ಸುಂಟಿಕೊಪ್ಪ, ಮೇ ೩೧: ಕನ್ನಡದ ಭಾಷೆ, ಸಾಹಿತ್ಯದ ಬೆಳವಣಿಗೆಯಲ್ಲಿ ಕನ್ನಡೇತರರು ತೊಡಗಿಸಿಕೊಂಡಾಗ ಕನ್ನಡ ಬಳಕೆ ಹೆಚ್ಚುವುದರೊಂದಿಗೆ ಪ್ರಾಶಸ್ತö್ಯವನ್ನು ಪಡೆಯುತ್ತದೆ ಎಂದು ಶಕ್ತಿ ಪತ್ರಿಕೆ ಸಂಪಾದಕ ಜಿ. ಚಿದ್ವಿಲಾಸ್ ಅಭಿಮತ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ೧೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇಲ್ಲಿನ ಕವಿ ಶಿಷ್ಯ ಪಂಜೆ ಮಂಗೇಶರಾಯರ ವೇದಿಕೆಯಲ್ಲಿ ಎರಡನೇ ದಿನದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕನ್ನಡ ಭಾಷೆ ಮತ್ತು ಸಾಹಿತ್ಯ ವಿಷಯಗಳಲ್ಲಿ ಅನ್ಯಭಾಷಿಕರಿಗೆ ವಿಶೇಷವಾದ ಸ್ಪರ್ಧೆಯನ್ನು ಏರ್ಪಡಿಸಿ ಅವರಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಸೊಬಗು ಮತ್ತು ಸೊಗಡನ್ನು ಪರಿಚಯಿಸಿ ಅವರಲ್ಲಿ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದು ಕರೆ ನೀಡಿದರು.

ಯುವ ಜನತೆಯಲ್ಲಿ ಮತ್ತು ವಿಶೇಷವಾಗಿ ಮಕ್ಕಳಲ್ಲಿ ಕನ್ನಡ ಸಾಹಿತ್ಯ ಮತ್ತು ಭಾಷೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ತಮ್ಮ ಪತ್ರಿಕೆಯಲ್ಲಿ ಪುಟಾಣಿ ಪತ್ರಕರ್ತರು ಎಂಬ ಕಾಲಂ ಒಂದು ದಶಕದಿಂದ ಬರುತ್ತಿದ್ದು, ಮಕ್ಜಳಿಗಾಗಿ ಚಿತ್ರ ಚಿಂತನ, ಹಬ್ಬ ಹರಿದಿನಗಳಲ್ಲಿ ಪುರಾಣ ಮತ್ತು ಐತಿಹಾಸಿಕ ವಿಷಯಗಳ ಕುರಿತು ಸ್ಪರ್ಧೆ ಏರ್ಪಡಿಸುತ್ತಿದ್ದು, ಮಾಧ್ಯಮ ಕೂಡ ಅತ್ಯಂತ ಪ್ರಭಾವ ಮತ್ತು ಪರಿಣಾಮಕಾರಿಯಾಗಿ ಭಾಷೆ ಮತ್ತು ಸಾಹಿತ್ಯದ ವಿಚಾರದಲ್ಲಿ ಕೆಲಸ ಮಾಡಬಹುದೆಂದು ಅವರು ಹೇಳಿದರು.

