ಮಡಿಕೇರಿ, ಜೂ. ೫: ಕೊಡಗಿನ ನೆಲ-ಜಲ ಉಳಿವಿಗೆ ಸರಕಾರ ಹಾಗೂ ಅಡಳಿತ ಕ್ರಮವಹಿಸಬೇಕೆಂದು ಪರಿಸರ ಮತ್ತು ಆರೋಗ್ಯ ಫೌಂಡೇಷನ್ ಸ್ಥಾಪಕ ನಿ. ಕರ್ನಲ್ ಸಿ.ಪಿ. ಮುತ್ತಣ್ಣ ಒತ್ತಾಯಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಅನಿಯಂತ್ರಿತ ನಗರೀಕರಣದಿಂದ ಅವನತಿಯೆಡೆಗೆ ಸಾಗುತ್ತಿದೆ. ಈ ಹಿನ್ನೆಲೆ ಕರ್ನಾಟಕ ಭೂಕಂದಾಯ ಕಾಯಿದೆ ೧೯೬೪ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜೊತೆಗೆ ಭೂಮಿ ಖರೀದಿಯ ಮೇಲೆ ನಿರ್ಬಂಧದ ಅವಶ್ಯಕತೆ ಇದೆ. ಕೊಡಗಿನಲ್ಲಿ ಸ್ಥಳೀಯ ಸಮುದಾಯಗಳನ್ನು ಹೊರತುಪಡಿಸಿ ಇತರ ಜನರು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ತಡೆಯಲು ನಿರ್ಬಂಧ ವಿಧಿಸಬೇಕು. ಭೂ ಮಾರಾಟವನ್ನು ಜಮ್ಮಾಹಿಡುವಳಿದಾರರು, ಸ್ಥಳೀಯರಿಗೆ ಮಾತ್ರ ಸೀಮಿತಗೊಳಿಸಬೇಕೆಂದು ಆಗ್ರಹಿಸಿದರು.

ಪೊನ್ನಂಪೇಟೆ ಗ್ರಾ.ಪಂ. ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಯಾಗಿದ್ದು, ಇದರ ಮರುಪರಿಶೀಲನೆಯಾಗಬೇಕು. ಗೋಣಿಕೊಪ್ಪವನ್ನು ಪ.ಪಂ.ಆಗಿ ಪರಿವರ್ತಿಸುವ ಪ್ರಸ್ತಾಪವಿದ್ದು, ಇದಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

ಕೊಡಗಿಗೆ ರೈಲ್ವೆ ಯೋಜನೆ ಅಥವಾ ಬಹುಪಥ ಹೆದ್ದಾರಿಗಳ ಅಗತ್ಯವಿಲ್ಲ. ಕುಶಾಲನಗರ-ಮೈಸೂರು ರೈಲ್ವೆ ಯೋಜನೆಯನ್ನು ಕೈಬಿಡಬೇಕು. ಜೊತೆಗೆ ಜಿಲ್ಲೆಯ ರಸ್ತೆಗಳಿಗೆ ಕಾಯಕಲ್ಪ ನೀಡುವ ಹಾಗೂ ಬುಡಕಟ್ಟು ಜನರ ಆರೋಗ್ಯ ರಕ್ಷಣೆಗೆ ಪ್ರತಿ ಹಾಡಿಯಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಪರಿಸರವಾದಿ ಮಾಳೇಟಿರ ಶ್ರೀನಿವಾಸ್ ಮಾತನಾಡಿ, ದಕ್ಷಿಣ ಕನ್ನಡ ಭಾಗದ ಸಂಸದರು, ಶಾಸಕರು ಸೇರಿ ಕೊಡಗಿನ ಮೂಲಕ ರೈಲ್ವೆ ಯೋಜನೆಯನ್ನು ಪ್ರಸ್ತಾಪಿಸಿರುವುದು ಅನಗತ್ಯವಾಗಿದೆ. ವನ್ಯಜೀವಿ ಹಾವಳಿಯ ನಡುವೆ ತತ್ತರಿಸಿರುವ ಕೊಡಗಿಗೆ ರೈಲ್ವೆ ಯೋಜನೆ ರೂಪಿಸಿದರೆ ದೊಡ್ಡ ಅಪಾಯ ಎದುರಾಗುತ್ತದೆ. ಅಕ್ರಮ ವಲಸಿಗರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬಿಗಿಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮೋದುರು ನಿವಾಸಿ ಶಿವಶಂಕರ್ ಮಾತನಾಡಿ, ಭೂಪರಿವರ್ತನೆಗಳು ಅಕ್ರಮವಾಗಿ ನಡೆಯುತ್ತಿದ್ದು, ತೋಡುಗಳು ಒತ್ತುವರಿಯಾಗುತ್ತಿವೆ. ಬಾಡಿಗೆ ಮನೆ ಪಡೆದು ನಿಯಮ ಉಲ್ಲಂಘಿಸಿ ಹೋಂಸ್ಟೇಗಳನ್ನು ನಡೆಸಲಾಗುತ್ತಿದ್ದು, ಇಂತವುಗಳನ್ನು ಪತ್ತೆಹಚ್ಚಿ ಕಠಿಣ ಕ್ರಮಕೈಗೊಳ್ಳಬೇಕೆಂದರು.

