ಸೋಮವಾರಪೇಟೆ, ಮೇ ೨೫: ಸರ್ಕಾರದ ವಶದಲ್ಲಿರುವ ರೂ. ೩.೫೦ ಕೋಟಿ ಹಣ ಹಾಗೂ ಮೈಸೂರಿನಲ್ಲಿರುವ ದಿ ಮೈಸೂರು ಕಾಫಿ ಸಂಸ್ಕರಣಾ ಮಾರಾಟ ಮತ್ತು ಉಗ್ರಾಣ ಸಹಕಾರ ಸಂಘಕ್ಕೆ (ಎಂ.ಸಿ.ಪಿ.ಸಿ.ಎಸ್.) ಸೇರಿರುವ ಮೂರೂವರೆ ಎಕರೆ ಜಾಗವನ್ನು ಮರಳಿ ಸಂಘಕ್ಕೆ ಪಡೆಯಲು ಸರಕಾರದ ಮಟ್ಟದಲ್ಲಿ ಕ್ರಮ ವಹಿಸಲಾಗುವುದು ಎಂದು ದಿ ಮೈಸೂರು ಕಾಫಿ ಸಂಸ್ಕರಣಾ ಮಾರಾಟ ಮತ್ತು ಉಗ್ರಾಣ ಸಹಕಾರ ಸಂಘದ ಅಧ್ಯಕ್ಷರೂ ಆಗಿರುವ ವೀರಾಜಪೇಟೆ ಕ್ಷೇತ್ರದ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ತಿಳಿಸಿದರು.
ಪಟ್ಟಣ ಸಮೀಪದ ಕಾರೇಕೊಪ್ಪದ ಬಳಿಯಿರುವ ಪಿ.ಎನ್.ಹೆರಿಟೇಜ್ ಸಭಾಂಗಣದಲ್ಲಿ ನಡೆದ ದಿ ಮೈಸೂರು ಕಾಫಿ ಸಂಸ್ಕರಣಾ ಮಾರಾಟ ಮತ್ತು ಉಗ್ರಾಣ ಸಹಕಾರ ಸಂಘದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾಫಿ ಬೆಳೆಗಾರರು ಅನೇಕ ಸಮಸ್ಯೆಗಳ ನಡುವೆಯೂ ತೋಟ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆ. ಕಾಫಿ ಬೆಳೆಗೆ ತಗುಲುವ ರೋಗಗಳು, ರಸಗೊಬ್ಬರ, ಕ್ರಿಮಿನಾಶಕ, ಉತ್ಪಾದನಾ ವೆಚ್ಚಗಳು ಅಧಿಕವಾಗುತ್ತಿರುವ ನಡುವೆಯೂ ಕಾಫಿ ಕೃಷಿಯನ್ನು ಉಳಿಸಿಕೊಂಡು ಬರುತ್ತಿದ್ದಾರೆ ಎಂದು ಪೊನ್ನಣ್ಣ ಹೇಳಿದರು.
ವನ್ಯಪ್ರಾಣಿಗಳ ಹಾವಳಿ, ಕಾಡಾನೆ ಹಾವಳಿ ತಡೆಗೆ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಾಡಾನೆಗಳ ಹಾವಳಿಯು ಕಾಫಿ ತೋಟ ನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆ ಕಾಡಾನೆ ಹಾವಳಿ ತಡೆಗೆ ಸರ್ಕಾರ ಗಂಭೀರವಾಗಿ ಚಿಂತನೆ ಹರಿಸಿದೆ. ಬೆಳೆಗಾರರ ಸಮಸ್ಯೆಗಳನ್ನು ಆದ್ಯತೆಯ ಮೇಲೆ ಸರ್ಕಾರ ಬಗೆಹರಿಸುತ್ತಿದೆ ಎಂದು ಪೊನ್ನಣ್ಣ ತಿಳಿಸಿದರು.