ಕೊಡಗಿನ ಗೌರಮ್ಮ ಗಟ್ಟಿ ಲೇಖಕಿ : ಸೋಮಣ್ಣ

ಕನ್ನಡ ಕಥಾ ಜಗತ್ತು ಮತ್ತು ಕೊಡಗು ಎಂಬ ವಿಷಯದ ಬಗ್ಗೆ ನಿವೃತ್ತ ಪ್ರಾಂಶುಪಾಲರು ಮತ್ತು ಪತ್ರಕರ್ತ ಡಾ.ಜೆ.ಸೋಮಣ್ಣ ಅವರು ತಮ್ಮ ವಿಷಯ ಮಂಡಿಸಿ, ಕೊಡಗಿನ ಕಥಾ ಜಗತ್ತಿನಲ್ಲಿ ಜೀವಪರ, ಪ್ರಗತಿಪರ ಮಾತ್ರವಲ್ಲದೇ ಬಂಡಾಯಗಾರ್ತಿ ಲೇಖಕಿಯಾಗಿ ಕೊಡಗಿನ ಗೌರಮ್ಮ ಹೊರಹೊಮ್ಮಿದ್ದಾರೆ. ಕೊಡಗಿನ ಗೌರಮ್ಮ ಅವರ ಕತೆಗಳಲ್ಲಿ ಬಾಲ್ಯ ವಿವಾಹ, ವಿಧವಾ ವಿವಾಹ, ಪುನರ್ ವಿವಾಹ ಮೊದಲಾದ ವಿಷಯಗಳ ಬಗ್ಗೆ ಬರೆದಿದ್ದು, ಕೊಡಗಿನ ಚಿತ್ರಣ ಮತ್ತು ಕೊಡಗಿನ ಜೀವನ ಚಿತ್ರಣ ಇಲ್ಲವೆಂದು ವಿಷಾದಿಸಿದರು.

ವಿವಿಧ ಮಾಧ್ಯಮದ ಮೂಲಕ ಸಾಹಿತ್ಯ ತಲುಪಬೇಕು : ಬಾಲಚಂದ್ರ

‘ಸಾಹಿತ್ಯ ಕ್ಷೇತ್ರದತ್ತ ಯುವ ಪೀಳಿಗೆಯನ್ನು ಆಕರ್ಷಿಸಲು ದಾರಿ’ ಎಂಬ ವಿಷಯದ ಕುರಿತು ಮಾತನಾಡಿದ ಲೇಖಕರು ಮತ್ತು ವ್ಯಕ್ತಿತ್ವ ವಿಕಸನ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ತರಬೇತುದಾರ ಆರ್.ಕೆ.ಬಾಲಚಂದ್ರ ಅವರು, ಸಾಹಿತ್ಯದ ನೀತಿ , ಸಾಹಿತ್ಯ ನಿರ್ಮಾಣ ಮತ್ತು ಸಾಹಿತ್ಯವನ್ನು ಇಂದಿನ ಪೀಳಿಗೆಗೆ ತಲುಪಿಸುವ ಕೆಲಸದಲ್ಲಿ ನಾವು ಸೋತಿದ್ದೇವೆ. ಹಳೆಯ ಅಥವಾ ಹೊಸ ಸಾಹಿತ್ಯ ಮತ್ತು ಸಾಹಿತಿ ಬದಲಾಗಿಲ್ಲ. ಆದರೆ ನಾವು ನಮ್ಮ ಮಕ್ಕಳಿಗೆ, ಯುವ ಪೀಳಿಗೆಗೆ ಯಾವ ರೀತಿ ಹೇಳಿಕೊಡುತ್ತಿದ್ದೇವೇ ಅದು ಬದಲಾಗಬೇಕು. ಕತೆ ನಾಟಕಗಳಾಗಿ, ಕವಿತೆ ಸಂಗೀತವಾಗಿ ಮಕ್ಕಳ ಮನಸ್ಸನ್ನು ತಟ್ಟಬೇಕು. ನಮ್ಮ ನಡುವಿನ ಸಾಹಿತಿಗಳು, ಕವಿಗಳು ಸಾಮಾಜಿಕ ಜಾಲತಾಣ, ಡಿಜೀಟಲಿಕರಣದ ವಿವಿಧ ಮಾಧ್ಯಮಗಳ ಮೂಲಕ ಮಕ್ಕಳನ್ನು ತಲುಪಬೇಕು ಎಂದು ಅವರು ಕರೆ ನೀಡಿದರು.