ಕುಟ್ಟದ ಸಿಂಕೋನ ನಿವಾಸಿ ಸುಬ್ಬ ಮಾತನಾಡಿ, ಆದಿವಾಸಿಗಳ ರಕ್ಷಣೆಗೆ ಸರಕಾರ ಮುಂದಾಗಬೇಕು. ಮೊದಲು ಶಿಕ್ಷಣ ಇಲ್ಲ ಎಂಬ ಕಾರಣಕ್ಕೆ ಸರಕಾರಿ ಕೆಲಸ ಲಭ್ಯವಾಗುತ್ತಿರಲಿಲ್ಲ. ಇದೀಗ ವಿದ್ಯಾವಂತರಾದರೂ ಪ್ರಯೋಜನವಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಮೂಲನಿವಾಸಿಗಳಾದ ಬುಡಕಟ್ಟು ಜನರನ್ನು ಅಲೆಮಾರಿಗಳೆಂದು ಸರಕಾರ ಗುರುತಿಸುವುದರಿಂದ ಸರಕಾರದ ಯೋಜನೆ ಪಡೆಯಲು ತೊಡಕು ಉಂಟಾಗುತ್ತಿದೆ ಎಂದು ಹೇಳಿದರು.

ಗೋಣಿಕೊಪ್ಪ ನಿವಾಸಿ ಪದ್ಮಿನಿ ಮಾತನಾಡಿ, ತೋಡುಗಳು ಒತ್ತುವರಿ ತಡೆಯುವುದು ಆದ್ಯತೆಯಾಗಬೇಕು. ಗೋಣಿಕೊಪ್ಪ ಭಾಗದಲ್ಲಿ ಒಂದು ಕಾಲದಲ್ಲಿ ಸ್ವಚ್ಛಂದವಾಗಿ ಹರಿಯುತ್ತಿದ್ದ ಕೀರೆಹೊಳೆ ಇಂದು ಮಲಿನವಾಗಿ ಚರಂಡಿಯಾಗಿ ಬದಲಾಗಿದೆ. ಕೊಡಗಿನ ಭೂಮಿ, ಸಂಸ್ಕೃತಿ, ಪರಂಪರೆಗೆ ಧಕ್ಕೆ ಬರುತ್ತಿದ್ದು, ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಕಿರಗಂದೂರು ನಿವಾಸಿ ರೋಶನ್ ಮಾತನಾಡಿ, ಸೋಮವಾರಪೇಟೆ ತಾಲೂಕಿನ ಮಕ್ಕಳಗುಡಿ ಬೆಟ್ಟದ ವ್ಯಾಪ್ತಿಯನ್ನು ೨೦೧೮ರ ಪ್ರಕೃತಿ ವಿಕೋಪದ ಬಳಿಕ ಪ್ರದೇಶ ಸೂಕ್ಷö್ಮ ವಲಯವೆಂದು ಗುರುತಿಸಲ್ಪಟ್ಟಿದ್ದು, ಇಲ್ಲಿ ರೆಸಾರ್ಟ್ ನಿರ್ಮಾಣದಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದರು.