ಮಡಿಕೇರಿ, ಜೂ. ೫; ಮಡಿಕೇರಿ ನಗರಸಭಾ ವ್ಯಾಪ್ತಿಯ ಒಂದನೇ ವಾರ್ಡ್ ವಿದ್ಯಾನಗರದಲ್ಲಿ ನಿರ್ಮಾಣವಾಗುತ್ತಿರುವ ಬಡವಾಣೆಯಿಂದ ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿರುವದನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಪರಿಶೀಲಿಸಿದರು.

ವಿದ್ಯಾನಗರದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಬಡಾವಣೆಯ ನೀರನ್ನು ಮೋರಿ ಅಳವಡಿಸುವ ಮೂಲಕ ವಸತಿ ಪ್ರದೇಶದ ಚರಂಡಿಗೆ ಬಿಡಲಾಗುತ್ತಿದ್ದು, ಇದರಿಂದ ಭೂ ಕುಸಿತದೊಂದಿಗೆ ಬಡಾವಣೆಯ ಕೆಳ ಭಾಗದ ನಿವಾಸಿಗಳಿಗೆ ತೊಂದರೆಯಾಗಲಿದೆ ಎಂದು ನಿವಾಸಿಗಳು ಶಾಸಕರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಇಂದು ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಚರಂಡಿಯನ್ನು ಬದಲಿ ಮಾರ್ಗವಾಗಿ ಮಾರ್ಪಡಿಸಿ ನೇರವಾಗಿ ಪಕ್ಕದಲ್ಲೇ ಇರುವ ರಾಜಕಾಲುವೆ ಕಡೆಗೆ ಹರಿಯುವಂತೆ ಮಾಡಲು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ತೋಡಿಗೆ ಅಡ್ಡಲಾಗಿರುವ ಮೋರಿ ಚಿಕ್ಕದಾಗಿದ್ದು, ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯದೆ ಮನೆಗಳಿಗೆ ನುಗ್ಗುತ್ತಿರುವ ಬಗ್ಗೆ ಅಲ್ಲಿನ ನಿವಾಸಿಗಳು ಶಾಸಕರ ಗಮನಕ್ಕೆ ತಂದರು.

ಈ ಸಂದರ್ಭ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಮಡಿಕೇರಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಯಶ್ ದೋಲ್ಪಾಡಿ, ಒಂದನೇ ವಾರ್ಡ್ನ ನಿವಾಸಿಗಳು ಇದ್ದರು.