ಮಡಿಕೇರಿ, ಮೇ ೩೦: ತಾ.೨೬ ರಂದು ಕೇರಳಕ್ಕೆ ಕಾಲಿಡಬೇಕಿದ್ದ ಮುಂಗಾರು ಆಗಮನ ವಿಳಂಬವಾಗಿದ್ದು, ಪ್ರಸ್ತುತ ವರ್ಷ ‘ಎಲ್-ನಿನೋ’ ಪ್ರಕ್ರಿಯೆಯಿಂದಾಗಿ ದೇಶದಾದ್ಯಂತ ಮುಂಗಾರು ಪ್ರಮಾಣ ಕಡಿಮೆಯಾಗುವ ಆತಂಕ ಎದುರಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಪ್ರಕಟಣೆ ತಿಳಿಸಿದೆ.
ಮುಂಗಾರು ವಿಳಂಬಕ್ಕೆ ಹಲವಾರು ಕಾರಣಗಳಿವೆ. ಸದ್ಯದ ಮಟ್ಟಿಗೆ ಗಾಳಿಯ ಚಲನವಲನ ಮಾದರಿಯು ಮುಂಗಾರು ಆಗಮನಕ್ಕೆ ಪೂರಕವಾಗಿಲ್ಲ. ಭೂ-ಪದರದ ಮೇಲಿಂದ ಹಾಗೂ ಸಮುದ್ರದಿಂದ ಮೇಲೇರುವ ಶಾಖವು ಕೂಡ ನಿರ್ದಿಷ್ಟ ಮಟ್ಟದಲ್ಲಿ ದಾಖಲಾಗದ ಕಾರಣ ಮುಂಗಾರು ವಿಳಂಬವಾಗಿದೆ. ಪಶ್ಚಿಮ ದಿಕ್ಕಿನಿಂದ ಬರುವ ಗಾಳಿಯು ೪ ಕಿ.ಮೀ ಎತ್ತರವನ್ನು ತಲುಪಬೇಕು, ಆದರೆ ಪ್ರಸ್ತುತ, ಅವು ಸುಮಾರು ೧.೫ ಕಿ.ಮೀ ನಷ್ಟು ಎತ್ತರದಲ್ಲಿದ್ದು ಮುಂಗಾರು ತಡವಾಗಿದೆ. ದೀರ್ಘಕಾಲದ ಸರಾಸರಿ ಪ್ರಕಾರ ಜೂನ್.೧ ರಂದು ಮುಂಗಾರು ಆಗಮನ ಆಗಬೇಕಿದ್ದು, ಅದು ಕೂಡ ಈ ವರ್ಷ ಸಾಧ್ಯವಿಲ್ಲ, ದೀರ್ಘಕಾಲದ ಸರಾಸರಿಯ ಶೇ.೯೦ ರಷ್ಟು ಮಾತ್ರ ಈ ಬಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಉಸ್ತುವಾರಿ ನಿರ್ದೇಶಕ ಎನ್. ಪುವಿಯರಸನ್ ಹೇಳಿದ್ದಾರೆ. ಪ್ರಸ್ತುತ ಕೇರಳದಲ್ಲಿ ಮಳೆಯಾಗುತ್ತಿದೆ, ಆದರೆ ಇದು ಪೂರ್ವ ಮುಂಗಾರು ಮಳೆಯಾಗಿದೆ ಎಂದು ಕೂಡ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ನೈಋತ್ಯ ಮುಂಗಾರು ಪ್ರಸ್ತುತ ಅಂಡಮಾನ್ ನಿಕೋಬಾರ್ ದ್ವೀಪಗಳು, ಬಂಗಾಳಕೊಲ್ಲಿ, ಅರೇಬಿಯನ್ ಸಮುದ್ರ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಆವರಿಸಿದೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ. ಇದು ಇನ್ನೂ ಭಾರತದ ಮುಖ್ಯ ಭೂಭಾಗವನ್ನು ತಲುಪಿಲ್ಲ. ಮುಖ್ಯ ಭೂಭಾಗಕ್ಕೆ ಅದರ ಆಗಮನ ಸಮಯ ಪ್ರಸ್ತುತ ಹೇಳಲು ಅಸಾಧ್ಯ ಎಂದಿದ್ದಾರೆ.
