ಗೋಣಿಕೊಪ್ಪ, ಮೇ ೨೫: ಬೇಗೂರು ಆಲೀರ ಕುಟುಂಬಸ್ಥರ ಸೇವಾ ಸಂಘದ ವತಿಯಿಂದ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣಗೊಂಡ ಆಲೀರ ಕುಟುಂಬದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭ ಬೇಗೂರು ಗ್ರಾಮದಲ್ಲಿರುವ ಸಂಘದ ಕಚೇರಿಯಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಪವಿಲ್ ಅಧ್ಯಕ್ಷತೆಯಲ್ಲಿ ಮಾಪಿಳ್ಳೆತೋಡಿನ ಜುಮಾ ಮಸೀದಿಯ ತಕ್ಕ ಮುಖ್ಯಸ್ಥ ಆಲೀರ ಕುಟ್ಟಿ ಅಲಿ, ಕಾಟ್ರಕೊಲ್ಲಿ ಜುಮಾ ಮಸೀದಿಯ ತಕ್ಕ ಮುಖ್ಯಸ್ಥ ಆಲೀರ ಎರ್ಮು ಹಾಜಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ೨೦೨೫-೨೬ ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣಗೊಂಡ ಕುಟುಂಬದ ೧೮ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಸಂಘದ ಕಾನೂನು ಸಲಹೆಗಾರ ಬಶೀರ್ ಅಹ್ಸನಿ, ಸಂಘದ ಉಪಾಧ್ಯಕ್ಷ ಅಬ್ದುಲ್ ಅಹಮದ್, ಕಾರ್ಯದರ್ಶಿ ಅಲ್ವಿ, ಕ್ರೀಡಾ ಸಮಿತಿಯ ಕಾರ್ಯದರ್ಶಿ ನಸೀರ್, ಸಂಘದ ಪದಾಧಿಕಾರಿಗಳು, ಆಲೀರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.