*ಗೋಣಿಕೊಪ್ಪ, ಜೂ. ೫: ತೋಟವನ್ನು ವೀಕ್ಷಿಸಲು ತೆರಳಿದ ಸಂದರ್ಭ ಕಾಡಾನೆ ದಾಳಿಗೊಳಗಾಗಿ ಜಿಲ್ಲೆಯ ಮೂಲದ ಹಿರಿಯ ಐಪಿಎಸ್ ಅಧಿಕಾರಿಯ ಪತ್ನಿ ಸಾವಿಗೀಡಾದ ಘಟನೆ ಕೋಣನಕಟ್ಟೆಯಲ್ಲಿ ಸಂಭವಿಸಿದೆ.

ಕೇಂದ್ರ ಸೇವೆಯ ಹಿರಿಯ ಐಪಿಎಸ್ ಅಧಿಕಾರಿ, ಸ್ವಿಜ್ಜರ್‌ಲ್ಯಾಂಡ್‌ನ ಜಿನೇವಾದ ಕೌನ್ಸಲೇಟ್ ಜನರಲ್ ಆಗಿ ಕೇಂದ್ರ ಸರಕಾರದಿಂದ ನಿಯೋಜನೆಗೊಂಡಿರುವ ಅಣ್ಣಳಮಾಡ ಸುನಿಲ್ ಅಚ್ಚಯ್ಯ ಅವರ ಪತ್ನಿ ಸಂಧ್ಯಾ (೫೧) ಮೃತ ದುರ್ದೈವಿ.

ದೆಹಲಿಯಲ್ಲಿ ನೆಲೆಸಿರುವ ಸಂಧ್ಯಾ ಅವರು ವಿವಾಹ ಕಾರ್ಯಕ್ರಮದ ಹಿನ್ನೆಲೆ ಮೂರು ದಿನಗಳ ಹಿಂದೆ ಕೋಣನಕಟ್ಟೆಗೆ ಆಗಮಿಸಿದ್ದರು. ಗ್ರಾಮದಲ್ಲಿರುವ ತಮ್ಮ ತೋಟವನ್ನು ದಿನೇಶ್ ಹಾಗೂ ಲಕ್ಷö್ಮಣ್ ಎಂಬವರು ನಿರ್ವಹಣೆ ಮಾಡುತ್ತಿದ್ದು, ಶುಕ್ರವಾರ ಬೆಳಿಗ್ಗೆ ತೋಟವನ್ನು ವೀಕ್ಷಿಸಲೆಂದು ಸುನಿಲ್ ಅಚ್ಚಯ್ಯ ಅವರ ಸಹೋದರಿ ಸ್ವಪ್ನಾ ಸೇರಿದಂತೆ ದಿನೇಶ್, ಲಕ್ಷö್ಮಣ್, ತೋಟದ ರೈಟರ್ ಆನಂದ್ ಅವರೊಂದಿಗೆ ಸಂಧ್ಯಾ ಅವರು ತೆರಳಿದ್ದಾರೆ. ಈ ವೇಳೆ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಆನೆ ಏಕಾಏಕಿ ದಾಳಿಗೆ ಮುಂದಾಗಿದೆ. ಈ ವೇಳೆ ಎಲ್ಲರೂ ದಿಕ್ಕಾಪಾಲಾಗಿ ಓಡಿದ್ದಾರೆ. ಆದರೆ, ಸಂಧ್ಯಾ ಅವರು ಮಾತ್ರ ನೆಲಕ್ಕುರುಳಿ ಬಿದ್ದಿದ್ದಾರೆ. ಈ ಸಂದರ್ಭ ಆನೆ ಸಂಧ್ಯಾ ಅವರ ಮೇಲೆ ದಾಳಿ ನಡೆಸಿ ಕಾಲು ಹಾಗೂ ಎದೆಯ ಭಾಗಕ್ಕೆ ತುಳಿದಿದೆ.

ಸ್ಥಳದಲ್ಲಿದ್ದ ರೈಟರ್ ತಕ್ಷಣವೇ ಓಡಿ ಬರುತ್ತಿದ್ದ ಮೀದೇರಿರ ಪ್ರವೀಣ್ ಅವರ ಜೀಪನ್ನು ತಡೆದು ಘಟನೆಯನ್ನು ವಿವರಿಸಿದ್ದಾರೆ. ೪ಏಳನೇ ಪುಟಕ್ಕೆ

