ಸುಂಟಿಕೊಪ್ಪ, ಮೇ ೩೧: ಸಾಹಿತ್ಯ ಹಾಗೂ ಪುಸ್ತಕಗಳು ಬದುಕನ್ನು ರೂಪಿಸಲು ಸಹಕಾರಿ ಎಂದು ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಪ್ರತಿಪಾದಿಸಿದರು.
ಸುಂಟಿಕೊಪ್ಪದ ಪಂಜೆ ಮಂಗೇಶರಾಯ ವೇದಿಕೆಯಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ೧೭ ನೇ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಬಹುಭಾಷೆಯ ಮಣ್ಣಿನಲ್ಲಿ ಇಂತಹ ಸಮ್ಮೇಳನಗಳು ನಿರಂತರವಾಗಿ ನಡೆಯಬೇಕು. ಭಾರತೀಸುತ, ಕೊಡಗಿನ ಗೌರಮ್ಮ, ಬೂಕರ್ ಪ್ರಶಸ್ತಿ ಪಡೆದ ದೀಪಾಭಾಸ್ತಿ, ಅಬ್ದುಲ್ ರಶೀದ್ ಅವರ ಸಾಹಿತ್ಯ ಸೇವೆ ಸದಾ ಸ್ಮರಣೀಯ ಎಂದ ಅವರು, ಸಾಹಿತ್ಯ ಮತ್ತು ಪುಸ್ತಕಗಳು ಬದುಕುವ ಕಲೆಯನ್ನು ಕಲಿಸುತ್ತವೆ. ಹೀಗಾಗಿಯೇ ಪುಸ್ತಕಗಳು ಪ್ರತೀಯೋರ್ವರ ಜೀವನದಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಸಮ್ಮೇಳನದ ಸರ್ವಾಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ, ಸಂಸ್ಥೆ ನಿಂತ ನೀರಾದಾಗ ಜನರು ಅದರಿಂದ ದೂರವಾಗುತ್ತಾ ಹೋಗುತ್ತಾರೆ.ಹೊಸಪೀಳಿಗೆಯ ಲೇಖಕರನ್ನು ಸಮ್ಮೇಳನಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಇಂದಿನ ಕಾಲಮಾನಕ್ಕೆ ತಕ್ಕಂತೆ ಆಧುನಿಕ ಸಾಮಾಜಿಕ ಜಾಲತಾಣಗಳ ನೆರವನ್ನೂ ಪಡೆಯುವ ಮೂಲಕ ಸಮ್ಮೇಳನಕ್ಕೆ ಹೆಚ್ಚಿನ ಸಾಹಿತ್ಯಾಭಿಮಾನಿಗಳು ಬರುವಂತೆ ಮಾಡುವುದು ಸಾಧ್ಯವಿತ್ತು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಲೇಖಕರು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಕಲಾವಿದರೊಬ್ಬರು ವೇದಿಕೆಯಲ್ಲಿ ಹಾಡಿದರೆ ಅದು ನಾವು ಅವರಿಗೆ ಅವಕಾಶ ಕೊಟ್ಟೆವು ಎಂಬ ಭಾವ ಇರಬಾರದು. ಅವರು ಇಲ್ಲಿ ಹಾಡುವ ಮೂಲಕ ನಮ್ಮ ಗೌರವ ಹೆಚ್ಚಿಸುತ್ತಿದ್ದಾರೆ ಎಂದು ಗೌರವಿಸಬೇಕು. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಸಮ್ಮೇಳನಗಳು ಅಂತಹ ವೇದಿಕೆಯಾಗಬೇಕು ಎಂದು ರಶೀದ್ ಅಭಿಪ್ರಾಯಪಟ್ಟರು.
ತನ್ನ ಹುಟ್ಟೂರಿನಲ್ಲಿ ಆಯೋಜಿಸಲಾಗಿದ್ದ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಸ್ಥಾನ ವಹಿಸಿಕೊಂಡು ತಾನು ಹುಟ್ಟಿ ಬೆಳೆದ ಊರಿನ ಮುಖ್ಯರಸ್ತೆಯಲ್ಲಿಯೇ ಮೆರವಣಿಗೆಯಲ್ಲಿ ಸಾಹಿತ್ಯ ಪ್ರೇಮಿಗಳು, ಜನರ ನಡುವೆ ಸಾಗಿಬಂದದ್ದು ಅತ್ಯಂತ ಸಂತೋಷ ತಂದಿದೆ ಎಂದೂ ರಶೀದ್ ಹೆಮ್ಮೆಯಿಂದ ನುಡಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಅಕಾಡೆಮಿ ವತಿಯಿಂದ ಮನೆಗಳಲ್ಲಿ ಸಾಹಿತ್ಯ ಕೃತಿಗಳ ಸಂಗ್ರಹಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪುಸ್ತಕ ಪತ್ತಾಯ ಎಂಬ ವಿನೂತನ ಯೋಜನೆ ಜಾರಿಗೊಳಿಸಿ ಸಾಹಿತ್ಯ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ ಎಂದರು.
