ಮಡಿಕೇರಿ, ಜೂ. ೪: ಕನ್ನಡ ಪುಸ್ತಕ ಪ್ರಾಧಿಕಾರ, ಜಿಲ್ಲಾ ಜಾಗೃತಿ ಸಮಿತಿ ವತಿಯಿಂದ ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಅವರ ನಿವಾಸದಲ್ಲಿ ಭಾನುವಾರ ಪ್ರಾಧಿಕಾರದ ಅಧ್ಯಕ್ಷ ಮಾನಸ ಅವರು ಗ್ರಂಥಾಲಯ ಆರಂಭಿಸುವ ಮೂಲಕ ಕೊಡಗು ಜಿಲ್ಲೆಯಲ್ಲಿ ಪ್ರಾಧಿಕಾರದ ‘ಮನೆಗೊಂದು ಗ್ರಂಥಾಲಯ’ ಯೋಜನೆಯನ್ನು ಅನುಷ್ಠಾನಗೊಳಿಸಿದರು.
ಈ ವೇಳೆ ಮಾತನಾಡಿದ ಮಾನಸ, ಸಾಮಾನ್ಯ ಜನರಲ್ಲಿ ಪುಸ್ತಕ ಪ್ರೀತಿ ಹೆಚ್ಚಿಸಬೇಕು ಹಾಗೂ ಪುಸ್ತಕ ಖರೀದಿಸಿ ಓದುವ ಪರಿಪಾಠ ಹೆಚ್ಚಿಸಬೇಕು ಎಂಬ ಉದ್ದೇಶದಿಂದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಹಿಂದೆ ಮುದ್ರಣ ತಂತ್ರಜ್ಞಾನ ಹಿಂದೆ ಇತ್ತು. ಜನರಲ್ಲಿ ಪುಸ್ತಕ ಓದುವಿಕೆ ಹೆಚ್ಚಿತ್ತು. ಆದರೆ ಪುಸ್ತಕಗಳೇ ಸಿಗುತ್ತಿರಲಿಲ್ಲ. ಸಂಚಾರಿ ಗ್ರಂಥಾಲಯಗಳ ಮೂಲಕ ಪುಸ್ತಕಗಳನ್ನು ಬಾಡಿಗೆಗೆ ಪಡೆದು ಜನರು ಓದುತ್ತಿದ್ದರು. ಆಗ ಓದುವುದನ್ನು ಬಿಟ್ಟರೆ ಜನರಿಗೆ ಬೇರೆ ಪರ್ಯಾಯಗಳೇ ಇರಲಿಲ್ಲ ಎಂದು ಹೇಳಿದರು.
ಆದರೆ, ಈಗ ಮುದ್ರಣ ಮಾಧ್ಯಮ ಕ್ಷಿಪ್ರಗತಿಯಲ್ಲಿ ಬದಲಾಗಿದೆ. ರಾಶಿ ರಾಶಿ ಪುಸ್ತಕಗಳು ಸಿಗುತ್ತಿವೆ. ಆದರೆ, ಅದನ್ನು ಓದುವವರ ಸಂಖ್ಯೆ ತೀರಾ ಕಡಿಮೆ ಇದೆ. ಪುಸ್ತಕ ಓದುವ ಕೈಗಳಿಗೆ ಇಂದು ಮೊಬೈಲ್‌ಗಳು ಬಂದಿವೆ ಎಂದು ಬೇಸರ ವ್ಯಕ್ತಪಡಿಸಿದರು. ಲೇಖಕ ಹಾಗೂ ಓದುಗ ಸಾಹಿತ್ಯ ಎಂಬ ರಥÀಕ್ಕೆ ಚಕ್ರಗಳು. ಇದುವರೆಗೂ ಲೇಖಕನಿಗೆ ಹೆಚ್ಚಿನ ಮಾನ್ಯತೆ, ಪುರಸ್ಕಾರ, ಸನ್ಮಾನಗಳು ಸಿಕ್ಕಿವೆ. ಇದರಿಂದ ಲೇಖಕರ ಸಂಖ್ಯೆ ದೊಡ್ಡಮಟ್ಟದಲ್ಲಿ ಬೆಳೆದಿದೆ. ಆದರೆ, ಓದುಗರಿಗೆ ಇದುವರೆಗೂ ಮಾನ್ಯತೆಯೇ ಸಿಕ್ಕಿರಲಿಲ್ಲ. ಇದರಿಂದ ಅವರ ಸಂಖ್ಯೆ ಕ್ಷೀಣಿಸುತ್ತಿದೆ. ಹಾಗಾಗಿ, ಓದುಗರಿಗೂ ಮನ್ನಣೆ ನೀಡಲು ಪ್ರಾಧಿಕಾರ ತೀರ್ಮಾನಿಸಿದೆ ಎಂದರು.