ಎಲ್-ನಿನೋ ಪರಿಣಾಮ
ಈ ವರ್ಷ ‘ಎಲ್ ನಿನೋ’ ನೈಸರ್ಗಿಕ ಹವಾಮಾನ ಪರಿಣಾಮದಿಂದಾಗಿ ಮುಂಗಾರು ದುರ್ಬಲವಾಗಿರುತ್ತದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
ಎಲ್-ನಿನೋ ಪ್ರಕ್ರಿಯೆ ಇಲ್ಲದಿದ್ದಲ್ಲಿ, ಬೇಸಿಗೆ ಸಂದರ್ಭ ಪೆಸಿಫಿಕ್ ಮಹಾಸಾಗರದಲ್ಲಿ ಗಾಳಿಯು ಪೂರ್ವದಿಂದ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಪಶ್ಚಿಮಕ್ಕೆ ರಭಸದಿಂದ ಚಲಿಸುತ್ತದೆ. ಈ ಸಂದರ್ಭ ಸಮುದ್ರದ ಬೇಸಿಗೆಯ ಬಿಸಿ ನೀರು, ಗಾಳಿಯ ರಭಸಕ್ಕೆ ಪಶ್ಚಿಮ ದಿಕ್ಕಿನಲ್ಲಿ ಸೇರಿಕೊಳ್ಳುತ್ತದೆ. ಈ ಮೂಲಕ ಅಲ್ಲಿನ ವಾತಾವರಣವನ್ನು ಇನ್ನಷ್ಟು ಬಿಸಿಯಾಗಿಸುತ್ತದೆ. ಈ ಮೂಲಕ ಒತ್ತಡ ಕುಸಿದು ಪಶ್ಚಿಮದಲ್ಲಿ ವರ್ಷಧಾರೆಯಾಗುತ್ತದೆ. ಪೆಸಿಫಿಕ್ ಸಾಗರದ ಪಶ್ಚಿಮದಲ್ಲಿನ ಆಸ್ಟೆçÃಲಿಯಾ ಹಾಗೂ ಭಾರತ ಸೇರಿದಂತೆ ಏಷ್ಯಾ ಖಂಡದ ಇತರ ದೇಶಗಳಲ್ಲಿ ಸಾಧಾರಣವಾಗಿ ಮಳೆಯಾಗುತ್ತದೆ. ಸಾಗರದ ಪೂರ್ವದಲ್ಲಿನ ಉತ್ತರ-ದಕ್ಷಿಣ ಅಮೇರಿಕಾದಲ್ಲಿ ಮಳೆ ವಿರಳವಾಗಲಿದೆ.
‘ಎಲ್ ನಿನೋ’ ಸಂದರ್ಭ ಪೆಸಿಫಿಕ್ ಸಾಗರದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಬರುವ ಗಾಳಿಯ ರಭಸ ನೈಸರ್ಗಿಕವಾಗಿ ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ ಸಾಗರದಲ್ಲಿನ ಬಿಸಿ ನೀರು ಸಮವಾಗಿ ಸಾಗರದಾದ್ಯಂತ ಹರಡಿರುವುದರಿಂದ ಸಾಗರದಲ್ಲಿಯೇ ಒತ್ತಡ ಕಡಿಮೆಯಾಗಿ ಅಲ್ಲಿಯೇ ಹೆಚ್ಚು ಮಳೆ ಸಂಭವಿಸುತ್ತದೆ. ಸಾಗರದ ಪಶ್ಚಿಮದಲ್ಲಿನ ಆಸ್ಟೆçÃಲಿಯಾ ಹಾಗೂ ಭಾರತ ಸೇರಿದಂತೆ ಏಷ್ಯಾದ ಇತರ ದೇಶಗಳಲ್ಲಿ ಒತ್ತಡ ಇಳಿತ ಆಗದಿರುವುದರಿಂದ ಮುಂಗಾರು ದುರ್ಬಲವಾಗಲಿದೆ. ಅಮೇರಿಕಾದ ಕೆಲವೆಡೆ ಈ ಸಂದರ್ಭ ಹೆಚ್ಚು ಮಳೆ ಸಾಧ್ಯತೆ ಇದೆ.