ಸೋಮವಾರಪೇಟೆ, ಜೂ. ೨: ಇಲ್ಲಿನ ಮಲೆನಾಡ ಸ್ವರ್ಗ ತಂಡದಿAದ ಪ್ರಕೃತಿಯನ್ನು ಕಾಪಾಡೋಣ, ಭವಿಷ್ಯವನ್ನು ಬೆಳಗಿಸೋಣ ಎಂಬ ಘೋಷವಾಕ್ಯದೊಂದಿಗೆ ‘ಸೇವ್ ನೇಚರ್ ಫಾರ್ ದ ಫ್ಯೂಚರ್’ ಹೆಸರಿನಲ್ಲಿ ಪ್ರತಿ ಭಾನುವಾರ ಸ್ವಚ್ಛತಾ ಆಂದೋಲನ ನಡೆಸಲಾಗುತ್ತಿದ್ದು, ಸಾರ್ವಜನಿಕರಲ್ಲಿ ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಜರುಗುತ್ತಿದೆ. ಶಾಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ತಂಡವೊAದು ಮಲೆನಾಡ ಸ್ವರ್ಗ ಎಂಬ ಗುಂಪನ್ನು ರಚಿಸಿಕೊಂಡಿದ್ದು, ಅದರ ಮೂಲಕ ಪ್ರತಿ ಭಾನುವಾರ ತಾಲೂಕಿನ ವಿವಿಧ ಭಾಗಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕ ವಲಯದಲ್ಲಿ ಜಾಗೃತಿ ಮೂಡಿಸುತ್ತಿದೆ.

ಪರಿಸರವನ್ನು ಸ್ವಚ್ಛವಾಗಿಡುವುದು ಕೇವಲ ಕೆಲಸವಲ್ಲ, ಇದು ನಮ್ಮ ಮುಂದಿನ ಪೀಳಿಗೆಗಳಿಗೆ ನೀಡುವ ಉಡುಗೊರೆ. ಪ್ರಕೃತಿಯನ್ನು ಕಾಪಾಡುವುದು ಎಂದರೆ ನಮ್ಮ ಮಣ್ಣು, ನಮ್ಮ ನೀರು, ನಮ್ಮ ಗಾಳಿ, ನಮ್ಮ ಅರಣ್ಯ… ಎಲ್ಲವನ್ನೂ ಸಂರಕ್ಷಿಸುವುದು. ಹೊರಗೆ ಎಸೆಯುವ ಪ್ರತಿಯೊಂದು ಪ್ಲಾಸ್ಟಿಕ್, ನಿರ್ಲಕ್ಷ್ಯವಾಗಿ ಬಿಟ್ಟುಹೋದ ಪ್ರತಿಯೊಂದು ಕಸ… ನೈಸರ್ಗಿಕ ಸೌಂದರ್ಯಕ್ಕೆ ನೋವು. ಅದನ್ನು ತಪ್ಪಿಸುವುದು ನಮ್ಮಿಂದಲೇ ಸಾಧ್ಯ ಎಂಬುದು ಈ ಗುಂಪಿನ ಅಚಲ ನಂಬಿಕೆ. ತಂಡದ ಸದಸ್ಯರಾದ ಬಿನುಗೌಡ, ಧೀರಜ್, ಗಗನ್, ಶಶಾಂಕ್, ಅಕುಲ್, ನಿಕೃತ್, ಸಮೃತ್, ಸಹನ, ಸೌರವಿ, ಬಿಂದು, ಶರ್ವಣ್, ಪ್ರಜ್ವಲ್ ಅವರುಗಳನ್ನು ಒಳಗೊಂಡ ತಂಡ ಈ ವಾರ ಪಟ್ಟಣ ಸಮೀಪದ ಆಲೇಕಟ್ಟೆ ರಸ್ತೆಯಲ್ಲಿ ಶ್ರಮದಾನ ನಡೆಸಿತು.

ನಾವು ಸ್ವಚ್ಛಗೊಳಿಸುವ ಪ್ರತಿಯೊಂದು ಸ್ಥಳವು ನಾಳೆಯ ಮಕ್ಕಳಿಗೆ ಉಳಿಸಿಕೊಳ್ಳಬೇಕಾದ ಒಂಬತ್ತು ರತ್ನಗಳಲ್ಲಿ ಒಂದಾಗಿದೆ. ಪ್ರಕೃತಿಯನ್ನು ಉಳಿಸುವುದು ದೊಡ್ಡ ಮಾತಲ್ಲ; ಆದರೆ ಅದನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ, ಜವಾಬ್ದಾರಿ ನಾವು ಹೊರಬೇಕು ಎಂದು ತಂಡದ ಬಿನುಗೌಡ ಅವರು ಅಭಿಪ್ರಾಯಿಸಿದ್ದಾರೆ.