ಕುಶಾಲನಗರ, ಜೂ. ೫: ಸ್ವಚ್ಛ ಪಟ್ಟಣ ಹಾಗೂ ಸ್ವಚ್ಛ ಕಾವೇರಿ ಗುರಿ ಹೊಂದಿ ೨೦೧೨ ರಲ್ಲಿ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆಯೊಂದನ್ನು ರಾಜ್ಯ ಸರ್ಕಾರವು ಸುಮಾರು ರೂ.೪೦ ಕೋಟಿ ಮೊತ್ತದಲ್ಲಿ ರೂಪಿಸಿತು.

ಆಡಳಿತಾತ್ಮಕ ಅನುಮೋದನೆ ದೊರೆತ ಬಳಿಕ ೨೦೧೪ರಲ್ಲಿ ಈ ಯೋಜನೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮೂಲಕ ಈ ಕಾಮಗಾರಿ ಪ್ರಾರಂಭವಾಗಿದ್ದು ೨೦೨೬ ಕಳೆಯುತ್ತಿದ್ದರೂ ಇನ್ನೂ ಯೋಜನೆ ಪೂರ್ಣಗೊಂಡಿಲ್ಲ.

ಈ ಯೋಜನೆಗೆ ೨೦೧೪ರಲ್ಲಿ ಗುತ್ತಿಗೆದಾರರನ್ನು ನೇಮಿಸಲಾಗಿದ್ದು, ೩೦ ತಿಂಗಳಲ್ಲಿ ಅಂದರೆ ೨೦೧೬ರ ಆರಂಭದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಅನುಷ್ಠಾನಗೊಳಿಸಲು ಅಂತಿಮ ಗಡುವು ನಿಗದಿಪಡಿಸಲಾಗಿತ್ತು. ಇದೀಗ ೨೦೨೬ ಮುಗಿಯುತ್ತಿದ್ದರೂ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ. ಸ್ವಚ್ಛ ಪಟ್ಟಣ ಹಾಗೂ ಸ್ವಚ್ಛ ಕಾವೇರಿ ನಿರ್ಮಾಣದ ಗುರಿಹೊಂದಿದ ಈ ಯೋಜನೆ ಒಳಚರಂಡಿ ಅಧಿಕಾರಿಗಳ ದಿವ್ಯ ನಿರ್ಲಕ್ಷö್ಯದಿಂದಾಗಿ ಸಂಪೂರ್ಣ ನೆನೆಗುದಿಗೆ ಬಿದ್ದಿದೆ. ಕಳೆದ ೧೨ ವರ್ಷಗಳಿಂದ ಕಾಮಗಾರಿ ಹೆಸರಿನಲ್ಲಿ ಹೆದ್ದಾರಿ ರಸ್ತೆ ಸೇರಿದಂತೆ ಬಡಾವಣೆಗಳ ರಸ್ತೆಗಳನ್ನು ಕೆಸರುಮಯ ಮಾಡಲಾಗುತ್ತಿದ್ದು, ಸ್ಥಳೀಯ ನಾಗರಿಕರು ದಿನನಿತ್ಯ ಹಿಡಿಶಾಪ ಹಾಕುವಂತಾಗಿದೆ.

ಕೊಡಗು ಜಿಲ್ಲಾಡಳಿತ ಸೇರಿದಂತೆ ಸ್ಥಳೀಯ ಆಡಳಿತಗಳು ಕೂಡ ಈ ಕಾಮಗಾರಿಯನ್ನು ಪೂರ್ಣಗೊಳಿಸುವ ಸಲುವಾಗಿ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ.

೨೦೨೭ ಹಾಗೂ ೨೦೪೩ರಲ್ಲಿ ಕುಶಾಲನಗರ ಪಟ್ಟಣದ ಅಂದಾಜು ಜನಸಂಖ್ಯೆಗೆ ಅನುಗುಣವಾಗಿ ೨೦೧೨ ರಲ್ಲಿ ಸರ್ಕಾರದಿಂದ ಅಂದಾಜು ಪಟ್ಟಿಯನ್ನು ತಯಾರಿಸಲಾಗಿತ್ತು. ಈ ಯೋಜನೆಗೆ ಒಳಚರಂಡಿ ಕೊಳವೆ ಮಾರ್ಗ ಹಾಗೂ ಆಳು ಗುಂಡಿಗಳ ನಿರ್ಮಾಣ ಕಾಮಗಾರಿ ಮಾಡಿ ೧೨ ವರ್ಷಗಳೇ ಕಳೆದಿದ್ದು, ಕಾಮಗಾರಿ ಬಹುತೇಕ ಕಾವೇರಿ ನದಿ ಪಾಲಾಗಿದೆ.

