ಕಣಿವೆ, ಮೇ ೩೦: ಇದೀಗ ಸುರಿಯುತ್ತಿರುವ ರೋಹಿಣಿ ಮಳೆ ಕುಶಾಲನಗರ ತಾಲೂಕು ವ್ಯಾಪ್ತಿಯ ಶುಂಠಿ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ವಿಶೇಷವಾಗಿ ಶುಂಠಿ ಕೃಷಿಯನ್ನು ಕೈಗೊಂಡಿರುವ ಬೆಳೆಗಾರರ ಸಂತಸ ಇಮ್ಮಡಿಗೊಂಡಿದೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ಅಪಾರ ಪ್ರಮಾಣದ ಸೂರ್ಯನ ದಾಳಿಗೆ ತತ್ತರಿಸಿ ಬರಡಾಗಿದ್ದ ಭೂಮಿ ತಾಯಿಗೆ ಸಾಂತ್ವನದ ರೂಪದಲ್ಲಿ ಅವತರಿಸಿದ ಕೃತಿಕಾ ಹಾಗೂ ರೋಹಿಣಿ ಮಳೆಗಳು ಭೂಮಿತಾಯಿಗೆ ಒಂದಷ್ಟು ತಂಪು ನೀಡಿದವು.

ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಎಲ್ಲೆಲ್ಲೂ ಕೃಷಿಕರು ಕೈಗೊಂಡ ಶುಂಠಿ, ಜೋಳ, ಅಡಿಕೆ ಮೊದಲಾದ ಬೆಳೆಗಳಿಗೆ ಈ ರೋಹಿಣಿ ರಾಮಬಾಣವಾಗಿದೆ.

ಕಳೆದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಧರೆಯನ್ನು ಸುಟ್ಟ ಬಿಸಿಲಿನ ಪರಿಣಾಮ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕೊರತೆ ಉಂಟಾಗಿತ್ತು.

ಕೆಲವು ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕುಸಿತ ಕಂಡಿತ್ತು. ಇದೀಗ ಕಳೆದ ಮೇ ಮೊದಲ ವಾರದಿಂದ ಆಗಿಂದಾಗ್ಗೆ ಸುರಿದ ಕೃತಿಕಾ ಹಾಗೂ ರೋಹಿಣಿ ಮಳೆಗಳು ಕೃಷಿಕರ ಬೆಳೆಗಳನ್ನು ಹಸನು ಮಾಡಿವೆ.

ಹದ ಮಳೆಯಾಗುತ್ತಿದ್ದಂತೆ ಈಗಾಗಲೇ ಮೂರು ತಿಂಗಳ ಅವಧಿ ತುಂಬಿದ ಶುಂಠಿ ಬೆಳೆಯಲ್ಲಿ ರೋಗ ಬಾಧೆ ಬಾಧಿಸುತ್ತಿರುವ ಬಗ್ಗೆ ಕಂಡುಬರುತ್ತಿದೆ.

- ಮೂರ್ತಿ