ಸರ್ಕಾರವು ಸದಾ ಕಾಫಿ ಬೆಳೆಗಾರರ ಹಿತ ಕಾಯಲು ಬದ್ಧವಾಗಿದೆ ಎಂದ ಅವರು, ದಿ ಮೈಸೂರು ಕಾಫಿ ಸಂಸ್ಕರಣಾ ಮಾರಾಟ ಮತ್ತು ಉಗ್ರಾಣ ಸಹಕಾರ ಸಂಘವನ್ನು ಪುನಶ್ಚೇತನಗೊಳಿಸಲು ಎಲ್ಲಾ ರೀತಿಯಲ್ಲೂ ಶ್ರಮಿಸಲಾಗುವುದು ಎಂದರು. ಈ ಹಿಂದೆ ಕೋಪರೇಟಿವ್ ಅಕಾಡೆಮಿ ಮಾಡಲು ಮೈಸೂರಿನಲ್ಲಿರುವ ಸಹಕಾರ ಸಂಘಕ್ಕೆ ಸೇರಿದ ಮೂರೂವರೆ ಏಕರೆ ಜಾಗವನ್ನು ಸರ್ಕಾರ ತನ್ನ ಸುಪರ್ದಿಗೆ ಪಡೆದುಕೊಂಡಿದೆ. ಈವರೆಗೆ ಅಕಾಡೆಮಿ ಸ್ಥಾಪನೆಯಾಗದ ಹಿನ್ನೆಲೆ ಮರಳಿ ಸಂಘಕ್ಕೆ ಜಾಗವನ್ನು ನೀಡುವ ಬಗ್ಗೆ ಕ್ರಮವಹಿಸಲಾಗುತ್ತಿದೆ. ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ. ಶೀಘ್ರದಲ್ಲಿಯೇ ಜಾಗವನ್ನು ಸಹಕಾರ ಸಂಘದ ವಶಕ್ಕೆ ಪಡೆಯಲು ಕ್ರಮ ವಹಿಸಲಾಗುವುದು ಎಂದರು. ಇದರೊಂದಿಗೆ ಸರ್ಕಾರದ ಬಳಿ ಸಂಘಕ್ಕೆ ಸೇರಿದ ೩.೫೦ ಕೋಟಿ ಹಣವಿದ್ದು, ಇದನ್ನೂ ಸಹ ಮರಳಿ ಸಂಘಕ್ಕೆ ತರಲು ಪ್ರಯತ್ನ ಸಾಗಿದೆ ಎಂದು ಪೊನ್ನಣ್ಣ ತಿಳಿಸಿದರು. ಸಂಘದ ಬೆಳವಣಿಗೆಗೆ ನಿರ್ದೇಶರು ಹಾಗೂ ಸದಸ್ಯರುಗಳು ಕೈಜೋಡಿಸಬೇಕೆಂದು ಮನವಿ ಮಾಡಿದರು.
ವೇದಿಕೆಯಲ್ಲಿ ದಿ ಮೈಸೂರು ಕಾಫಿ ಸಂಸ್ಕರಣಾ ಮಾರಾಟ ಮತ್ತು ಉಗ್ರಾಣ ಸಹಕಾರ ಸಂಘದ ಉಪಾಧ್ಯಕ್ಷ ಜಿ.ಎಸ್.ಪ್ರಭುದೇವ್, ನಿರ್ದೇಶಕರಾದ ನಂದಾ ಸುಬ್ಬಯ್ಯ, ಕೊಲ್ಲಚಂಡ ಸುಬ್ರಮಣಿ, ಸಿ.ಕೆ. ನಂಜಪ್ಪ, ಮನು ಮುತ್ತಪ್ಪ, ಕೆ.ಎಸ್. ದಿನೇಶ್, ಎನ್.ಯು. ಚಲನ್ ಕುಮಾರ್, ಐ.ವಿ. ಶಂಕರೇಗೌಡ, ಬಿ.ಎಸ್. ಪ್ರತಾಪ್, ಹೆಚ್.ಎಂ. ರಾಜಶೇಖರ್, ಉಮೇಶ್ ರಾಜೇ ಅರಸ್, ಸಿ.ಎಂ. ಕಾವೇರಿಯಮ್ಮ, ಎಸ್.ಪಿ. ಪ್ರಸನ್ನ, ಕಾಫಿ ಮಂಡಳಿಯ ಅಪ್ಪಯ್ಯ, ಸಹಕಾರ ಸಂಘದ ಜಂಟಿ ನಿಬಂಧಕ ಪ್ರತಾಪ್ ರೆಡ್ಡಿ ಇದ್ದರು. ಮಾಸಿಕ ಸಭೆಯ ನಂತರ ನಡೆದ ಕಾಫಿ ಬೆಳೆ ಕುರಿತ ಕಾರ್ಯಾಗಾರದಲ್ಲಿ ಹಿರಿಯ ಕಾಫಿ ಬೆಳೆಗಾರರಾದ ಬೋಸ್ ಮಂದಣ್ಣ, ನಂದಾ ಬೆಳ್ಯಪ್ಪ, ಕೆ.ಪಿ. ಪ್ರವೀಣ್ ಕುಮಾರ್, ಕೆ.ಪಿ. ಚಂದ್ರಕಲಾ, ತನ್ಮಯಿ ಪ್ರವೀಣ್, ಪ್ರದೀಪ್ ಪೂವಯ್ಯ, ಅಜ್ಜಿಕುಟ್ಟೀರ ತೇಜ, ವಿಶ್ವ ಮಡಿಕೇರಿ, ಕಾಫಿ ಮಂಡಳಿಯ ಡಾ. ಅಪ್ಪಯ್ಯ ಅವರುಗಳು ಭಾಗವಹಿಸಿ, ಕಾಫಿ ಕೃಷಿಯ ಸಮಸ್ಯೆ, ಮಾರುಕಟ್ಟೆ, ಗುಣಮಟ್ಟ ಕಾಯ್ದುಕೊಳ್ಳುವುದು, ಕಡಿಮೆ ಖರ್ಚಿನಲ್ಲಿ ಅಧಿಕ ಉತ್ಪಾದನೆ, ಸುಧಾರಿಕ ಯಂತ್ರೋಪಕರಣಗಳ ಬಳಕೆಗಳ ಬಗ್ಗೆ ವಿಚಾರ ಮಂಡನೆ ಮಾಡಿದರು.