ಕುಶಾಲನಗರ, ಮೇ ೩೦: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕುಶಾಲನಗರ ತಾಲೂಕು ಘಟಕದ ಆಶ್ರಯದಲ್ಲಿ ಆರನೇ ವರ್ಷದ ಬಸವ ಜಯಂತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಬೈಚನಹಳ್ಳಿ ಶ್ರೀ ಮಾರಿಯಮ್ಮ ದೇವಾಲಯದಿಂದ ಮುಖ್ಯರಸ್ತೆ ಮೂಲಕ ಕಾರ್ಯಕ್ರಮ ನಡೆಯುವ ಸಭಾಂಗಣ ತನಕ ಅದ್ದೂರಿ ಮೆರವಣಿಗೆ ನಡೆಯಿತು.
ತೊರೆನೂರು ವಿರಕ್ತ ಮಠಾಧೀಶರಾದ ಶ್ರೀ ಮಲ್ಲೇಶ ಸ್ವಾಮಿಗಳು ಮೆರವಣಿಗೆಗೆ ಚಾಲನೆ ನೀಡಿದರು.
ವೀರಾಜಪೇಟೆ ಅರೆಮೇರಿ ಕಳಂಕೇರಿ ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಮತ್ತು ಶನಿವಾರಸಂತೆಯ ಮಠಾಧೀಶರಾದ ಶ್ರೀ ಇಮ್ಮಡಿ ಶಿವಲಿಂಗ ಸ್ವಾಮೀಜಿಗಳ ಹಾಗೂ ಮೈಸೂರು ಬಸವಜ್ಞಾನ ಮಂದಿರದ ಪೀಠಾಧ್ಯಕ್ಷರಾದ ಮಾತೆ ಬಸವಾಂಜಲಿ ದೇವಿ ಅವರುಗಳ ದಿವ್ಯ ಸಾನಿಧ್ಯದಲ್ಲಿ ಅಲಂಕೃತ ರಥದಲ್ಲಿ ಬಸವೇಶ್ವರ ಮೆರವಣಿಗೆ ನಡೆಯಿತು. ನಂತರ ಕುಶಾಲನಗರ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಹೆಚ್.ಎಂ. ಮಧುಸೂದನ್ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರಗಿತು.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ವಿ. ಶಿವಪ್ಪ ಪೊಲೀಸ್ ಉಪ ಅಧೀಕ್ಷಕ ಪಿ. ಚಂದ್ರಶೇಖರ್ ವಿವಿಧ ಮಠಾಧೀಶರುಗಳು, ವೀರಶೈವ ಮಹಾಸಭಾ ಜಿಲ್ಲಾ ತಾಲೂಕು ಘಟಕದ ಪ್ರಮುಖರು ಪಾಲ್ಗೊಂಡಿದ್ದರು.
ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಸಂಘಟನಾ ಕಾರ್ಯದರ್ಶಿ ಎಸ್ ಧರ್ಮೇಂದ್ರ, ಬಿ ಬಿ ಲೋಕೇಶ್, ಷಣ್ಮುಖ, ತಾಲೂಕು ಯುವ ಘಟಕದ ಪದಾಧಿಕಾರಿಗಳು ಮತ್ತು ಮಹಿಳಾ ಘಟಕದ ಪ್ರಮುಖರು ಇದ್ದರು.