ಮಾನವ ಇತಿಹಾಸದಲ್ಲಿ ಕೆಲವು ಹಬ್ಬಗಳು ಕೇವಲ ಆಚರಣೆಯ ದಿನಗಳಾಗಿರುವುದಿಲ್ಲ; ಅವು ಜೀವನದ ಮೌಲ್ಯಗಳನ್ನು ನೆನಪಿಸುವ ಆತ್ಮೀಯ ಸಂದೇಶಗಳಾಗಿರುತ್ತವೆ. ಅಂತಹ ಮಹತ್ವಪೂರ್ಣ ಹಬ್ಬಗಳಲ್ಲಿ ಇಸ್ಲಾಮಿನ ಪವಿತ್ರ ಹಬ್ಬವಾದ ಈದುಲ್ ಅಝ್ಹಾ ಅಥವಾ ಬಕ್ರೀದ್ ಒಂದು. ಈ ಹಬ್ಬ ಕೇವಲ ಸಂಭ್ರಮ, ಉಡುಪು, ಆಹಾರ ಅಥವಾ ರಜಾದಿನದ ಆಚರಣೆಯಲ್ಲ; ಅದು ಭಕ್ತಿ, ತ್ಯಾಗ, ದಾನ, ಸಹಾನುಭೂತಿ ಮತ್ತು ಅಲ್ಲಾಹುವಿನ ಮೇಲಿನ ಸಂಪೂರ್ಣ ಶರಣಾಗತಿಯ ಪಾಠವನ್ನು ಕಲಿಸುವ ಆತ್ಮೀಯ ಮಹೋತ್ಸವವಾಗಿದೆ.
“ಅಝ್ಹಾ” ಎಂದರೆ ತ್ಯಾಗ. ಮನುಷ್ಯ ತನ್ನ ಆಸೆ, ಅಹಂಕಾರ ಮತ್ತು ಸ್ವಾರ್ಥವನ್ನು ಅಲ್ಲಾಹನ ಆದೇಶಕ್ಕಾಗಿ ತ್ಯಜಿಸುವ ಮಹೋನ್ನತ ಮನೋಭಾವವೇ ಈ ಹಬ್ಬದ ಆತ್ಮವಾಗಿದೆ. ಈದುಲ್ ಅಝ್ಹಾ ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಜೀವನವನ್ನು ಪರಿಶೀಲಿಸಲು, ತನ್ನ ಹೃದಯವನ್ನು ಶುದ್ಧಗೊಳಿಸಲು ಮತ್ತು ಮಾನವೀಯತೆಯನ್ನು ಪುನರ್ಜೀವಗೊಳಿಸಲು ಒಂದು ಅಪೂರ್ವ ಅವಕಾಶವನ್ನು ನೀಡುತ್ತದೆ. ಈದುಲ್ ಅಝ್ಹಾದ ಮೂಲದಲ್ಲಿ ನಿಂತಿರುವುದು ಪ್ರವಾದಿ ಇಬ್ರಾಹಿಂ (ಅ) ಅವರ ಅದ್ಭುತ ಜೀವನಗಾಥೆ. ಅವರು ಅಲ್ಲಾಹುವಿನ ಪ್ರಿಯ ಪ್ರವಾದಿಯಾಗಿದ್ದರೂ ಜೀವನದಲ್ಲಿ ಅನೇಕ ಕಠಿಣ ಪರೀಕ್ಷೆಗಳನ್ನು ಎದುರಿಸಿದರು. ತಮ್ಮ ಜನಾಂಗದ ವಿರೋಧ, ಅಗ್ನಿಪರೀಕ್ಷೆ, ಸ್ವದೇಶ ತ್ಯಾಗ, ಸಂತಾನಕ್ಕಾಗಿ ಮಾಡಿದ ದೀರ್ಘ ಪ್ರಾರ್ಥನೆ ಎಲ್ಲವೂ ಅವರ ಜೀವನವನ್ನು ಪರೀಕ್ಷಿಸಿತು. ಅಲ್ಲಾಹನು ಅವರಿಗೆ ವೃದ್ಧಾಪ್ಯದಲ್ಲಿ ಪುತ್ರನಾದ ಇಸ್ಮಾಯಿಲ್ (ಅ) ಅವರನ್ನು ಅನುಗ್ರಹಿಸಿದನು. ಅನೇಕ ವರ್ಷಗಳ ನಿರೀಕ್ಷೆಯ ಬಳಿಕ ದೊರೆತ ಆ ಪುತ್ರನನ್ನು ಪ್ರೀತಿಸುವುದು ಸಹಜ. ಆದರೆ ಅಲ್ಲಾಹನು ಕನಸಿನ ಮೂಲಕ ಅವರನ್ನು ಪರೀಕ್ಷಿಸಿದನು. “ನಿನ್ನ ಪುತ್ರನನ್ನು