ಮಡಿಕೇರಿ, ಮೇ ೨೯: ದುಡಿಯುವ ವಸತಿರಹಿತ ಬಡ ಜನರಿಗೆ ನಿವೇಶನ ಒದಗಿಸುವಂತೆ ಆಗ್ರಹಿಸಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಕೊಡಗು ಜಿಲ್ಲಾ ಸಮಿತಿ ಹಾಗೂ ಬಹುಜನ ಕಾರ್ಮಿಕ ಸಂಘದ ವತಿಯಿಂದ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಅಜ್ಜಮಾಡ ದೇವಯ್ಯ ವೃತ್ತ ಬಳಿಯಿಂದ ಆರಂಭಗೊAಡ ಮೆರವಣಿಗೆ ಮಂಗೇರಿರ ಮುತ್ತಣ್ಣ ವೃತ್ತಕ್ಕಾಗಿ ಜಿಲ್ಲಾಡಳಿತ ಭವನ ತಲುಪಿತು. ಬಡವರ ಗೋಳು ಕೇಳದ ಸರ್ಕಾರಕ್ಕೆ ಧಿಕ್ಕಾರ, ಬಡವರ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಸರ್ಕಾರಕ್ಕೆ ಧಿಕ್ಕಾರ, ಯಾರೇ ಬರಲಿ ಒಗ್ಗಟ್ಟಿರಲಿ ಇಂಬಿತ್ಯಾದಿ ಭಿತ್ತಿಪತ್ರಗಳನ್ನು ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ವಿವಿಧೆಡೆಗಳಿಂದ ಸುಮಾರು ೬೦೦ಕ್ಕೂ ಹೆಚ್ಚು ನಿವೇಶನ ರಹಿತರು ಪ್ರತಿಭಟನೆಯಲ್ಲಿ ಭಾಗಿಯಾಗಿ ಹಕ್ಕೊತ್ತಾಯ ಮಂಡಿಸಿದರು.
ಈ ವೇಳೆ ಮಾತನಾಡಿದ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಕೊಡಗಿನಲ್ಲಿ ೬೦ ಸಾವಿರಕ್ಕೂ ಹೆಚ್ಚು ನಿವೇಶನ ರಹಿತ ಕೂಲಿ ಕಾರ್ಮಿಕ ಕುಟುಂಬಗಳಿದ್ದು, ಇವರಿಗೆ ಪ್ರತೀ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ನಿರ್ಮಾಣಕ್ಕೆ ತಲಾ ೫ ಸೆಂಟ್‌ನAತೆ ಒಟ್ಟು ೫೦ ಎಕರೆ ಜಾಗ ಕಾಯ್ದಿರಿಸಬೇಕು. ಜಿಲ್ಲೆಯ ವಿವಿಧೆಡೆ ಪ್ಲಾಸ್ಟಿಕ್ ಜೋಪಡಿಗಳಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳಿಗೆ ಜಿಲ್ಲಾಧಿಕಾರಿ ಹಾಗೂ ಶಾಸಕರು ಕೂಡಲೇ ಮೂಲಭೂತ ಸೌಕರ್ಯ ಒದಗಿಸಬೇಕು. ಭೂಗುತ್ತಿಗೆ ಕಾಯ್ದೆಯನ್ನು ರದ್ದುಗೊಳಿಸಿ, ಭೂಹೀನ ಬಡವರಿಗೆ ಕೃಷಿ ಭೂಮಿ ವಿತರಿಸಬೇಕು. ಬಹುತೇಕ ಕೂಲಿ ಕಾರ್ಮಿಕರು ಲೈನ್‌ಮನೆಗಳಲ್ಲಿ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ. ಅಂತಹವರನ್ನು ಲೈನ್‌ಮನೆಗಳಿಂದ ಮುಕ್ತಗೊಳಿಸಿ ವಸತಿ ವ್ಯವಸ್ಥೆ ಕಲ್ಪಿಸಬೇಕು. ಒತ್ತುವರಿಯಾಗಿರುವ ನೂರಾರು ಎಕರೆ ಭೂಮಿಯನ್ನು ಸರ್ಕಾರ ವಶಕ್ಕೆ ಪಡೆದು ಅರ್ಹರಿಗೆ ವಿತರಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಎನ್.ಮೂರ್ತಿ, ಮುಖಂಡರಾದ ಬಸವರಾಜು, ಕೆ.ಮೊಣ್ಣಪ್ಪ, ವೆಂಕಟಗಿರಿ ಮತ್ತಿತರರು ಇದ್ದರು.