ಪತ್ರಕರ್ತ ಅನಿಲ್ ಹೆಚ್.ಟಿ. ಮಾತನಾಡಿ, ಸರ್ವ ಜನಾಂಗದ ಸೌಹಾರ್ದತೆಗೆೆ ಕೊಡಗಿನಲ್ಲಿ ಹೆಸರುವಾಸಿಯಾಗಿರುವ ಸುಂಟಿಕೊಪ್ಪದವರೇ ಆದ ಅಬ್ದುಲ್ ರಶೀದ್ ಅವರನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿ, ಸಮ್ಮೇಳನದ ಮೌಲ್ಯ ಹೆಚ್ಚಿಸಲಾಗಿದೆ. ಮೈಸೂರು - ಬಸವನಹಳ್ಳಿ ನಡುವಿನ ಚತುಷ್ಪಥ ರಸ್ತೆ ನಿರ್ಮಾಣವಾದ ನಂತರ ಸುಂಟಿಕೊಪ್ಪ ಮತ್ತು ಮಡಿಕೇರಿ ನಗರಗಳು ತಮ್ಮ ಮೂಲ ಸೌಂದರ್ಯ ಕಳೆದುಕೊಳ್ಳುವ ಅಪಾಯವಿದೆ. ಅಭಿವೃದ್ಧಿ ಚಟುವಟಿಕೆಗಳು ಎಂದಿಗೂ ಮೂಲ ಸಂಸ್ಕೃತಿ, ಚಟುವಟಿಕೆಗಳಿಗೆ ಧಕ್ಕೆ ತರುವಂತಾಗಬಾರದು ಎಂದು ಅನಿಲ್ ಹೇಳಿದರು.
ಸಮ್ಮೇಳನದ ಆರ್ಥಿಕ ಸಮಿತಿ ಅಧ್ಯಕ್ಷ ಎ.ಲೋಕೇಶ್ ಕುಮಾರ್ ಮಾತನಾಡಿ, ಅನೇಕ ದಾನಿಗಳ ಕೊಡುಗೆಯಿಂದಾಗಿಯೇ ಸಮ್ಮೇಳನ ಅಭೂತಪೂರ್ವ ರೀತಿಯಲ್ಲಿ ಯಶಸ್ವಿಯಾಗಲು ಸಾಧ್ಯವಾಯಿತು ಎಂದರು.
ವೇದಿಕೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್, ಹೋಬಳಿ ಅಧ್ಯಕ್ಷ ಮತ್ತು ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ.ಎಫ್.ಸಬಾಸ್ಟಿನ್, ಗ್ರಾ.ಪಂ.ಮಾಜಿ ಅಧ್ಯಕ್ಷÀ ಪಿ.ಆರ್. ಸುನಿಲ್‌ಕುಮಾರ್, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳಾದ ವಿ.ಜಿ.ಲೋಕೇಶ್, ಬಿ.ಸಿ. ನಂದೀಶ್‌ಕುಮಾರ್, ಮಧುಮತಿ ಕೆ.ಎಲ್., ಆಸ್ಮ ಪಿ.ಯು., ಹಣಕಾಸು ಸಮಿತಿ ಸಂಚಾಲಕ ಮನು ಅಚ್ಚಮಯ್ಯ, ವೇದಿಕೆ ಸಮಿತಿಯ ಸಂಚಾಲಕರಾದ ಅಬ್ದುಲ್ ನಿಯಾಜ್, ಕೆ.ಎಸ್. ಅನಿಲ್ ಕುಮಾರ್, ಸ್ಮರಣ ಸಂಚಿಕೆ ಸಂಪಾದಕ ಬಿ.ಸಿ.ದಿನೇಶ್, ಸಹ ಸಂಪಾದಕ ವಿ.ಸುಲೈಮಾನ್, ಮೆರವಣಿಗೆ ಸಮಿತಿ ಅಧ್ಯಕ್ಷ ಎಂ.ಎಸ್. ಸುನಿಲ್, ಆಹಾರ ಸಮಿತಿ ಅಧ್ಯಕ್ಷ ಜಿ.ಬಿ.ಹರೀಶ್, ಅಲಂಕಾರ ಮತ್ತು ದ್ವಾರ ಸಮಿತಿ ಅಧ್ಯಕ್ಷ ಹೆಚ್.ಯು.ರಫೀಕ್‌ಖಾನ್ , ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅಜ್ಜಿಕುಟ್ಟಿರ ಗಿರೀಶ್ ಇದ್ದರು. ಉಪನ್ಯಾಸಕಿ ಪ್ರತಿಮಾ ರೈ ಮತ್ತು ಎನ್.ಕೆ.ಮಾಲದೇವಿ ನಿರೂಪಿಸಿ ವಂದಿಸಿದರು.