ಕೊಡಗು ಕ್ರೀಡಾ ಜಿಲ್ಲೆಯಾಗಬೇಕು : ಕಾರ್ಯಪ್ಪ

‘ಕೊಡಗು ಕ್ರೀಡೆಯ ತವರೂರು ಆಗಬೇಕಾದ ಅನುಕೂಲಗಳು’ ವಿಷಯದ ಮೇಲೆ ಮಾತನಾಡಿದ ಕ್ರೀಡಾ ಬರಹಗಾರ ಚೆಪ್ಪುಡಿರ ಕಾರ್ಯಪ್ಪ ಅವರು, ಪುಟ್ಟ ಜಿಲ್ಲೆ ಕೊಡಗಿನಲ್ಲಿ ೧೯ ಮಂದಿ ಒಲಂಪಿಕ್ ಆಟಗಾರರು, ೨ ವಿಶ್ವಕಪ್ ಆಟಗಾರರು ಇನ್ನೂರಕ್ಕೂ ಹೆಚ್ಚು ಹಾಕಿ ಆಟಗಾರರನ್ನು ಕೊಡಗು ನೀಡಿದೆ. ಕ್ರೀಡೆ ಈ ಜಿಲ್ಲೆಯ ಜನರ ರಕ್ತದಲ್ಲಿದೆ. ಕ್ರೀಡೆಗೆ ಜಾತಿ ಇಲ್ಲ. ಕೊಡಗಿನ ಕ್ರೀಡಾ ಶಾಲೆಗಳಲ್ಲಿ, ವಸತಿ ಗೃಹಗಳಲ್ಲಿ ಕ್ರೀಡಾಪಟುಗಳಿಗೆ ಹೆಚ್ಚಿನ ಅವಕಾಶವಾಗಬೇಕು. ಕೊಡಗನ್ನು ಕ್ರೀಡಾ ಜಿಲ್ಲೆಯೆಂದು ಘೋಷಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಜನಪ್ರತಿನಿಧಿಗಳ ಮೂಲಕ ನಾವು ಹಕ್ಕೊತ್ತಾಯ ಮಂಡಿಸಬೇಕು ಎಂದು ಕರೆ ನೀಡಿದರು.

ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೋ. ಕೋಡಿರ ಲೋಕೇಶ್ ಮೊಣ್ಣಪ್ಪ ಮಾತನಾಡಿ, ೧೯೩೫ರಲ್ಲಿಯೇ ಡಿವಿಜಿ ಅವರು ಕೊಡಗಿನ ಬೆಡಗು ಎಂಬ ಕವನದ ಮೂಲಕ ಕೊಡಗನ್ನು ವಿಶ್ವಕ್ಕೆ ಪರಿಚಯಿಸಿದ್ದಾರೆ. ಕೊಡಗಿನ ಹಿನ್ನೆಲೆ ಡಿಜಿಟಲೀಕರಣವಾಗಿ ಜನ ಸಾಮಾನ್ಯರ ಕೈಗೆ ಸಿಗುವಂತಾಗಬೇಕು ಎಂದು ಅವರು ಆಶಿಸಿದರು. ನಾವೆಲ್ಲರೂ ಐಷಾರಾಮಿ ಮನೆಗಳು, ಬಂಗಲೆಗಳನ್ನು ನಿರ್ಮಿಸುತ್ತೇವೆ. ಆದರೆ ಒಂದು ಕೋಣೆಯಲ್ಲಿ ಪುಟ್ಟ ಗ್ರಂಥಾಲಯವನ್ನು ನಿರ್ಮಿಸಿಕೊಳ್ಳಲು ಮರೆಯುತ್ತೇವೆ ಎಂದು ಅವರು ವಿಷಾದಿಸಿದರು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷÀ ಲೋಕನಾಥ್ ಅಮೆಚೂರು, ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಸಮ್ಮೇಳನದ ಸರ್ವಾಧ್ಯಕ್ಷ ಅಬ್ದುಲ್ ರಶೀದ್ ಇದ್ದರು. ಟಿ.ಎಸ್. ಸುಮಾ ಸ್ವಾಗತಿಸಿ, ಶ್ವೇತ ರವೀಂದ್ರ ಕಾರ್ಯಕ್ರಮ ನಿರ್ವಹಿಸಿದರು. ಎ.ವಿ.ಮಂಜುನಾಥ ವಂದಿಸಿದರು.