ಸಿದ್ದಾಪುರ, ಮೇ ೩೦: ಅತ್ತಿಮಂಗಲ-ಹೊಸ್ಕೇರಿ ರಸ್ತೆಯಲ್ಲಿ ಕಾರು ಚಾಲಕನ ಮೇಲೆ ಕಾಡಾನೆ ದಾಳಿಗೆ ಯತ್ನಿಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹಾಕತ್ತೂರು ಗ್ರಾಮದ ನಿವಾಸಿ ಸಮದ್ ಎಂಬವರು ಗುರುವಾರ ರಾತ್ರಿ ಸಿದ್ದಾಪುರದಿಂದ ಮರಗೋಡು ಮಾರ್ಗವಾಗಿ ತೆರಳುತ್ತಿದ್ದರು. ಅತ್ತಿಮಂಗಲ ರಬ್ಬರ್ ತೋಟದ ಬಳಿಯಲ್ಲಿ ಎರಡು ಸಲಗ ರಸ್ತೆಯ ಬದಿಯಲ್ಲಿ ನಿಂತಿದೆ. ಈ ವೇಳೆ ಸಮದ್ ಕಾಡಾನೆಗಳು ರಸ್ತೆಯಿಂದ ತೋಟಕ್ಕೆ ಹೋದ ಬಳಿಕ ತೆರಳಲು ನಿರ್ಧರಿಸಿದರು. ಕೆಲಕಾಲ ಕಾದಿದ್ದು, ಆನೆಗಳು ರಸ್ತೆಯಿಂದ ಕದಲದೇ ಅಲ್ಲೇ ನಿಂತಿದ್ದು, ಸ್ವಲ್ಪ ಸಮಯದ ಬಳಿಕ ಕಾರನ್ನು ಚಲಾಯಿಸಿದ್ದಾರೆ. ಆನೆಗಳ ಬಳಿ ತಲುಪುವ ವೇಳೆ ಸಲಗವೊಂದು ಕಾರಿನ ಮೇಲೆ ದಾಳಿಗೆ ಮುಂದಾಗಿದೆ. ಸಮದ್ ವೇಗವಾಗಿ ಕಾರು ಚಲಾಯಿಸಿದ್ದು, ದಾಳಿಯಿಂದ ಪಾರಾಗಿದ್ದಾರೆ. ಅತ್ತಿಮಂಗಲ, ಹೊಸ್ಕೇರಿ ಭಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ರಾತ್ರಿ ವೇಳೆ ಸಂಚರಿಸಲು ಭಯಪಡುವಂತಾಗಿದೆ. ರಸ್ತೆ ಬದಿಯಲ್ಲೇ ಕಾಡಾನೆಗಳು ನಿಲ್ಲುತ್ತಿದ್ದು, ದ್ವಿಚಕ್ರ ಸವಾರರು ಸಂಚರಿಸುವುದು ಅಸಾಧ್ಯವಾಗಿದೆ. ಮತ್ತೊಂದೆಡೆ ಸಮೀಪದ ಕಾಟಿಬಾಣೆ, ಸಂಪಿಗೆಕೊಲ್ಲಿ ಸೇರಿದಂತೆ ಸುತ್ತಮುತ್ತಲ ಕಾಫಿತೋಟಗಳಲ್ಲಿ ಕಾಡಾನೆ ಹಿಂಡು ದಾಂಧÀಲೆ ನಡೆಸುತ್ತಿದ್ದು, ಕಾಫಿ, ಅಡಿಕೆ ಗಿಡಗಳನ್ನು ನಾಶಮಾಡುತ್ತಿದೆ. ತೋಟಗಳಲ್ಲಿ ಕಾಡಾನೆಗಳು ಬೀಡುಬಿಡುತ್ತಿದ್ದು, ಕಾರ್ಮಿಕರು ಕೂಡ ಭಯದಿಂದ ಕೆಲಸ ನಿರ್ವಹಿಸುವಂತಾಗಿದೆ. ಅರಣ್ಯ ಇಲಾಖೆ ಕಾಡಾನೆಗಳನ್ನು ಕಾರ್ಯಾಚರಣೆ ನಡೆಸಿ, ಬರಡಿ, ವಾಲ್ನೂರು ಮೂಲಕ ದುಬಾರೆ ಅರಣ್ಯಕ್ಕೆ ಅಟ್ಟಿದರೂ, ಕೆಲವೇ ದಿನಗಳಲ್ಲಿ ಕಾಡಾನೆಗಳು ಮರಳಿ ತೋಟಗಳಿಗೆ ಲಗ್ಗೆ ಇಡುತ್ತಿವೆ. ಕಾಡಾನೆ ಹಾವಳಿಯಿಂದ ಗ್ರಾಮಸ್ಥರು ಕಂಗಾಲಾಗಿದ್ದು, ಶಾಶ್ವತವಾಗಿ ಕಾಡಾನೆಗಳನ್ನು ಕಾಡಿಗೆ ಅಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.