಸಿದರು. ಆರ್‌ಟಿಓ ಇನ್ಸ್ಪೆಕ್ಟರ್ ಪ್ರದೀಪ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ಶಾಲೆಗಳಿಗೆ ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳ ದಾಖಲೆಗಳನ್ನು ಪರಿಶೀಲಿಸಿದರು. ಇದರೊಂದಿಗೆ ಶಾಲಾ ವಾಹನಗಳು ಅಳವಡಿಸಿಕೊಳ್ಳಬೇಕಾದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು.
ಶಾಲಾ ಆವರಣದ ಮುಂಭಾಗ ಲಾರಿಗಳು ಸಂಚರಿಸುವ ಸಂದರ್ಭ ಕರ್ಕಶ ಶಬ್ದದ ಹಾರನ್ ಬಳಸುವ ಬಗ್ಗೆ ಆರ್‌ಟಿಓ ಇಲಾಖೆಗೆ ದೂರು ಸಲ್ಲಿಕೆಯಾಗಿದ್ದ ಹಿನ್ನೆಲೆ ಸೋಮವಾರಪೇಟೆ-ಶನಿವಾರಸಂತೆ ರಸ್ತೆಯಲ್ಲಿ ಲಾರಿಗಳನ್ನು ತಡೆದು ತಪಾಸಣೆ ನಡೆಸಲಾಯಿತು. ನಿಯಮ ಮೀರಿದ ಸಂಬAಧ ೬ ಲಾರಿಗಳಿಗೆ ದಂಡ ವಿಧಿಸಲಾಯಿತು.
ಇದರೊಂದಿಗೆ ಆಟೋ ನಿಲ್ದಾಣಕ್ಕೆ ಆಗಮಿಸಿ ನಿಲುಗಡೆಯಾಗಿದ್ದ ಆಟೋಗಳ ದಾಖಲಾತಿ ಪರಿಶೀಲಿಸಿದ ಸಂದರ್ಭ ಕೆಲವೊಂದು ಆಟೋ ಚಾಲಕರು ಸ್ಥಳದಿಂದ ಪರಾರಿಯಾದ ಘಟನೆಯೂ ನಡೆಯಿತು. ದಾಖಲಾತಿಗಳು ಸಮರ್ಪಕವಾಗಿ ಇಲ್ಲದೇ ಇರುವ ೩ ಆಟೋಗಳಿಗೆ ಸ್ಥಳದಲ್ಲೇ ದಂಡ ವಿಧಿಸಲಾಯಿತು.
ಆಟೋ ಚಾಲಕರು ಬಾಡಿಗೆ ಮಾಡುವ ಸಂದರ್ಭ ಸಮರ್ಪಕ ದಾಖಲಾತಿಗಳನ್ನು ಇಟ್ಟುಕೊಳ್ಳಬೇಕು. ಪ್ರಯಾಣಿಕರ ಸುರಕ್ಷತೆ ಹಾಗೂ ಭದ್ರತೆಗೆ ಆದ್ಯತೆ ನೀಡಬೇಕು ಎಂದು ಆರ್‌ಟಿಓ ಇನ್ಸ್ಪೆಕ್ಟರ್ ಪ್ರದೀಪ್ ತಿಳಿ ಹೇಳಿದರು.