ಮಡಿಕೇರಿ, ಮೇ ೨೭: ಪೊನ್ನಂಪೇಟೆ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಮತ್ತು ಕನ್ನಡ ಉಪನ್ಯಾಸಕರಾದ ಟಿ.ಎಸ್ ಗೋಪಾಲ್ ಅವರನ್ನು ಆಯ್ಕೆ ಮಾಡಲಾಗಿದೆ.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಅವರ ನೇತೃತ್ವದಲ್ಲಿ ನಡೆದ ಪೊನ್ನಂಪೇಟೆ ತಾಲೂಕು ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಪೊನ್ನಂಪೇಟೆ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವು ಹುದಿಕೇರಿಯ ಜನತಾ ಹೈಸ್ಕೂಲ್ ಮೈದಾನದಲಿ ಜೂನ್ ೧ ರಂದು ನಡೆಯಲಿದೆ.

ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಟಿ.ಎಸ್. ಗೋಪಾಲ್ ಕನ್ನಡ ಬೋಧಕರಾಗಿದ್ದು, ನೂರಕ್ಕೂ ಹೆಚ್ಚು ವೈವಿಧ್ಯಮಯ ಕೃತಿಗಳನ್ನು ಬರೆದಿದ್ದಾರೆ. ಕನ್ನಡ ಕಲಿಕೆ, ಸಂಸ್ಕೃತಿ ಮತ್ತು ಶಿಲ್ಪಕಲೆ, ಪರಿಸರ ಮತ್ತು ವನ್ಯ ಜೀವನ ಕುರಿತ ಸಂವಹನಕಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಕನ್ನಡ ಭಾಷೆ ಹಾಗೂ ವ್ಯಾಕರಣವನ್ನು ಸುಲಭವಾಗಿ ಕಲಿಸುವ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಪರಿಸರ ವನ್ಯಜೀವನ ಕುರಿತು ಕನ್ನಡದಲ್ಲಿ ಸಾಹಿತ್ಯ ಕೃಷಿ ಮಾಡಿರುವ ಇವರು ವನ್ಯಪ್ರೇಮಿ ಕೆ.ಎಂ ಚಿಣ್ಣಪ್ಪ ಮತ್ತು ಡಾ. ಕೆ ಉಲ್ಲಾಸ್ ಅವರ ಅನುಭವ ಕಥನಗಳನ್ನ ನಿರೂಪಣೆ ಮಾಡಿದ್ದಾರೆ. ಇವರ ಕಾಡು ಕಲಿಸುವ ಪಾಠ ಕೃತಿಗೆ ವಿಜ್ಞಾನ ಸಾಹಿತ್ಯ ಪ್ರಕಾರದಲ್ಲಿ ೨೦೧೩ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿದೆ. ಸಂಸ್ಕೃತಿ ಹಾಗೂ ಶಿಲ್ಪಕಲೆಗಳ ಕುರಿತು ಅಧ್ಯಯನ ಹಾಗೂ ಸಾಹಿತ್ಯ ರಚನೆ ಮಾಡಿದ್ದಾರೆ. ಹಿರಿಯ ಸಾಹಿತಿಗಳು, ಜ್ಞಾನಪೀಠ ಪುರಸ್ಕೃತರ ಜೀವನ ಚಿತ್ರಣ ನೀಡುವ ಕೃತಿಗಳನ್ನು ರಚಿಸಿದ್ದಾರೆ. ಇವರು ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲದ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ೨೦ ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಇವರಿಗೆ ತಮ್ಮ ಸಾಹಿತ್ಯಕ್ಕಾಗಿ ಹತ್ತು ಹಲವು ಪ್ರಶಸ್ತಿಗಳು ಬಂದಿವೆ.