ಅಹ್ಮದಾಬಾದ್, ಮೇ ೩೧: ವಿಶ್ವದಲ್ಲೇ ಅತಿದೊಡ್ಡ ಕ್ರಿಕೆಟ್ ಹಬ್ಬ ಐ.ಪಿ.ಎಲ್.ನಲ್ಲಿ ೧೭ ವರ್ಷಗಳ ಕಾಲ ಟ್ರೋಫಿ ವಂಚಿತವಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್.ಸಿ.ಬಿ) ಪುರುಷರ ತಂಡ ಇದೀಗ ೧೮, ೧೯ ಆವೃತ್ತಿಗಳಲ್ಲಿ ಸತತವಾಗಿ ಗೆಲ್ಲುವ ಮೂಲಕ ೨ನೇ ಐ.ಪಿ.ಎಲ್ ಗೆದ್ದು ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದೆ.

ಇಂದು ಗುಜರಾತ್‌ನ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ೧೯ನೇ ಆವೃತ್ತಿಯ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ರಜತ್ ಪಟೆದಾರ್ ನಾಯಕತ್ವದ ಆರ್.ಸಿ.ಬಿ, ಎದುರಾಳಿ ಗುಜರಾತ್ ಟೈಟನ್ಸ್ ಅನ್ನು ೨೦ ಓವರ್‌ಗಳಲ್ಲಿ ೧೫೫ ರನ್ ಗಳಿಗೆ ಕಟ್ಟಿ ಹಾಕಿತು. ಆರ್.ಸಿ.ಬಿ ಪರ ರಸಿಕ್ ೩, ಭುವನೇಶ್ವರ್ ೨, ಹೇಜಲ್ ವುಡ್ ೨, ಕೃನಾಲ್ ೧ ವಿಕೆಟ್ ಪಡೆದರು.

ಈ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ೧೮ ಓವರ್‌ಗಳಲ್ಲಿ ೫ ವಿಕೆಟ್ ಕಳೆದುಕೊಂಡು ೧೬೧ ರನ್ ಗಳಿಸಿ ಜಯ ಸಾಧಿಸಿತು. ತಂಡದ ಪರ ವಿರಾಟ್ ಕೊಯ್ಲಿ ಭರ್ಜರಿ ೭೫ ರನ್ ಗಳಿಸಿ ಜಯಕ್ಕೆ ಕಾರಣರಾದರು.

ಕಳೆದ ಆವೃತ್ತಿಯಲ್ಲಿ ಪಂಜಾಬ್ ವಿರುದ್ಧ ಅಂತಿಮ ಪಂದ್ಯ ಗೆದ್ದು ಚೊಚ್ಚಲ ಟ್ರೋಫಿ ಪಡೆದಿದ್ದ ಆರ್.ಸಿ.ಬಿ, ಇದೀಗ ಮತ್ತೊಂದು ಟ್ರೋಫಿ ಪಡೆದು ಚಾಂಪಿಯನ್ ಸ್ಥಾನವನ್ನು ಉಳಿಸಿಕೊಂಡಿದೆ.