ನನ್ನ ಮಾರ್ಗದಲ್ಲಿ ಕುರ್ಬಾನಿ ಮಾಡು” ಎಂದು. ಮಾನವ ದೃಷ್ಟಿಯಿಂದ ಇದು ಅಸಾಧ್ಯವಾದ ಪರೀಕ್ಷೆ. ಆದರೆ ಪ್ರವಾದಿ ಇಬ್ರಾಹೀಂ (ಅ) ಅವರ ಭಕ್ತಿ ಅಷ್ಟು ದೃಢವಾಗಿತ್ತು; ಅವರು ತಮ್ಮ ಭಾವನೆಗಿಂತ ಅಲ್ಲಾಹನ ಆದೇಶಕ್ಕೆ ಆದ್ಯತೆ ನೀಡಿದರು. ಅತ್ಯಂತ ಆಶ್ಚರ್ಯವೆಂದರೆ, ಪುತ್ರ ಇಸ್ಮಾಯಿಲ್ (ಅ) ಕೂಡ ತಂದೆಗೆ ವಿಧೇಯನಾಗಿ:
“ಅಪ್ಪಾ! ನಿಮಗೆ ಆದೇಶಿಸಲಾದುದನ್ನು ನೆರವೇರಿಸಿ. ಅಲ್ಲಾಹ ಇಚ್ಛಿಸಿದರೆ ನನ್ನನ್ನು ತಾಳ್ಮೆಯವರಲ್ಲಿ ಕಾಣುವಿರಿ” ಎಂದು ಹೇಳಿದರು.
ತಂದೆ-ಮಗನ ಈ ಭಕ್ತಿ ಮತ್ತು ಶರಣಾಗತಿಯನ್ನು ಕಂಡು ಅಲ್ಲಾಹನು ಇಸ್ಮಾಯಿಲ್ (ಅ) ಅವರ ಬದಲು ಒಂದು ಪ್ರಾಣಿಯನ್ನು ಕುರ್ಬಾನಿಯಾಗಿ ಸ್ವೀಕರಿಸಿದನು. ಈ ಘಟನೆ ಮಾನವ ಇತಿಹಾಸದಲ್ಲಿ ತ್ಯಾಗ ಮತ್ತು ವಿಧೇಯತೆಯ ಶಾಶ್ವತ ಸಂಕೇತವಾಗಿ ಉಳಿಯಿತು. ಕುರ್ಬಾನಿಯ ಆತ್ಮ ಕೇವಲ ಪ್ರಾಣಿಹತ್ಯೆಯಲ್ಲ ಇಂದು ಕೆಲವರು ಕುರ್ಬಾನಿಯನ್ನು ಕೇವಲ ಒಂದು ಆಚರಣೆಯಾಗಿ ಮಾತ್ರ ನೋಡುತ್ತಾರೆ. ಆದರೆ ಇಸ್ಲಾಂ ಕುರ್ಬಾನಿಯ ಮೂಲಕ ಕಲಿಸುವ ಸಂದೇಶ ಬಹಳ ಆಳವಾಗಿದೆ.
ಕುರ್ಬಾನಿ ಎಂದರೆ: * ನಮ್ಮೊಳಗಿನ ಅಹಂಕಾರವನ್ನು ಕೊಲ್ಲುವುದು * ಸ್ವಾರ್ಥವನ್ನು ತ್ಯಜಿಸುವುದು * ಲೋಭ ಮತ್ತು ದ್ವೇಷವನ್ನು ದೂರ ಮಾಡುವುದು * ಅಲ್ಲಾಹನ ಆದೇಶಕ್ಕೆ ಶರಣಾಗುವುದು * ಬಡವರ ಹಸಿವು ಮತ್ತು ನೋವನ್ನು ಅರ್ಥಮಾಡಿಕೊಳ್ಳುವುದು ಕುರ್ಬಾನಿಯ ಮಾಂಸವನ್ನು ಬಡವರಿಗೆ, ಬಂಧುಗಳಿಗೆ ಮತ್ತು ನೆರೆಹೊರೆಯವರಿಗೆ ಹಂಚುವ ಮೂಲಕ ಸಮಾಜದಲ್ಲಿ ಪ್ರೀತಿ ಮತ್ತು ಸಹೋದರತ್ವವನ್ನು ಬೆಳೆಸುವುದು ಇಸ್ಲಾಮಿನ ಉದ್ದೇಶವಾಗಿದೆ. ಅಲ್ಲಾಹನಿಗೆ ನಮ್ಮ ಪ್ರಾಣಿಯ ಮಾಂಸ ಅಥವಾ ರಕ್ತ ತಲುಪುವುದಿಲ್ಲ; ನಮ್ಮ ಭಕ್ತಿ, ನಿಯ್ಯತ್ ಮತ್ತು ತಕ್ವಾ ತಲುಪುತ್ತದೆ ಎಂಬುದನ್ನು ಪವಿತ್ರ ಕುರ್ಆನ್ ಸ್ಪಷ್ಟಪಡಿಸುತ್ತದೆ.