೪ಐದನೇ ಪುಟಕ್ಕೆ ಪ್ರವೀಣ್ ಅವರು ಜೀಪನ್ನು ತೋಟದೊಳಗೆ ತಂದಿದ್ದು, ಜೀಪಿನ ಶಬ್ದಕ್ಕೆ ಆನೆ ತೋಟದೊಳಗೆ ಮರೆಯಾಗಿದೆ. ಗಂಭೀರ ಗಾಯಗೊಂಡು ರಕ್ತಸ್ರಾವÀದಿಂದ ಅಸ್ವಸ್ಥಗೊಂಡು ಬಿದ್ದಿದ್ದ ಸಂಧ್ಯಾ ಅವರನ್ನು ಗೋಣಿಕೊಪ್ಪದ ಲೋಪಮುದ್ರಾ ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ತೋಟದ ರೈಟರ್ ಆನಂದ್, ಲಕ್ಷಣ್ ಮತ್ತು ದಿನೇಶ್ ಅವರುಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು. ಮೃತರು ಪತಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ದೆಹಲಿಯಿಂದ ಅಣ್ಣಳಮಾಡ ಸುನಿಲ್ ಹಾಗೂ ಇಬ್ಬರು ಮಕ್ಕಳು ಬೆಂಗಳೂರಿನಿAದ ಕೋಣನಕಟ್ಟೆಗೆ ಆಗಮಿಸಿದ್ದು, ತಾ. ೬ ರಂದು (ಇಂದು) ಕೋಣನಕಟ್ಟೆಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಶಾಸಕ ಪೊನ್ನಣ್ಣ ಭೇಟಿ

ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಇದೇ ಸಂದರ್ಭ ಅಧಿಕಾರಿಗಳಿಂದ ಘಟನೆ ವಿವರವನ್ನು ಪಡೆದುಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ತಿತಿಮತಿ ಆರ್.ಎಫ್.ಓ. ದೇವರಾಜ್, ವೃತ್ತ ನಿರೀಕ್ಷಕ ಶಿವರಾಜ್ ಆರ್. ಮುಧೋಳ್, ಉಪನಿರೀಕ್ಷಕ ಕಾಳೇಗೌಡ, ವೆಂಕಟೇಶ್ ಹಾಗೂ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡರು.

ಆರೋಗ್ಯ ಕೇಂದ್ರದಲ್ಲಿ ಜಮಾಯಿಸಿದ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಕಿಡಿಕಾರಿದರು. ಸರಕಾರ ಹಾಗೂ ಅಧಿಕಾರಿಗಳು ಯಾವುದೇ ಕ್ರಮವಹಿಸುತ್ತಿಲ್ಲ. ನಿರ್ಲಕ್ಷö್ಯತನದಿಂದ ಪದೇಪದೇ ಈ ರೀತಿ ಘಟನೆ ಸಂಭವಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಕ್ಷಿಣ ಕೊಡಗು ಭಾಗದಲ್ಲಿ ವನ್ಯಪ್ರಾಣಿಗಳ ಹಾವಳಿ ವಿಪರೀತವಾಗಿದ್ದು, ವರ್ಷದಿಂದ ವರ್ಷಕ್ಕೆ ಆನೆ ದಾಳಿಯಿಂದ ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಐಜಿಪಿ ಭೇಟಿ

ದಕ್ಷಿಣ ವಿಭಾಗದ ಪೊಲೀಸ್ ಮಹಾನಿರೀಕ್ಷಕ ಡಾ. ಎಂ.ಬಿ. ಬೋರಲಿಂಗಯ್ಯ ಅವರು ಕೋಣನಕಟ್ಟೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. - ವರದಿ : ದಿನೇಶ್, ಜಗದೀಶ್ ಘಟನೆ ನಡೆದ ಪ್ರದೇಶ ಹುಣಸೂರು ಅರಣ್ಯ ವಿಭಾಗಕ್ಕೆ ಒಳಪಟ್ಟಿದ್ದು, ದಾಳಿ ನಡೆಸಿದ ತೋಟದಲ್ಲಿಯೇ ಹಲವು ಸಮಯದಿಂದ ಬೀಡುಬಿಟ್ಟಿರಬಹುದು ಎಂದು ಹುಣಸೂರು ವಿಭಾಗದ ಅರಣ್ಯಾಧಿಕಾರಿ ಕಿರುಭನಾಥ್ ಮಾಹಿತಿ ನೀಡಿದ್ದಾರೆ.

ನಾಗರಹೊಳೆ ಮೂಲಕ ಆನೆಗಳು ದಾಟದಂತೆ ಎಚ್ಚರಿಕೆ ವಹಿಸಲಾಗಿದ್ದು, ಆನೆಗಳ ಮೇಲೆ ನಿಗಾವಹಿಸಲಾಗಿದೆ. ಬೆಳಿಗ್ಗೆ ೭ ಗಂಟೆಯ ತನಕವೂ ಯಾವುದೇ ಆನೆ ಅರಣ್ಯ ದಾಟಿ ಹೋದ ಸುಳಿವು ಇಲ್ಲ. ದಾಳಿ ನಡೆಸಿದ ಆನೆ ಘಟನೆ ನಡೆದ ಸ್ಥಳದಿಂದ ೨ ಕಿ.ಮೀ. ಅಂತರದ ಮತ್ತೊಂದು ತೋಟದಲ್ಲಿರುವ ಮಾಹಿತಿ ಇದ್ದು, ಸೆರೆಗೆ ಅನುಮತಿ ಸಿಕ್ಕ ಬಳಿಕ ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.