ಸೋಮವಾರಪೇಟೆ, ಜೂ.೬: ಕೃಷಿ ಕಾರ್ಯಗಳು ಬಿರುಸಿನಿಂದ ನಡೆಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಶಾಲಾ ಕಾಲೇಜುಗಳೂ ಪುನರಾರಂಭಗೊAಡಿವೆ.

ಬಿಸಿಲು-ಮಳೆ-ಮೋಡದ ವಾತಾವರಣ ಇದೆ. ಕಳೆದ ನಾಲ್ಕು ದಿನಗಳಿಂದ ಸೋಮವಾರಪೇಟೆ ಭಾಗಕ್ಕೆ ಆಗಾಗ್ಗೆ ಉತ್ತಮ ಮಳೆಯಾಗುತ್ತಿದೆ. ಕಾಫಿ ತೋಟಗಳಲ್ಲಿ ಗೊಬ್ಬರ ಹಾಕುವ ಕಾರ್ಯಕ್ಕೆ ಈ ವಾತಾವರಣ ಉತ್ತಮವಾಗಿರುವ ಹಿನ್ನೆಲೆ, ಗೊಬ್ಬರ ಹಾಕುವ ಕೆಲಸ ಬಿರುಸಿನಿಂದ ನಡೆಯುತ್ತಿದೆ. ಶನಿವಾರದಂದು ಶಾಲಾ ಕಾಲೇಜು ಬಿಡುವ ಸಂದರ್ಭವೇ ಪಟ್ಟಣ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿಯಿತು. ಛತ್ರಿಗಳನ್ನು ಜೊತೆಗೆ ತಂದಿದ್ದ ಮಕ್ಕಳು ಮಳೆಯ ನಡುವೆ ಮನೆಯತ್ತ ಹೆಜ್ಜೆ ಹಾಕಿದರೆ, ಛತ್ರಿಗಳನ್ನು ಬಿಟ್ಟುಬಂದಿದ್ದ ಮಕ್ಕಳು ಮಳೆ ನಿಲ್ಲುವವರೆಗೂ ಬಸ್ ನಿಲ್ದಾಣ, ಅಂಗಡಿ ಮುಂಗಟ್ಟುಗಳ ಮುಂಭಾಗ ನಿಂತಿದ್ದರು.