ನಾಪೋಕ್ಲು, ಜೂ. ೬: ಕಾಫಿ ಬೆಳೆಗಾರರು ನೇರವಾಗಿ ಯುರೋಪಿಯನ್ ಮಾರುಕಟ್ಟೆಗೆ ಕಾಫಿ ರಫ್ತು ಮಾಡುತ್ತಿದ್ದರೆ ಅಥವಾ ಕಾಫಿಯನ್ನು ರಫ್ತು ಮಾಡುವ ರಫ್ತುದಾರರಿಗೆ ಮಾರಾಟ ಮಾಡುತ್ತಿದ್ದರೆ, ಕಾಫಿ ತೋಟದ ಭೂ ಪ್ರದೇಶದ ಸ್ಥಳಾಂಕ ಅಥವಾ ಬಹುಭುಜ ಆಕಾರವನ್ನು ಅವರೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ ಎಂದು ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಬಸವರಾಜ್ ಹೇಳಿದರು.
ಸಮೀಪದ ಬಲ್ಲಮಾವಟಿ ಗ್ರಾಮದ ಪಂಚಾಯಿತಿ ಸಭಾಂಗಣದಲ್ಲಿ ಕೇಂದ್ರ ಸರ್ಕಾರ, ಕಾಫಿ ಮಂಡಳಿ ಮಡಿಕೇರಿ ಇವರ ವತಿಯಿಂದ ಆಯೋಜಿಸಲಾಗಿದ್ದ ಇಂಡಿಯಾ ಕಾಫಿ ಆ್ಯಪ್ ನೋಂದಣಿ ಅಭಿಯಾನದಲ್ಲಿ ಅವರು ಮಾತನಾಡಿದರು.
ಭಾರತದಲ್ಲಿ ಕಾಫಿ ಒಂದು ರಫ್ತು ಆಧಾರಿತ ಉತ್ಪನ್ನವಾಗಿದ್ದು, ದೇಶದ ಒಟ್ಟು ಉತ್ಪಾದನೆಯ ಶೇ.೭೦ಕ್ಕೂ ಅಧಿಕ ಕಾಫಿಯನ್ನು ೧೨೦ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಈ ರಫ್ತುಗಳಲ್ಲಿ ಯುರೋಪ್ ಮುಖ್ಯವಾದ ಮಾರುಕಟ್ಟೆಯಾಗಿದ್ದು, ಭಾರತದ ಗ್ರೀನ್ ಕಾಫಿ ರಫ್ತಿನಲ್ಲಿ ಶೇ.೬೦ರಷ್ಟು ಪಾಲು ಹೊಂದಿದೆ. ಈಗ ಯುರೋಪಿಯನ್ ಒಕ್ಕೂಟ ಜಾರಿಗೊಳಿಸಲಾದ ಅರಣ್ಯ ಕಡಿತ ನಿರ್ಬಂಧ ನೀತಿ ಅಡಿಯಲ್ಲಿ, ಕಾಫಿಯು ಸೇರ್ಪಡೆಯಾಗಿದ್ದು ಯುರೋಪಿಯನ್ ಒಕ್ಕೂಟದ ಆಮದುದಾರ ಸಂಸ್ಥೆಗಳು ಸ್ಥಳಾಂಕ ಅಥವಾ ಬಹುಭುಜ ಆಕಾರ ಮಾಹಿತಿ ಬಳಸಿ, ೨೦೨೦ ಡಿಸೆಂಬರ್ ೩೧ರ ನಂತರ ಅರಣ್ಯ ಕಡಿತಗೊಂಡ ಭೂಮಿಯಲ್ಲಿ ಬೆಳೆಯಲ್ಪಟ್ಟಿಲ್ಲ ಎಂಬುದನ್ನು ಪರಿಶೀಲಿಸುತ್ತವೆ ಎಂದರು. ಭಾರತೀಯ ಕಾಫಿ ಮಂಡಳಿ ಒಂದು ಸರ್ಕಾರದ ಸಂಸ್ಥೆಯಾಗಿರುವುದರಿAದ, ಇಂಡಿಯಾ ಕಾಫಿ ಆ್ಯಪ್ ಮೂಲಕ ಬೆಳೆಗಾರರು ಸ್ಥಳಾಂಕ ಅಥವಾ ಬಹುಭುಜ ಆಕಾರವನ್ನು ಹಂಚಿಕೊಳ್ಳಬಹುದಾಗಿದೆ ಎಂದರು.
ಕಾಫಿ ಬೆಳೆಗಾರರ ತೋಟದ ಗಾತ್ರವು ೪ ಹೆಕ್ಟೇರ್ಗಿಂತ ಕಡಿಮೆ ಇದ್ದರೆ, ಸ್ಥಳಾಂಕ ಸಾಕು. ೪ ಹೆಕ್ಟೇರ್ ಅಥವಾ ಹೆಚ್ಚು ಇದ್ದರೆ, ಬಹುಭುಜ ಆಕಾರ ಅಗತ್ಯವಿದೆ.
೨೦೨೬-೨೭ ನೇ ಸಾಲಿಗೆ ಕಾಫಿ ಮಂಡಳಿ ವತಿಯಿಂದ ಐಸಿಡಿಪಿ ಯೋಜನೆಯಡಿಯಲ್ಲಿ ಕಾಫಿ ಮರುನಾಟಿ, ಹನಿ ನೀರಾವರಿಗೆ, ಕಾಫಿ ಗೋದಾಮು, ಕಾಫಿ ಕಣ ನಿರ್ಮಾಣ, ಕಾಫಿ ತೋಟದಲ್ಲಿ ಬಳಸಬಹುದಾದ ಯಂತ್ರೋಪಕರಣಗಳಿಗೆ ಕೇಂದ್ರ ಕಚೇರಿಯಿಂದ ಸಹಾಯಧನದ ಅನುಮೋದನೆ ದೊರೆತಿದ್ದು, ೬೨ ಎಕರೆವರೆಗಿನ ಕಾಫಿ ತೋಟ ಹೊಂದಿರುವ ಎಲ್ಲಾ ಬೆಳೆಗಾರರು ಅರ್ಜಿ ಸಲ್ಲಿಸಬಹುದು ಎಂದರು.
ಕಾಫಿ ಮಂಡಳಿ ನಾಪೋಕ್ಲು ವಿಭಾಗದ ವಿಸ್ತರಣಾಧಿಕಾರಿ ಸಜಿನ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಚೋಕಿರ ಬಾಬಿ ಭೀಮಯ್ಯ ಹಾಗೂ ಬೆಳೆಗಾರರು ಉಪಸ್ಥಿತರಿದ್ದರು.