ಮಡಿಕೇರಿ, ಜೂ. ೨: ಜಿಲ್ಲೆಗೆ ಪ್ರವಾಸ ಬಂದಿದ್ದ ಪ್ರವಾಸಿಗರು ಹೊಟೇಲ್ ಮಾಲೀಕರ ಮೇಲೆ ಹಲ್ಲೆ ಮಾಡಿದ್ದು, ಮಹಿಳೆಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಕಾರಿನಲ್ಲಿ ಬಂದ ಪ್ರವಾಸಿಗರು ಅಬ್ಬಿಫಾಲ್ಸ್ ರಸ್ತೆಯ ನಂದಿಮೊಟ್ಟೆ ಬಳಿ ಇರುವ ಹೊಟೇಲ್‌ಗೆ ತೆರಳಿ ಆಹಾರ ಆರ್ಡರ್ ಮಾಡಿದ್ದಾರೆ. ಹೊಟೇಲ್ ಮಾಲೀಕರಾದ ಅಗಸ್ಟಿನ್ ಹಾಗೂ ಆ್ಯಗ್ನೇಸ್ ಅವರುಗಳು ಒಳ ಭಾಗದಲ್ಲಿ ಅಡುಗೆ ತಯಾರಿಸುತ್ತಿದ್ದ ಸಂದರ್ಭ ಪ್ರವಾಸಿಗರ ಪೈಕಿ ಇದ್ದ ನಾಲ್ವರು ಯುವಕರು ಕುರುಕಲು ತಿಂಡಿಗಳನ್ನು ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ತೆಗೆದು ತಿನ್ನುತ್ತಿದ್ದುದನ್ನು ಗಮನಿಸಿದ ಮಾಲೀಕರು ಪ್ರಶ್ನೆ ಮಾಡಿದ್ದಾರೆ. ಕೇಳದೆ ತೆಗೆದುಕೊಳ್ಳಬಾರದೆಂದು ತಾಕೀತು ಮಾಡಿದ ಕಾರಣಕ್ಕಾಗಿ ತಾವು ಆರ್ಡರ್ ಮಾಡಿದ ಆಹಾರ ಬೇಡವೆಂದು, ಹಣ ನೀಡುವುದಿಲ್ಲವೆಂದು ಹೇಳಿ ಹೊರಡಲನುವಾಗಿದ್ದಾರೆ.
ಈ ಸಂದರ್ಭ ಮಾಲೀಕರು ಹಣ ನೀಡುವಂತೆ ಒತ್ತಾಯಿಸಿದಾಗ ಹಲ್ಲೆಗೆ ಮುಂದಾಗಿದ್ದಲ್ಲದೆ ಕಲ್ಲಿನಿಂದ ಹೊಡೆದಿದ್ದು, ಅದು ಆ್ಯಗ್ನೇಸ್ ಅವರ ತಲೆಗೆ ತಾಗಿ ತಲೆ ಹಾಗೂ ಕಿವಿಗೆ ಗಾಯವಾಗಿದೆ. ಕೂಡಲೇ ಮಾಲೀಕರು ೧೧೨ಗೆ ಕರೆ ಮಾಡಿದಾಗ ಪ್ರವಾಸಿಗರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಗಾಯಾಳುಗಳು ಮಹಿಳೆಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.