ಸೋಮವಾರಪೇಟೆ, ಜೂ. ೪: ಪಟ್ಟಣದ ಹೃದಯ ಭಾಗದ ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿರುವ ಒನಕೆ ಓಬವ್ವ ವೃತ್ತದ ಕನ್ನಡದ ಧ್ವಜಸ್ತಂಭವನ್ನು ತಕ್ಷಣ ಸರಿಪಡಿಸಬೇಕೆಂದು ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು, ಪ.ಪಂ. ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರಸ್ತುತ ಈ ಕನ್ನಡ ಧ್ವಜಸ್ತಂಭಕ್ಕೆ ಸ್ಥಳೀಯ ವ್ಯಾಪಾರಿಗಳು ಹಗ್ಗ ಕಟ್ಟುವುದು, ಧ್ವಜಸ್ತಂಭಕ್ಕೆ ಒರಗಿಸಿ ಅಂಗಡಿಗಳನ್ನು ಇಟ್ಟು ಧ್ವಜಸ್ತಂಭಕ್ಕೆ ಅವಮಾನ ಮಾಡುತ್ತಿದ್ದಾರೆ. ಕೂಡಲೇ ಪಟ್ಟಣ ಪಂಚಾಯಿತಿಯವರು ಈ ಬಗ್ಗೆ ಕ್ರಮ ವಹಿಸಿ ಧ್ವಜಸ್ತಂಭವನ್ನು ಸರಿಪಡಿಸಬೇಕು. ಕನ್ನಡ ಬಾವುಟವನ್ನು ಹಾರಿಸಿ ಸ್ವಚ್ಛತೆಯನ್ನು ಕಾಪಾಡುವುದರ ಮೂಲಕ ಕನ್ನಡ ಅಭಿಮಾನವನ್ನು ತೋರಿಸಬೇಕು. ಸ್ತಂಭಕ್ಕೆ ಬಣ್ಣವನ್ನು ಬಳಿಯಬೇಕೆಂದು ಪದಾಧಿಕಾರಿಗಳು ಮನವಿ ಮಾಡಿದರು. ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಸಂಘಟನೆಯ ವತಿಯಿಂದ ಪ.ಪಂ. ಮುಭಾಂಗ ಪ್ರತಿಭಟನೆ ಮಾಡಲಾಗುವುದು ಎಂದು ಸಂಘಟನೆಯ ಅಧ್ಯಕ್ಷ ಎ.ವಿ. ಸಂತೋಷ್ ಹೇಳಿದರು. ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಎ.ಬಿ. ಶಿವರಾಮ್, ಸಿ.ಕೆ. ಜಗದೀಶ್, ತಾಲೂಕು ಉಸ್ತುವಾರಿ ಹೆಚ್.ಎ. ನಾಗರಾಜು, ಪದಾಧಿಕಾರಿಗಳಾದ ಹೆಚ್.ಬಿ. ರಾಜಪ್ಪ, ತೇಜಸ್, ಪ್ರವೀಣ್, ಪರಮೇಶ್ ಸೇರಿದಂತೆ ಇತರರು ಇದ್ದರು.