ಮಡಿಕೇರಿ, ಮೇ ೩೧: ನೇಣು ಬಿಗಿದುಕೊಂಡು ಕೊಡಗು ಜಿಲ್ಲೆ ಮೂಲದ ಉಪತಹಶೀಲ್ದಾರ್ ಸಾವಿಗೆ ಶರಣಾದ ಘಟನೆ ಹಾಸನದ ಲಾಡ್ಜ್ವೊಂದರಲ್ಲಿ ನಡೆದಿದೆ.

ಮೂಲತಃ ಜಿಲ್ಲೆಯ ತೂಚಮಕೇರಿ ನಿವಾಸಿ, ಪ್ರಸ್ತುತ ಮೈಸೂರು ಜಿಲ್ಲೆ ಸಾಲಿಗ್ರಾಮದಲ್ಲಿ ಉಪತಹಶೀಲ್ದಾರ್ ಆಗಿದ್ದ ಕರ್ತಮಾಡ ತಿಮ್ಮಯ್ಯ (೫೨) ಎಂಬವರು ಮೃತ ದುರ್ದೈವಿ. ಶನಿವಾರ ಈ ದುರ್ಘಟನೆ ಸಂಭವಿಸಿದ್ದು, ಸಾವಿಗೆ ಕಾರಣ ತಿಳಿದು ಬಂದಿಲ್ಲ. ಕಳೆದ ಮೂರು ವರ್ಷಗಳ ಹಿಂದೆ ಹಾಸನದಲ್ಲಿ ಶಿರಸ್ತೇದಾರರಾಗಿದ್ದ ತಿಮ್ಮಯ್ಯ ಅವರ ಬಳಿಕ ಬಡ್ತಿ ಪಡೆದು ಸಾಲಿಗ್ರಾಮದಲ್ಲಿ ಉಪತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಿಮ್ಮಯ್ಯ ಅವರ ಪತ್ನಿ ಹಾಗೂ ಮಕ್ಕಳು ಹಾಸನ ನಗರದ ಚನ್ನಪಟ್ಟಣದ ದ್ಯಾವಮ್ಮ ಬಡಾವಣೆಯಲ್ಲಿ ವಾಸವಿದ್ದರು. ಶನಿವಾರ ಹಾಸನಕ್ಕೆ ಬಂದ ತಿಮ್ಮಯ್ಯ ನಗರದ ಬಿ.ಎಂ. ರಸ್ತೆಯಲ್ಲಿರುವ ಲಾಡ್ಜ್ವೊಂದಕ್ಕೆ ತೆರಳಿ ರೂಂ ಪಡೆದು ಅಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೂಂನಲ್ಲಿ ೪ ಪುಟಗಳ ಡೆತ್‌ನೋಟ್ ಪತ್ತೆಯಾಗಿದ್ದು, ತನ್ನ ಪತ್ನಿ ಹಾಗೂ ಮಕ್ಕಳ ಕುರಿತಾಗಿ ಉಲ್ಲೇಖಿಸಿ ನಿಮಗೆ ಸಮಯ ನೀಡಲಾಗಲಿಲ್ಲ. ಮುಂದಿನ ಜನ್ಮದಲ್ಲಿ ನಿಮ್ಮೊಂದಿಗೆ ಬದುಕಬೇಕು, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಹೀಗೆ ಕುಟುಂಬದ ಕುರಿತು ಬರೆದಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ವಗ್ರಾಮ ತೂಚಮಕೇರಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.