ಈದುಲ್ ಅಝ್ಹಾ ಮತ್ತು ಮಾನವ ಸಮಾನತೆ : ಈ ಹಬ್ಬದ ಅತ್ಯಂತ ಸುಂದರ ಅಂಶವೆAದರೆ ಸಮಾನತೆಯ ಸಂದೇಶ. ಈದ್ ನಮಾಝಿನಲ್ಲಿ ಶ್ರೀಮಂತ, ಬಡ, ಅಧಿಕಾರಿಯು, ಕಾರ್ಮಿಕನು-ಎಲ್ಲರೂ ಒಂದೇ ಸಾಲಿನಲ್ಲಿ ನಿಂತು ಅಲ್ಲಾಹನ ಮುಂದೆ ತಲೆಬಾಗುತ್ತಾರೆ. ಇದು ಇಸ್ಲಾಂ ಸಾರುವ ಮಹಾನ್ ಸಂದೇಶ: “ಮಾನವನ ಮೌಲ್ಯ ಅವನ ಹಣದಲ್ಲಲ್ಲ; ಅವನ ತಕ್ವಾದಲ್ಲಿದೆ.” ಹಜ್ ಯಾತ್ರೆಯಲ್ಲಿ ಲಕ್ಷಾಂತರ ಜನರು ಒಂದೇ ರೀತಿಯ ಇಹ್ರಾಮ್ ಧರಿಸಿ ಒಂದೇ ಧ್ವನಿಯಲ್ಲಿ “ಲಬ್ಬೈಕ್ ಅಲ್ಲಾಹುಮ್ಮ ಲಬ್ಬೈಕ್” ಎಂದು ಘೋಷಿಸುವ ದೃಶ್ಯ ಮಾನವ ಸಮಾನತೆಯ ಅಪೂರ್ವ ಉದಾಹರಣೆ.
ಸಮಾಜಕ್ಕೆ ಈದುಲ್ ಅಝ್ಹಾ ನೀಡುವ ಪಾಠಗಳು : ದಾನ ಮತ್ತು ಹಂಚಿಕೆ : ಈ ಹಬ್ಬವು ಬಡವರ ಮನೆಗೂ ಸಂತೋಷ ತಲುಪಬೇಕು ಎಂದು ಕಲಿಸುತ್ತದೆ. ನಮ್ಮ ಸಂತೋಷದಲ್ಲಿ ಇತರರ ಪಾಲು ಇರಬೇಕು ಎಂಬ ಮನೋಭಾವವನ್ನು ಬೆಳೆಸುತ್ತದೆ.
ಕುಟುಂಬ ಬಾಂಧವ್ಯ : ಈದ್ ಕುಟುಂಬಗಳನ್ನು ಒಂದಾಗಿಸುತ್ತದೆ. ದೂರವಾದ ಸಂಬAಧಗಳನ್ನು ಹತ್ತಿರ ಮಾಡುತ್ತದೆ. ಕ್ಷಮೆ, ಪ್ರೀತಿ ಮತ್ತು ಬಾಂಧವ್ಯದ ದಿನವಾಗಿ ಈ ಹಬ್ಬ ರೂಪುಗೊಳ್ಳುತ್ತದೆ.
ಆತ್ಮಶುದ್ಧಿ : ಹೊರಗಿನ ಆಚರಣೆಯಷ್ಟೇ ಮುಖ್ಯವಲ್ಲ; ಒಳಮನಸ್ಸಿನ ಶುದ್ಧಿಯೂ ಮುಖ್ಯ ಎಂಬುದನ್ನು ಈದುಲ್ ಅಝ್ಹಾ ನೆನಪಿಸುತ್ತದೆ.
ವಿಧೇಯತೆ : ಅಲ್ಲಾಹನ ಆದೇಶದ ಮುಂದೆ ನಮ್ಮ ಇಚ್ಛೆಯನ್ನು ಬದಿಗಿರಿಸುವುದೇ ನಿಜವಾದ ಇಮಾನಿನ ಲಕ್ಷಣ ಎಂಬ ಪಾಠವನ್ನು ಇದು ಕಲಿಸುತ್ತದೆ. ನವ ತಲೆಮಾರಿನ ಯುವ ಪೀಳಿಗೆಯೊಂದಿಗೆ ಇಂದಿನ ಸಮಾಜದಲ್ಲಿ ಮನುಷ್ಯನು ತಂತ್ರಜ್ಞಾನದಲ್ಲಿ ಮುಂದುವರಿದಿದ್ದರೂ ಮನಸ್ಸಿನಲ್ಲಿ ಒಂಟಿತನ, ಅಹಂಕಾರ ಮತ್ತು ಸ್ವಾರ್ಥ ಹೆಚ್ಚುತ್ತಿದೆ. ಹಣಕ್ಕಾಗಿ ಸಂಬAಧಗಳು ಮುರಿಯುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶನ ಹೆಚ್ಚುತ್ತಿದೆ; ಆದರೆ ಮಾನವೀಯತೆ ಕಡಿಮೆಯಾಗುತ್ತಿದೆ.