ಪಟ್ಟಣದ ಶೌಚಾಲಯದ ತ್ಯಾಜ್ಯಗಳು ಸೇರಿದಂತೆ ಇಡೀ ಪಟ್ಟಣದ ಎಲ್ಲಾ ಕಲುಷಿತ ನೀರು ನೇರವಾಗಿ ಕಾವೇರಿ ನದಿ ಪಾಲಾಗುತ್ತಿದೆ.

ನದಿ ತಟದಲ್ಲಿ ನಿಯಮ ಬಾಹಿರವಾಗಿ ನಿರ್ಮಿಸಿರುವ ಈ ಕಾಮಗಾರಿ ಕಳೆದ ೨೦೧೮ ರಿಂದ ೫ ನಿರಂತರ ವರ್ಷಗಳ ಕಾಲ ಪ್ರವಾಹದಲ್ಲಿ ಮುಳುಗಿಹೋಗಿದ್ದು ಯೋಜನೆ ಸಂಪೂರ್ಣ ಅವೈಜ್ಞಾನಿಕವಾಗಿದೆ.

ಪ್ರಥಮ ಹಂತದ ಕಾಮಗಾರಿ ಅಂದಾಜು ರೂ.೪೦ ಕೋಟಿ ಮತ್ತು ಎರಡನೇ ಹಂತದಲ್ಲಿ ಅಂದಾಜು ರೂ.೧೮ ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ತಾಂತ್ರಿಕತೆಯುಳ್ಳ ಮಲಿನ ನೀರು ಶುದ್ಧೀಕರಣ ಘಟಕ ಕಾಮಗಾರಿ ಪೂರ್ಣಗೊಂಡಿದ್ದು ಪಟ್ಟಣ ವ್ಯಾಪ್ತಿಯಲ್ಲಿ ಮೂಲ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಯೋಜನೆಗೆ ಅಗತ್ಯವಿರುವ ೧೧ ಕೆ.ವಿ ವಿದ್ಯುತ್ ಮಾರ್ಗದ ಕಾರ್ಯ ಪೂರ್ಣಗೊಂಡಿಲ್ಲ. ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಪಟ್ಟಣದಲ್ಲಿ ಹಾದುಹೋಗುವ ಹೆದ್ದಾರಿ ರಸ್ತೆಯಲ್ಲಿ ಕೂಡ ಪೈಪ್ ಅಳವಡಿಕೆ ಕಾಮಗಾರಿ ಈಗಲೂ ಕುಂಟುತ್ತಾ ಸಾಗಿ ಹೆದ್ದಾರಿ ರಸ್ತೆಯನ್ನು ಸಂಪೂರ್ಣ ಹಾಳುಗೆಡವುತ್ತಿದೆ.

ಯೋಜನೆಯ ಆರಂಭ ನಂತರ ಅಧಿಕಾರಿಗಳು, ಗುತ್ತಿಗೆದಾರರು ಬದಲಾಗುತ್ತಲೇ ಇದ್ದಾರೆ. ಕುಶಾಲನಗರದಲ್ಲಿ ಈ ಕಾಮಗಾರಿಯ ಉಸ್ತುವಾರಿ ಹೊತ್ತಿದ್ದ ಒಳ ಚರಂಡಿ ಮಂಡಳಿ ಇಂಜಿನಿಯರ್ ಓರ್ವ ಮೇಲಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಯೋಜನೆಯ ಬಗ್ಗೆ ನಿರ್ಲಕ್ಷö್ಯ ತಾಳಿ, ಯೋಜನೆ ನೆನೆಗುದಿಗೆ ಬೀಳಲು ಪ್ರಮುಖ ಕಾರಣರಾಗಿದ್ದಾರೆ ಎನ್ನುವ ಆರೋಪಗಳು ಸ್ಥಳೀಯರದ್ದಾಗಿದೆ.

ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಲೋಕಾಯುಕ್ತ ಅಧಿಕಾರಿಗಳು ಸುಮೊಟೊ ದೂರು ದಾಖಲಿಸಿಕೊಂಡು ಸಮಗ್ರ ತನಿಖೆ ನಡೆಸಿ ಸಂಬAಧಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಒಳಚರಂಡಿ ಯೋಜನೆಯ ಮೂಲಕ ಪಟ್ಟಣದ ನೈರ್ಮಲ್ಯ ಉತ್ತಮಗೊಳ್ಳಲಿದೆ ಹಾಗೂ ಕಾವೇರಿ ನದಿಯ ಉಗಮ ಸ್ಥಾನದಲ್ಲಿಯೇ ಕಲುಷಿತವಾಗುವುದನ್ನು ತಡೆಗಟ್ಟಬಹುದು. ಇದು ರಾಜ್ಯ ಸರ್ಕಾರದ ಪ್ರಮುಖ ಗುರಿಯಾಗಿತ್ತು.

ಆದರೆ ಈ ಯೋಜನೆ ಪ್ರಾರಂಭವಾದ ನಂತರ ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಗಳಿಂದ ಅಳವಡಿಸಿರುವ ಪೈಪ್‌ಗಳ ಮೂಲಕ ನೇರವಾಗಿ ಶೌಚಾಲಯ ತ್ಯಾಜ್ಯಗಳು ಕಾವೇರಿ ನದಿಗೆ ಸೇರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ರಾಜ್ಯ ಸರ್ಕಾರದ ೯೫% ಮತ್ತು ಸ್ಥಳೀಯ ಸಂಸ್ಥೆಯ ಶೇ.೫ ಅನುದಾನದಲ್ಲಿ ಈ ಯೋಜನೆ ರೂಪುಗೊಂಡಿದೆ. ಆದರೆ ಕಾಮಗಾರಿ ಇನ್ನೂ ಶೇ.೮೦ ರಷ್ಟು ಪೂರ್ಣಗೊಂಡಿಲ್ಲ.

ಅಪೂರ್ಣಗೊAಡಿರುವ ಕಾಮಗಾರಿಯ ಬಗ್ಗೆ ‘ಶಕ್ತಿ’ಯಲ್ಲಿ ಹಲವು ಬಾರಿ ವರದಿ ಪ್ರಕಟಗೊಂಡಿದ್ದು, ಜಿಲ್ಲಾಧಿಕಾರಿಗಳ ನಿರ್ದೇಶನ ಮೇರೆಗೆ ಹುಸಿ ಭರವಸೆ ನೀಡಿದ ಮಂಡಳಿಯ ಅಧಿಕಾರಿಗಳು ೨೦೨೨ರ ಮೇ ಒಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಕುಶಾಲನಗರದಲ್ಲಿ ಒಳಚರಂಡಿ ವ್ಯವಸ್ಥೆಗೆ ಚಾಲನೆ ಕೊಡುವುದು ಖಚಿತ ಎಂದು ಅನುಪಾಲನಾ ವರದಿ ಸಲ್ಲಿಸಿದ್ದರು.

ಆದರೆ ಇದೀಗ ೨೦೨೬ ಮುಗಿಯುತ್ತಿದ್ದರೂ ಒಳಚರಂಡಿ ಕಾಮಗಾರಿ ಮಾತ್ರ ಇನ್ನೂ ಅನುಷ್ಠಾನಗೊಂಡಿಲ್ಲ.