ಇದರ ಅಂಗವಾಗಿ ‘ಅಂಗಳದಲ್ಲಿ ತಿಂಗಳ ಪುಸ್ತಕ’ ಕಾರ್ಯಕ್ರಮ ಹಾಗೂ ‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮ ಆರಂಭಿಸಿದೆವು. ಈ ಮೂಲಕ ಓದುಗರಿಗೂ ಮಾನ್ಯತೆ ನೀಡಲು ತೀರ್ಮಾನಿಸಲಾಯಿತು ಎಂದು ಹೇಳಿದರು. ಮನೆಗೊಂದು ಗ್ರಂಥಾಲಯ ಮಾಡುವ ಮೂಲಕ ಉತ್ತಮ ಗ್ರಂಥಾ ಲಯ ಹೊಂದಿದವರಿಗೆ ರಾಜ್ಯಮಟ್ಟದಲ್ಲಿ ೪ ಕಂದಾಯ ವಿಭಾಗಗಳಿಗೆ ತಲಾ ರೂ. ೨೫ ಸಾವಿರ ಮೌಲ್ಯದ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ. ಈ ಪ್ರಶಸ್ತಿಗಳಿಗೆ ನಂಜನಗೂಡು ತಿರುಮಲಾಂಬ, ಹಾ.ಮಾ. ನಾಯಕ, ಪಿ.ಆರ್. ತಿಪ್ಪೇಸ್ವಾಮಿ ಹಾಗೂ ಗಳಗನಾಥ ಅವರ ಹೆಸರಿಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಯೋಜನೆಯಡಿ ಸಾರ್ವಜನಿಕರು, ಸಂಘ, ಸಂಸ್ಥೆಗಳು ತಮ್ಮ ಮನೆ ಅಥವಾ ಕಚೇರಿಯಲ್ಲೇ ಪುಟ್ಟದಾದ ಗ್ರಂಥಾಲಯ ಆರಂಭಿಸಬಹುದು. ಜನರೇ ಪುಸ್ತಕ ಖರೀದಿಸಿ ಜೋಡಿಸಬೇಕು. ಪ್ರಾಧಿಕಾರ ಅವರಿಗೆ ಪ್ರಮಾಣಪತ್ರ ನೀಡಲಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೇಶವ ಕಾಮತ್, ಮಾಜಿ ಅಧ್ಯಕ್ಷ ಟಿ. ಪಿ. ರಮೇಶ್, ದ.ಸಂ.ಸ. ಜಿಲ್ಲಾ ಸಂಚಾಲಕ ಹೆಚ್. ಎಲ್. ದಿವಾಕರ್, ಉದ್ಯಮಿ ಚಂದನ್ ಕಾಮತ್ ‘ಮನೆಗೊಂದು ಗ್ರಂಥಾಲಯ’ದ ಜಿಲ್ಲಾ ಜಾಗೃತ ಸಮಿತಿ ಕಾರ್ಯದರ್ಶಿ ರಂಜಿತ್ ಕವಲಪಾರ, ಮುಖಂಡರಾದ ರಾಜರಾಂ, ವಾಸುರೈ, ದಲಿತ ಸಂಘರ್ಷ ಸಮಿತಿಯ ದೀಪಕ್ ಪೊನ್ನಪ್ಪ, ಟಿ.ಪಿ.ರಮೇಶ್ ಅವರ ಪತ್ನಿ ನಿರ್ಮಲಾ ಭಾಗವಹಿಸಿದ್ದರು.