ಈ ಪರಿಸ್ಥಿತಿಯಲ್ಲಿ ಈದುಲ್ ಅಝ್ಹಾ ನಮಗೆ ಅತ್ಯಂತ ಅಗತ್ಯವಾದ ಸಂದೇಶವನ್ನು ನೀಡುತ್ತದೆ:
* ತ್ಯಾಗವಿಲ್ಲದ ಪ್ರೀತಿ ನಿಜವಲ್ಲ * ದಯೆಯಿಲ್ಲದ ಧರ್ಮ ಅಪೂರ್ಣ * ಮಾನವೀಯತೆಯಿಲ್ಲದ ಅಭಿವೃದ್ಧಿ ಅಪಾಯಕಾರಿ ಈದ್ ಕೇವಲ ಹೊಸ ಬಟ್ಟೆ ಧರಿಸುವ ದಿನವಾಗಬಾರದು; ಅದು ಹೊಸ ಮನಸ್ಸು ಹೊಂದುವ ದಿನವಾಗಬೇಕು. ಇಂದಿನ ಯುವಜನತೆ ಸಮಾಜದ ಶಕ್ತಿ. ಆದರೆ ಅನೇಕರು ಸಾಮಾಜಿಕ ಮಾಧ್ಯಮಗಳ ಪ್ರದರ್ಶನ, ವ್ಯರ್ಥ ಖರ್ಚು ಮತ್ತು ಸ್ಪರ್ಧಾತ್ಮಕ ಜೀವನದಲ್ಲಿ ತೊಡಗಿಕೊಂಡಿದ್ದಾರೆ. ಈದುಲ್ ಅಝ್ಹಾ ಯುವಕರಿಗೆ ಹೇಳುವುದು:
* ಪ್ರದರ್ಶನಕ್ಕಿಂತ ಸೇವೆ ಮುಖ್ಯ * ಖರ್ಚಿಗಿಂತ ಹಂಚಿಕೆ ದೊಡ್ಡದು * ಫೋಟೋಗಳಿಗಿಂತ ಮಾನವೀಯತೆ ಅಮೂಲ್ಯ * ಧರ್ಮವೆಂದರೆ ಕೇವಲ ಆಚರಣೆ ಅಲ್ಲ; ಅದು ವ್ಯಕ್ತಿತ್ವ ಯುವಕರು ಈ ಹಬ್ಬದ ಆತ್ಮವನ್ನು ಅರ್ಥಮಾಡಿಕೊಂಡರೆ ಸಮಾಜದಲ್ಲಿ ದೊಡ್ಡ ಬದಲಾವಣೆ ತರಬಹುದು.
ಅರ್ಥಪೂರ್ಣ ಈದ್ ಆಚರಣೆಗೆ ಒಂದು ಕರೆ: ಈ ಬಕ್ರೀದ್ ನಾವು ಕೇವಲ ಆಚರಣೆಗಳಲ್ಲಿ ಸೀಮಿತವಾಗದೆ ಅದರ ನಿಜವಾದ ಸಂದೇಶವನ್ನು ಬದುಕಿನಲ್ಲಿ ಅಳವಡಿಸೋಣ.
* ಬಡವರ ಮನೆಗೆ ಸಂತೋಷ ತಲುಪಿಸೋಣ * ಕುಟುಂಬದಲ್ಲಿ ಒಗ್ಗಟ್ಟು ಬೆಳೆಸೋಣ * ದ್ವೇಷ ಮತ್ತು ಅಹಂಕಾರವನ್ನು ತ್ಯಜಿಸೋಣ * ಸಮಾಜದಲ್ಲಿ ಪ್ರೀತಿ ಮತ್ತು ಸಹೋದರತ್ವ ಹರಡಿಸೋಣ * ಈದ್ ಅನ್ನು ಪ್ರದರ್ಶನದ ಹಬ್ಬವಲ್ಲ, ಮಾನವೀಯತೆಯ ಹಬ್ಬವನ್ನಾಗಿಸೋಣ ಈದುಲ್ ಅಝ್ಹಾ ಮುಬಾರಕ್ !
-ಶಾಫಿ ಅನ್ವÀರಿ, ಕೊಡಗರಹಳ್ಳಿ