ಇದರಿಂದ ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತಲ ವ್ಯಾಪ್ತಿಯ ಸಂಪೂರ್ಣ ಕಲುಷಿತ ನೀರು ನೇರವಾಗಿ ಕಾವೇರಿ ನದಿಗೆ ಹರಿಯುತ್ತಿದ್ದು, ಇಡೀ ಕಾವೇರಿ ಬಹುತೇಕ ಕಲುಷಿತಗೊಳ್ಳುವ ಜೊತೆಗೆ ತನ್ನ ಮೂಲ ಗುಣಮಟ್ಟವನ್ನು ಕಳೆದುಕೊಂಡು ಹರಿಯುವ ಸ್ಥಿತಿಗೆ ಬಂದೊದಗಿದೆ. ಈ ಮೂಲಕ ನದಿತೀರದ ಜನತೆ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಆತಂಕದಲ್ಲಿ ದಿನದೊಡುತ್ತಿದ್ದಾರೆ.

ಕುಶಾಲನಗರದ ಬೈಚನಹಳ್ಳಿ ತಾವರೆಕೆರೆ ಬಳಿಯಿಂದ ಗುಮ್ಮನಕೊಲ್ಲಿ ತನಕ ಸುಮಾರು ೪.೫ ಕಿಲೋಮೀಟರ್ ಉದ್ದಕ್ಕೆ ಕಾವೇರಿ ನದಿಯ ಅಂಚಿನಲ್ಲಿ ಅವೈಜ್ಞಾನಿಕವಾಗಿ ಪೈಪುಗಳನ್ನು ಅಳವಡಿಸಲಾಗಿದ್ದು, ಪ್ರವಾಹದ ಹಿನ್ನೆಲೆಯಲ್ಲಿ ಕಾಮಗಾರಿ ಪರಿಕರಗಳು ಸಂಪೂರ್ಣ ನದಿ ಪಾಲಾಗಿ ತಗ್ಗುಪ್ರದೇಶಗಳಲ್ಲಿ ನಿರ್ಮಾಣಗೊಂಡಿರುವ ಡೂಮ್‌ಗಳನ್ನು ಮಣ್ಣು ಸುರಿದು ಮುಚ್ಚಿಹಾಕಿರುವ ದೃಶ್ಯ ಗೋಚರಿಸಿದೆ.

ಯೋಜನೆಯನ್ನು ಪರಿಶೀಲನೆ ಮಾಡುವ ಹೆಸರಿನಲ್ಲಿ ಆಗಾಗ ಹಿರಿಯ ಅಧಿಕಾರಿಗಳು ಭೇಟಿ ನೀಡಿ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆಯೇ ಹೊರತು ಯೋಜನೆಯನ್ನು ಪೂರ್ಣಗೊಳಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎನ್ನುವುದು ಪಟ್ಟಣ ನಿವಾಸಿಗಳ ಆರೋಪವಾಗಿದೆ.

ಕಾಮಗಾರಿ ವಿಳಂಬವಾದ ಹಿನ್ನೆಲೆಯಲ್ಲಿ ಪ್ರಥಮ ಹಂತದ ರೂ.೪೦ ಕೋಟಿಯ ಕಾಮಗಾರಿ ಇದೀಗ ೫೮ ಕೋಟಿಗೆ ಏರಿದೆ. ಮುಂದೆ ಯೋಜನೆ ಪೂರ್ಣಗೊಳ್ಳಬೇಕಾದಲ್ಲಿ ಇನ್ನೂ ಹಲವಾರು ಕೋಟಿ ಅನುದಾನದ ಅಗತ್ಯತೆ ಉಂಟಾಗಿದೆ.

ಇನ್ನಾದರೂ ಮಂಡಳಿ ಅಧಿಕಾರಿಗಳು ಎಚ್ಚೆತ್ತುಕೊಂಡು ಕುಶಾಲನಗರದ ಬೃಹತ್ ಯೋಜನೆ ಒಂದನ್ನು ಪೂರ್ಣಗೊಳಿಸಿ ಅನುಷ್ಠಾನಗೊಳಿಸುವುದರೊಂದಿಗೆ ಸ್ವಚ್ಛ ಕುಶಾಲನಗರ ಹಾಗೂ ಸ್ವಚ್ಛ ಕಾವೇರಿ ನಿರ್ಮಾಣ ಮಾಡುವಲ್ಲಿ ಕೂಡಲೇ ಎಚ್ಚರಗೊಳ್ಳಬೇಕಾಗಿದೆ

- ಎಂ.ಎನ್ ಚಂದ್ರಮೋಹನ್